ಬೆಂಗಳೂರು[ಡಿ.13]: ಆಟೋ ಚಾಲಕರೆಂದರೆ ಹಗಲು ದರೋಡೆ ಮಾಡುತ್ತಾರೆ ಎಂಬ ಅಭಿಪ್ರಾಯ ಅನೇಕರದ್ದು. ಅದರಲ್ಲೂ ಬೆಂಗಳೂರಿನಲ್ಲಿ ಅಮಾಯಕರು ಆಟೋ ಹತ್ತಿದರೆ ಸುಲಿಗೆ ಮಾಡಿಯೇ ಬಿಡುತ್ತಾರೆ ಎಂಬ ಮಾತುಗಳೂ ಇವೆ. ಹೀಗಿರುವಾಗ ಪ್ರಾಮಾಣಿಕತೆ ಮೆರೆದ ಆಟೋ ಡ್ರೈವರ್ ಗೆ ಬೆಂಗಳೂರು ಪೊಲೀಸರು ಸನ್ಮಾನ ಮಾಡಿ ಗೌರವಿಸಿದ್ದಾರೆ. ಅಷ್ಟಕ್ಕೂ ಆಟೋ ಡ್ರೈವರ್ ಮಾಡಿದ್ದೇನು? ಇಲ್ಲಿದೆ ವಿವರ

ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಒಂದನ್ನು ಮಾಡುತ್ತಾ ಆಟೋ ಡ್ರೈವರ್ ಪ್ರಾಮಾಣಿಕತೆಯನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೇ ಆಟೋ ಡ್ರೈವರ್ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ.

ಹೌದು ಸದ್ಯ ಮಾಲ್ಡೀವ್ಸ್ ನಲ್ಲಿ ವಾಸಿಸುತ್ತಿರುವ, ಭಾರತೀಯ ಎಂ. ಆರ್ ಭಾಸ್ಕರ್, ರಮೇಶ್ ಬಾಬು ನಾಯಕ್ ಎಂಬವರ ಆಟೋದಲ್ಲಿ ಹತ್ತಿದ್ದಾರೆ. ತಾವು ಹೋಗಬೇಕಾದ ಸ್ಥಳ ತಲುಪಿದ ಕೂಡಲೇ ಇಳಿದು ಆಟೋ ಡ್ರೈವರ್ ಗೆ ಪಾವತಿಸಬೇಕಾದ ಹಣ ಕೊಟ್ಟು ತೆರಳಿದ್ದಾರೆ. ಆದರೆ ಕೆಲ ಸಮಯದ ಬಳಿಕ ತನ್ನ ಆಟೋ ಹತ್ತಿದ್ದ ಪ್ರಯಾಣಿಕ ಬ್ಯಾಗ್ ಬಿಟ್ಟು ತೆರಳಿರುವುದು ರಮೇಶ್ ಬಾಬು ಗಮನಕ್ಕೆ ಬಂದಿದೆ. ಬ್ಯಾಗ್ ತೆರೆದು ನೋಡಿದಾಗ ಬರೋಬ್ಬರಿ 1,50,000 ರೂ. ಹಣ ಇರುವುದು ಕಂಡಿದೆ.

ಮುಂದೇನು ಮಾಡುವುದು? ತನ್ನ ಆಟೋದಲ್ಲಿ ಪ್ರಯಾಣಿಸಿದ ವ್ಯಕ್ತಿ ಯಾರೆಂದು ತಿಳಿಯದ ರಮೇಶ್, ತಡ ಮಾಡದೇ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ತೆರಳಿ ನಡೆದ ವಿಷಯ ತಿಳಿಸಿ ಬ್ಯಾಗ್ ಮರಳಿಸಿದ್ದಾರೆ. ಆಟೋ ಡ್ರೈವರ್ ರಮೇಶ್ ಬಾಬು ನಾಯಕ್ ಪ್ರಾಮಾಣಿಕತೆ ಮೆಚ್ಚಿದ ಶೇಷಾದ್ರಿಪುರಂ ಪೊಲೀಸರು ಕೂಡಲೇ ಅವರಿಗೆ ಸನ್ಮಾನ ಮಾಡಿದ್ದಾರೆ.

ಆಟೋ ಡ್ರೈವರ್ ಎಂದರೆ ಹಗಲು ದರೋಡೆ ನಡೆಸುತ್ತಾರೆಂಬ ಮಾತನ್ನು ಸುಳ್ಳಾಗಿಸಿ, ಪ್ರಾಮಾಣಿಕತೆ ಮೆರೆದ ರಮೇಶ್ ಬಾಬು ನಾಯಕ್ ನಡೆ ಮೆಚ್ಚುವಂತಹದ್ದು.