ನಗರದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ನಿವಾಸಿಗಳ ಸಮಸ್ಯೆ ಪರಿಹರಿಸಲು ತಕ್ಷಣ ವಾರ್ಡ್‌ವಾರು ಕುಂದು ಕೊರತೆ ಘಟಕ ಆರಂಭಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿರುವ ಹೈಕೋರ್ಟ್‌, ಪ್ರತಿ ವಾರ್ಡ್‌ ಎಂಜಿನಿಯರ್‌ಗಳು ನಿವಾಸಿಗಳ ಕುಂದುಕೊರತೆ ಆಲಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ. 

ಬೆಂಗಳೂರು (ಸೆ.08): ನಗರದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ನಿವಾಸಿಗಳ ಸಮಸ್ಯೆ ಪರಿಹರಿಸಲು ತಕ್ಷಣ ವಾರ್ಡ್‌ವಾರು ಕುಂದು ಕೊರತೆ ಘಟಕ ಆರಂಭಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿರುವ ಹೈಕೋರ್ಟ್‌, ಪ್ರತಿ ವಾರ್ಡ್‌ ಎಂಜಿನಿಯರ್‌ಗಳು ನಿವಾಸಿಗಳ ಕುಂದುಕೊರತೆ ಆಲಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ. 

ನಗರದ ರಸ್ತೆಗಳ ಗುಂಡಿ ಮುಚ್ಚುವ ಸಂಬಂಧ ವಿಜಯನ್‌ ಮೆನನ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಇದೇ ವೇಳೆ 2022ರ ಜು.26ರ ನಂತರ ಈವರೆಗೆ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಿರುವ ಸಂಬಂಧ ವಸ್ತುಸ್ಥಿತಿ ವರದಿಯನ್ನು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಬಿಬಿಎಂಪಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಅಕ್ರಮ ಆಸ್ತಿ: ಸಚಿವ ಸೋಮಣ್ಣ ವಿರುದ್ಧ ಸಮನ್ಸ್‌ ರದ್ದು

ಪಾಲಿಕೆ ವಿರುದ್ಧ ಅಸಮಾಧಾನ: ನಗರದಲ್ಲಿ ವ್ಯಾಪಕ ಮಳೆಯಿಂದ ಮಳೆ ನೀರು ರಸ್ತೆ ಮೇಲೆ ತುಂಬಿಕೊಂಡಿರುವ ಮತ್ತು ಮನೆಗಳಿಗೆ ನೀರು ನುಗ್ಗಿರುವ ವಿಚಾರವನ್ನು ಪ್ರಸ್ತಾಪಿಸಿ ಬಿಬಿಎಂಪಿ ವಿರುದ್ಧ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. ನಗರದಲ್ಲಿ ಸುರಿದಿರುವ ಭಾರಿ ಮಳೆಯಿಂದ ನೀರು ಚರಂಡಿಗೆ ಹೋಗುತ್ತಿಲ್ಲ. ಚರಂಡಿಗಳಲ್ಲಿ ಕಸ ತುಂಬಿಕೊಂಡಿದೆ. ನಗರದ ರಸ್ತೆಗಳಲ್ಲಿ (ಈಶಾನ್ಯ ಭಾಗ) ನೀರು ತುಂಬಿಕೊಂಡಿರುವುದಕ್ಕೆ ಏನು ಮಾಡಿದ್ದೀರಿ.

ಜನರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ವಾರ್ಡ್‌ವಾರು ವಿಶೇಷ ವ್ಯವಸ್ಥೆ ಮಾಡಲಾಗಿದೆಯೇ, ಕುಂದುಕೊರತೆ ಪರಿಹಾರ ಕೇಂದ್ರ ಆರಂಭಿಸಲಾಗಿದೆಯೇ ಎಂದು ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಬಿಬಿಎಂಪಿ ವಕೀಲರು, ಪಾಲಿಕೆ ಅಧಿಕಾರಿಗಳು ಹಗಲಿರುಳು ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಸಮಸ್ಯೆ ಬಗೆಹರಿಸಲು ಎಲ್ಲ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಮಳೆಯಿಂದ ಸಂಕಷ್ಟದಲ್ಲಿರುವ ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರತಿ ವಾರ್ಡ್‌ನಲ್ಲಿ ಎಂಜಿನಿಯರ್‌ ಒಳಗೊಂಡಿರುವ ಕುಂದು ಕೊರತೆ ಘಟಕ ಆರಂಭಿಸಬೇಕು. 

ಮೆಟ್ರೋ ಯೋಜನೆಗೆ ಕಡಿದ ಮರಕ್ಕೆ ಪರ್ಯಾಯವಾಗಿ ನೆಟ್ಟ ಸಸಿ ಎಲ್ಲಿವೆ?: ಹೈಕೋರ್ಟ್‌

ಎಂಜಿನಿಯರ್‌ ಆಯಾ ವಾರ್ಡ್‌ ನಿವಾಸಿಗಳು ಕುಂದುಕೊರತೆ ಆಲಿಸಿ ಪರಿಹರಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿತು. ಅಲ್ಲದೆ, ಮುಂಗಾರು ಆರಂಭಕ್ಕೂ ಮುನ್ನ ಬೆಂಗಳೂರಿನ ಕೆರೆಗಳಿಂದ ನೀರನ್ನು ಹೊರ ಬಿಡುವ ಸಂಬಂಧ ಕೆರೆಗಳಿಗೆ ತೂಬು ಗೇಟ್‌ಗಳನ್ನು ಅಳವಡಿಸುವ ಕುರಿತು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂಬುದಾಗಿ ಬಿಬಿಎಂಪಿ ವಕೀಲರು ತಿಳಿಸಿದ್ದಾರೆ. ಆದ್ದರಿಂದ ಪ್ರಸ್ತಾವನೆ ಸಿದ್ಧವಾದ ಕೂಡಲೇ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು.