ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಂದ ಬೆಳಿಗ್ಗೆ 5:30ರವರೆಗೆ ಧಾರಾಕಾರ ಮಳೆ ಸುರಿದಿದ್ದು, 104 ಮಿಲಿಮೀಟರ್ ಮಳೆ ದಾಖಲಾಗಿದೆ. ಕಳೆದ ಒಂದು ದಶಕದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚು ಮಳೆ ಇದಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ನಾಲ್ಕು ದಿನಗಳವರೆಗೆ ಗುಡುಗು ಸಹಿತ ಭಾರೀ ಮಳೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದು, ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರು (ಮೇ 19): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಂದ ಬೆಳಿಗ್ಗೆ 5:30ರವರೆಗೆ ಧಾರಾಕಾರ ಮಳೆ ಸುರಿದಿದ್ದು, 104 ಮಿಲಿಮೀಟರ್ ಮಳೆ ದಾಖಲಾಗಿದೆ. ಕಳೆದ ಒಂದು ದಶಕದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚು ಮಳೆ ಇದಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ನಾಲ್ಕು ದಿನಗಳವರೆಗೆ ಗುಡುಗು ಸಹಿತ ಭಾರೀ ಮಳೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದು, ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಿದೆ.
ಭಾರೀ ಮಳೆಗೆ ಶಾಂತಿನಗರ ಸಿಸಿಬಿ ಕಚೇರಿ ಫೈಲ್ ನಾಶ!
ಶಾಂತಿನಗರದ ಸಿಸಿಬಿ ಕಚೇರಿಯ ಗ್ರೌಂಡ್ ಫ್ಲೋರ್‌ಗೆ ಮಳೆ ನೀರು ನುಗ್ಗಿದ್ದು, 8ಕ್ಕೂ ಹೆಚ್ಚು ಕೊಠಡಿಗಳಲ್ಲಿರುವ ಕೇಸ್ ಫೈಲ್‌ಗಳು ಹಾನಿಗೊಳಗಾಗಿವೆ. ಮಳೆ ನೀರಿನಿಂದಾಗಿ ದಾಖಲೆಗಳು ನಾಶವಾಗಿದ್ದು, ತನಿಖಾ ಕಾರ್ಯಾಚರಣೆಗೆ ತೊಂದರೆಯಾಗಿದೆ. ಅಧಿಕಾರಿಗಳು ಹಾನಿಯ ಮೌಲ್ಯಮಾಪನ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ದಾಖಲೆಯ ಮಳೆ: ಚಾಮರಾಜನಗರ ಟಾಪ್!
ರಾಜ್ಯದಾದ್ಯಂತ ಭಾರೀ ಮಳೆಯಾಗಿದ್ದು, ಚಾಮರಾಜನಗರದ ಮಂಗಳದಲ್ಲಿ 130 ಮಿ.ಮೀ. ಮಳೆ ದಾಖಲಾಗಿದೆ. ಕೆಂಗೇರಿಯಲ್ಲಿ 132 ಮಿ.ಮೀ. ಮಳೆ ದಾಖಲಾಗಿದೆ, ಇದು ನಗರದಲ್ಲಿ ಅತಿ ಹೆಚ್ಚು. ರಾಮನಗರದ ನಾರಾಯಣಪುರದಲ್ಲಿ 115 ಮಿ.ಮೀ., ಕೋಲಾರದ ಸಂತೆಹಳ್ಳಿಯಲ್ಲಿ 96 ಮಿ.ಮೀ., ಮೈಸೂರಿನ ಸಿಂಧುವಳ್ಳಿಯಲ್ಲಿ 87 ಮಿ.ಮೀ., ಮಂಡ್ಯದ ಹೊಸಹಳ್ಳಿಯಲ್ಲಿ 77 ಮಿ.ಮೀ. ಮಳೆ ದಾಖಲಾಗಿದೆ.
