*   ಪಿಡಬ್ಲ್ಯುಡಿ ಪರೀಕ್ಷಾ ಅಕ್ರಮದಲ್ಲಿ ಭಾಗಿ ಸಾಬೀತು*  ಬ್ಲೂಟೂತ್‌ ನೀಡಿ ಅಭ್ಯರ್ಥಿಗಳಿಗೆ ಉತ್ತರ ಪೂರೈಕೆ*  ಹೆಚ್ಚಿನ ತನಿಖೆಗಾಗಿ ಮತ್ತೆ 10 ದಿನ ವಶಕ್ಕೆ ಪಡೆದ ಪೊಲೀಸರು 

ಬೆಂಗಳೂರು(ಮೇ.12): ಐದು ತಿಂಗಳ ಹಿಂದೆ ನಡೆದಿದ್ದ ಲೋಕೋಪಯೋಗಿ ಇಲಾಖೆಯ(PWD) ಕಿರಿಯ ಮತ್ತು ಸಹಾಯಕ ಎಂಜಿನಿಯರ್‌ಗಳ ನೇಮಕಾತಿ(Recruitment) ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್‌ ನೀಡಿ ಕಲಬುರಗಿ ಜಿಲ್ಲೆ ಅಫ್ಜಲ್‌ಪುರದ ಕಾಂಗ್ರೆಸ್‌ ಮುಖಂಡ ರುದ್ರಗೌಡ ಪಾಟೀಲ್‌ (RD Patil) ಅಕ್ರಮ ನಡೆಸಿರುವುದು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರ ತನಿಖೆಯಲ್ಲಿ ಖಚಿತವಾಗಿದೆ ಎಂದು ತಿಳಿದು ಬಂದಿದೆ.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ(PSI Recruitment Scam) ಬಂಧಿತನಾಗಿದ್ದ ಆರ್‌.ಡಿ.ಪಾಟೀಲ್‌ನನ್ನು ಜೆಇ ಮತ್ತು ಎಇ ನೇಮಕಾತಿ ಅಕ್ರಮ ಪ್ರಕರಣದ ಸಂಬಂಧ ಬಾಡಿ ವಾರೆಂಟ್‌ ಮೇಲೆ ವಶಕ್ಕೆ ಪಡೆದು ಕರೆತಂದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು(Police), ನ್ಯಾಯಾಲಯದ ಮುಂದೆ ಬುಧವಾರ ಹಾಜರು ಪಡಿಸಿದರು. ಬಳಿಕ ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ 10 ದಿನಗಳು ಮತ್ತೆ ವಶಕ್ಕೆ ಪಡೆದ ಪೊಲೀಸರು, ಆನಂತರ ಠಾಣೆಗೆ ಕರೆತಂದು ಪಿಡಬ್ಲ್ಯುಡಿ ಎಂಜಿನಿಯರ್‌ ನೇಮಕಾತಿ ಪರೀಕ್ಷೆ ಕಳ್ಳಾಟದ ಬಗ್ಗೆ ಆರೋಪಿಗೆ ಡ್ರಿಲ್‌ ನಡೆಸಿದ್ದಾರೆ.

ಪಿಡಬ್ಲ್ಯುಡಿ ಇಲಾಖೆಯ ಎಂಜಿನಿಯರ್‌ಗಳ ನೇಮಕಾತಿ ಅಕ್ರಮದಲ್ಲಿ ಕಲಬುರಗಿ(Kalaburagi) ಜಿಲ್ಲೆಯ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ್‌ ಮೇಳಕುಂದಿ ಹಾಗೂ ರುದ್ರಗೌಡ ಪಾಟೀಲ್‌ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಕಲಬುರಗಿಯ ನಗರದಲ್ಲಿ ಕಾಂಗ್ರೆಸ್‌(Congress) ಮುಖಂಡ ನಾಗರಾಜ್‌ ಕಾಂಬ್ಳೆಗೆ ಸೇರಿದ ಬಾಲಾಜಿ ಪಾಲಿಟೆಕ್ನಿಕ್‌ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆಯ ನಕಲು ಪ್ರತಿ ಪಡೆದ ಆರೋಪಿಗಳು, ಬಳಿಕ ಸಿವಿಲ್‌ ಎಂಜಿನಿಯರ್‌ ಬಸವರಾಜ್‌ನಿಂದ ಉತ್ತರ ಸಿದ್ಧಪಡಿಸಿದ್ದರು. ಈ ಉತ್ತರವನ್ನು ತಮಗೆ ಹಣ ಕೊಟ್ಟಿದ್ದ ಆರೋಪಿಗಳಿಗೆ ಬ್ಲೂಟೂತ್‌(Bluetooth) ಮೂಲಕ ಪಾಟೀಲ್‌ ಹಾಗೂ ಮೇಳಕುಂದಿ ಗ್ಯಾಂಗ್‌ ಪೂರೈಸುತ್ತಿತ್ತು ಎಂದು ಮೂಲಗಳು ಹೇಳಿವೆ.

ಪಾಟೀಲ್‌ಗೂ ಮುನ್ನ ಪಿಡಬ್ಲ್ಯುಡಿ ಜೆಇ ಮತ್ತು ಎಇ ನೇಮಕಾತಿ ಪ್ರಕರಣದಲ್ಲಿ ಮೇಳಕುಂದಿ ಬಂಧಿತನಾಗಿದ್ದ. ಆಗ ತಾನು ಅಭ್ಯರ್ಥಿಗಳಿಗೆ ಬ್ಲೂಟೂತ್‌ ನೀಡಿದ್ದ ಬಗ್ಗೆ ಆತ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದ. ಆದರೆ ಅಂದು ಪಾಟೀಲ್‌ ಬಗ್ಗೆ ಬಾಯ್ಬಿಡದ ಮೇಳಕುಂದಿ, ಈಗ ಪಿಎಸ್‌ಐ ನೇಮಕಾತಿ ಹಗರಣದಲ್ಲೂ ಸಿಕ್ಕಿಬಿದ್ದ ಬಳಿಕ ಹಿಂದಿನ ಪಿಡಬ್ಲ್ಯುಡಿ ಜೆಇ ನೇಮಕಾತಿಯಲ್ಲಿ ನಡೆಸಿದ್ದ ಕಳ್ಳಾಟದ ಬಗ್ಗೆ ಬಹಿರಂಗಪಡಿಸಿದ್ದ. ಈ ಮಾಹಿತಿ ಆಧರಿಸಿ ಮತ್ತೆ ಪಾಟೀಲ್‌ನನ್ನು ಪೊಲೀಸರು ತನಿಖೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲ ದಿನ ವಿಚಾರಣೆ ವೇಳೆ ಪ್ರಕರಣ ಸಂಬಂಧ ಕೇಳಿದ ಪ್ರಶ್ನೆಗಳಿಗೆ ಸೂಕ್ತವಾಗಿ ಆರ್‌.ಡಿ.ಪಾಟೀಲ್‌ ಉತ್ತರಿಸುತ್ತಿಲ್ಲ. ತನಗೇನು ಗೊತ್ತಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಆತ ವಾದಿಸಿದ್ದಾನೆ ಎಂದು ಮೂಲಗಳು ಹೇಳಿವೆ.