ರಾಜ್ಯದಲ್ಲಿ ಕೊರೋನಾ ರಣಕೇಕೆ: 16 ಜನ ಬಲಿ|  ಮೂರೂವರೆ ತಿಂಗಳ ಬಳಿಕ ನಿನ್ನೆ ಗರಿಷ್ಠ ಸಾವು| 2792 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆ

ಬೆಂಗಳೂರು(ಮಾ.30): ರಾಜ್ಯದಲ್ಲಿ ಕೊರೋನಾ ಸೋಂಕು ರಣ ಕೇಕೆ ಹಾಕಿದ್ದು, ಸೋಮವಾರ ಒಂದೇ ದಿನ 16 ಮಂದಿಯನ್ನು ಬಲಿ ಪಡೆದಿದೆ. ಮೂರೂವರೆ ತಿಂಗಳ ಬಳಿಕ ರಾಜ್ಯದಲ್ಲಿ ಒಂದೇ ದಿನ ಇಷ್ಟೊಂದು ಮಂದಿ ಸೋಂಕಿಗೆ ಬಲಿಯಾಗುತ್ತಿರುವುದು ಇದೇ ಮೊದಲು.

ಡಿ.11ರಂದು 16 ಮಂದಿ ಸಾವಿಗೀಡಾದ ಬಳಿಕ ಮೃತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ ಈಗ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ, ರಾಜ್ಯದಲ್ಲಿ ಸೋಮವಾರ 2,792 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಭಾನುವಾರ ಐದೂವರೆ ತಿಂಗಳ ಬಳಿಕ 3000 ಪ್ರಕರಣ ವರದಿಯಾಗಿದ್ದವು. ಅದಕ್ಕೆ ಹೋಲಿಸಿದರೆ ಸೋಮವಾರ ಸೋಂಕು ಕಡಿಮೆಯಾಗಿದೆ.

ಕಳೆದ ಆರು ದಿನಗಳಿಗೆ ಹೋಲಿಸಿದರೆ ಪರೀಕ್ಷೆ ಪ್ರಮಾಣದಲ್ಲಿ ಸುಮಾರು 20 ಸಾವಿರ ಕಡಿಮೆಯಾಗಿದೆ. ಇದು ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಲು ಕಾರಣವಾಗಿದೆ.

ದೇಶದಲ್ಲಿ 68020 ಕೇಸ್‌: 5.5 ತಿಂಗಳಲ್ಲೇ ಗರಿಷ್ಠ

ದೇಶದಲ್ಲಿ ಕೊರೋನಾ ಪ್ರಕರಣಗಳ ಸ್ಫೋಟ ಮುಂದುವರಿದಿದ್ದು, ಸೋಮವಾರ 68020 ಕೇಸುಗಳು ಪತ್ತೆಯಾಗಿವೆ. ಒಂದೇ ದಿನ ಇಷ್ಟುಪ್ರಕರಣ ದೃಢಪಡುತ್ತಿರುವುದು ಐದೂವರೆ ತಿಂಗಳ ಬಳಿಕ ಇದೇ ಮೊದಲು. ಇದೇ ವೇಳೆ, 291 ಮಂದಿ ಸಾವಿಗೀಡಾಗಿದ್ದಾರೆ.