ಬೆಂಗಳೂರು(ಜ.06): ‘ತಂದೆ-ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಕಲ್ಯಾಣ ಅಧಿನಿಯಮ-2007’ ಅನ್ವಯ ವೃದ್ಧಾಶ್ರಮಗಳ ನಿರ್ವಹಣೆಗೆ ಕಾರ್ಯ ಯೋಜನೆ ರೂಪಿಸುವ ಬಗ್ಗೆ ಖಚಿತ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಪವನ್‌ ಕುಮಾರ್‌ ಹಾಗೂ ಇತರ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು. ಜತೆಗೆ, ಬೆಂಗಳೂರು ನಗರ ಜಿಲ್ಲೆಯಲ್ಲಿ ಎಷ್ಟುವೃದ್ಧಾಶ್ರಮಗಳಿವೆ ಎಂಬ ಮಾಹಿತಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ಹಂತ ಹಂತವಾಗಿ ಬಿಡಿಎ ಪಾರ್ಕ್‌ಗಳು ಬಿಡಿಎಗೆ ಹಸ್ತಾಂತರ

ಬೆಂಗಳೂರಿನ ಗಿರಿನಗರದ ‘ನವಚೇತನ ವೃದ್ಧಾಶ್ರಮ ಮತ್ತು ಪುನರ್ವಸತಿ ಕೇಂದ್ರ’ದಲ್ಲಿ ವಾಸಿಸುತ್ತಿರುವ ಕಾಯಿಲೆ ಪೀಡಿತ ಹಿರಿಯ ನಾಗರಿಕರ ನರಳಾಟ ಮತ್ತು ಚೀರಾಟ ಮಾಡುತ್ತಿದ್ದಾರೆ. ಇದರಿಂದ ಸುತ್ತಲಿನ ವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಈ ಕುರಿತು ನವಚೇತನ ವೃದ್ಧಾಶ್ರಮ ಆಡಳಿತ ಮಂಡಳಿ ಸದಸ್ಯರು ಹಾಗೂ ಅರ್ಜಿದಾರ ಪ್ರತಿನಿಧಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜ.27ಕ್ಕೆ ಮುಂದೂಡಿತು.

ತಂದೆ-ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಕಲ್ಯಾಣ ಅಧಿನಿಯಮ-2007ರ ಸೆಕ್ಷನ್‌ 19ರ ಪ್ರಕಾರ ಕನಿಷ್ಟಜಿಲ್ಲೆಗೊಂದು ವೃದ್ಧಾಶ್ರಮವನ್ನು ರಾಜ್ಯ ಸರ್ಕಾರವೇ ಸ್ಥಾಪಿಸಬೇಕು.

ಅವುಗಳ ನಿರ್ವಹಣೆಗೆ ಕಾರ್ಯ ಯೋಜನೆ ತಯಾರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.