ಬೆಂಗಳೂರು(ಜ.06): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಸೇರಿದ ಬಡಾವಣೆಗಳಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಉದ್ಯಾನಗಳನ್ನು ಹಂತ ಹಂತವಾಗಿ ಬಿಬಿಎಂಪಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದ್ದಾರೆ.

ಮಂಗಳವಾರ ಬಿಡಿಎ ತೋಟಗಾರಿಕೆ ಮತ್ತು ಅರಣ್ಯ ವಿಭಾಗದ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಡಿಎ ಬಡಾವಣೆಗಳಲ್ಲಿರುವ ಬಹುತೇಕ ಉದ್ಯಾನಗಳು ಹಾಗೂ ಅಭಿವೃದ್ಧಿ ಮಾಡಬೇಕಿರುವ ಮತ್ತು ಪಾರ್ಕ್ ನಿರ್ಮಾಣಕ್ಕೆ ಮೀಸಲಾಗಿರುವ ಜಾಗಗಳನ್ನೂ ಬಿಬಿಎಂಪಿಗೆ ಹಸ್ತಾಂತರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹ ಸಮ್ಮತಿ ಸೂಚಿಸಿದ್ದಾರೆ ಎಂದರು.

ರಸ್ತೆ ದಾಟೋದಿನ್ನು ಸುಲಭ: 300 ಕಡೆ ಎತ್ತರಿಸಿದ ರಸ್ತೆದಾಟುವ ಮಾರ್ಗ

ಈಗಾಗಲೇ ಬಿಡಿಎ ಅಭಿವೃದ್ಧಿ ಪಡಿಸಿರುವ ಕೆಲ ಪಾರ್ಕ್ಗಳನ್ನು ಬಿಡಿಎ ಸುಪರ್ದಿಯಲ್ಲೇ ಇರಿಸಿಕೊಂಡು ನಿರ್ವಹಣೆ ಮಾಡಲಾಗುತ್ತದೆ. ಉದ್ಯಾನಗಳನ್ನು ಬಿಬಿಎಂಪಿಗೆ ಹಸ್ತಾಂತರಿಸುವ ಸಂಬಂಧ ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಂಬಂಧ ಸದ್ಯದಲ್ಲೇ ಬಿಬಿಎಂಪಿ ಆಯುಕ್ತರೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸುವುದಾಗಿ ಹೇಳಿದರು.

ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸೂಚನೆ:

ಬಿಡಿಎನಿಂದ ಅನುಮೋದನೆ ಪಡೆದ ಬಡಾವಣೆಗಳಲ್ಲಿ ನಾಗರಿಕ ಉದ್ದೇಶಗಳಿಗೆ ಮೀಸಲಾಗಿರುವ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರುವ ವಸತಿ ಸಹಕಾರ ಸಂಘಗಳು ಸೇರಿದಂತೆ ಇನ್ನಿತರೆ ಸಂಘ ಸಂಸ್ಥೆಗಳ ವಿರುದ್ಧ ಕ್ರಿಮಿನಲ… ಪ್ರಕರಣ ದಾಖಲಿಸಬೇಕು ಮತ್ತು ಅಗತ್ಯವಿದ್ದರೆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿಶ್ವನಾಥ್‌ ತಿಳಿಸಿದರು.