ಬೆಂಗಳೂರಿನ ಜಲಾವೃತ: ಸಂಚಾರಕ್ಕೆ ತೀವ್ರ ತೊಂದರೆ
ಬೆಂಗಳೂರಿನ ಹಲವು ಭಾಗಗಳು ಜಲಾವೃತಗೊಂಡಿದ್ದು, ಕೆಂಗೇರಿಯಲ್ಲಿ 132 ಮಿ.ಮೀ. ಮಳೆ ದಾಖಲಾಗಿದೆ, ಇದು ನಗರದಲ್ಲಿ ಅತಿ ಹೆಚ್ಚು. ಕೋರಮಂಗಲ (96.5 ಮಿ.ಮೀ.), HAL ಏರ್‌ಪೋರ್ಟ್ (93 ಮಿ.ಮೀ.), ಕೊಟ್ಟಿಗೆಪಾಳ್ಯ (92.5 ಮಿ.ಮೀ.), ವಿದ್ಯಾಪೀಠ (92.5 ಮಿ.ಮೀ.), ಮಾರತ್ತಹಳ್ಳಿ (91.5 ಮಿ.ಮೀ.) ಸೇರಿದಂತೆ 20 ವಾರ್ಡ್‌ಗಳಲ್ಲಿ 70 ಮಿ.ಮೀ.ಗಿಂತಲೂ ಹೆಚ್ಚು ಮಳೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಳೆ: ಸಂಚಾರ ನಿಧಾನಗತಿ ಸ್ಥಳಗಳು
- ಬೆಂಗಳೂರು ಟ್ರಾಫಿಕ್ ಪೊಲೀಸ್ ವರದಿಯ ಪ್ರಕಾರ, ಈ ಕೆಳಗಿನ ಸ್ಥಳಗಳಲ್ಲಿ ಮಳೆ ನೀರು ನಿಂತಿರುವುದರಿಂದ ಸಂಚಾರ ನಿಧಾನಗತಿಯಲ್ಲಿದೆ:
- ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬೆಳ್ಳಂದೂರು ಮತ್ತು ಅಗರ ಕಡೆಗೆ
- ವಿದ್ಯಾಶಿಲ್ಪ ರೈಲ್ವೆ ಅಂಡರ್‌ಪಾಸ್‌ನಿಂದ ಏರ್‌ಪೋರ್ಟ್ ಕಡೆಗೆ
- HSR ಲೇಔಟ್ ಡಿಪೋದಿಂದ 14ನೇ ಮುಖ್ಯ ರಸ್ತೆ ಕಡೆಗೆ
- ಕನಕಪುರ ಮುಖ್ಯ ರಸ್ತೆಯಿಂದ ಕೋಣನಕುಂಟೆ ಕಡೆಗೆ
- ಶಿರಸಿ ವೃತ್ತದ ಬಳಿ ಮರ ಬಿದ್ದಿದ್ದರಿಂದ ಉಮಾ ಥಿಯೇಟರ್ ಕಡೆಗೆ
- ಪ್ರಸನ್ನ ಚಿತ್ರಮಂದಿರದಿಂದ ಬಸವ ಮಂಟಪ ಸಿಗ್ನಲ್ ಕಡೆಗೆ
- ಸೋನಿ ವರ್ಲ್ಡ್ ಸಿಗ್ನಲ್‌ನಿಂದ ಮಹಾರಾಜ ಸಿಗ್ನಲ್ ಕಡೆಗೆ
- ಬೇಲಿಮಠ ಜಂಕ್ಷನ್‌ನಿಂದ ಬಿನ್ನಿಮಿಲ್ ಕಡೆಗೆ
- ಆದರ್ಶ ಜಂಕ್ಷನ್‌ನಿಂದ ರಾಮಯ್ಯ ಜಂಕ್ಷನ್ ಕಡೆಗೆ
- ಶಾಹಿ ಗಾರ್ಮೆಂಟ್ಸ್‌ನಿಂದ ಹುಳಿಮಾವು ಗೇಟ್ ಕಡೆಗೆ
- ರಾಷ್ಟ್ರೋತ್ಥಾನ ಸ್ಕೂಲ್ ಜಂಕ್ಷನ್‌ನಿಂದ ಕ್ಲೌಡ್-9 ಆಸ್ಪತ್ರೆ ಕಡೆಗೆ
ಹವಾಮಾನ ಇಲಾಖೆಯ ಎಚ್ಚರಿಕೆ
IMDಯ ಪ್ರಕಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ರಾತ್ರಿ ಅಥವಾ ಸಂಜೆಯ ನಂತರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಸಾರ್ವಜನಿಕರಿಗೆ ಸೂಚನೆ
ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿರುವುದರಿಂದ ಅನಗತ್ಯ ಪ್ರಯಾಣವನ್ನು ತಪ್ಪಿಸಿ. ತುರ್ತು ಸಂದರ್ಭದಲ್ಲಿ 1533 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ.


