ಬೆಂಗ್ಳೂರಿನ ನಿಮ್ಹಾನ್ಸ್ ಕಾರ್ಯವೈಖರಿ ದೇಶದಲ್ಲೇ ಅನುಕರಣೀಯ: ಮುರ್ಮು ಶ್ಲಾಘನೆ
ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆಯ (ನಿಮ್ಹಾನ್ಸ್) ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಶೋಧನೆ, ನಾವೀನ್ಯತೆ, ಆಧುನಿಕ ತಂತ್ರಜ್ಞಾನದ ಬಳಕೆ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನಿಮ್ಹಾನ್ಸ್ ವೈದ್ಯರ ತಂಡ ಉತ್ತಮ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
ಬೆಂಗಳೂರು(ಜ.04): ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಕ್ಷೇತ್ರದಲ್ಲಿ ನಿಮ್ಹಾನ್ಸ್ ಆಸ್ಪತ್ರೆಯ ಚಿಕಿತ್ಸೆ ಮತ್ತು ಆರೋಗ್ಯ ಸೇವೆ ದೇಶದಲ್ಲೇ ಅನುಕರಣೀಯ ಮತ್ತು ಶ್ಲಾಘನೀಯ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ನಗರದಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆಯ (ನಿಮ್ಹಾನ್ಸ್) ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಶೋಧನೆ, ನಾವೀನ್ಯತೆ, ಆಧುನಿಕ ತಂತ್ರಜ್ಞಾನದ ಬಳಕೆ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನಿಮ್ಹಾನ್ಸ್ ವೈದ್ಯರ ತಂಡ ಉತ್ತಮ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದೆ. ಮಾನಸಿಕ ಆರೋಗ್ಯ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳಲು ಅವಕಾಶ ಕಲ್ಪಿಸಿರುವ 'ಟೆಲಿ-ಮನಸ್'' ಯೋಜನೆ ಮೂಲಕ ಕಳೆದೆರಡು ವರ್ಷಗಳ ಅವಧಿಯಲ್ಲಿ ದೇಶದ ಸುಮಾರು 70 ಲಕ್ಷ ಜನರಿಗೆ ಮಾನಸಿಕ ಆರೋಗ್ಯ ಸಲಹೆಗಳು ನೀಡಿರುವುದು ನಿಮ್ಹಾನ್ಸ್‌ನ ದಕ್ಷತೆಗೆ ಸಾಕ್ಷಿ ಎಂದು ದ್ರೌಪದಿ ಮುರ್ಮು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಯಾನ್ಸರ್ ಪೀಡಿತರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಮಾತನಾಡಿ, ನಿಮ್ಹಾನ್ಸ್‌ಗೆ ಭೇಟಿ ನೀಡುವ ರೋಗಿಗಳ ಸಂಖ್ಯೆಯಲ್ಲಿ 5 ಪಟ್ಟು ಹೆಚ್ಚಳವಾಗಿದೆ. 1970ರವರೆಗೆ 10 ಲಕ್ಷಕ್ಕಿಂತ ಕಡಿಮೆ ರೋಗಿಗಳು ಚಿಕಿತ್ಸೆ ಪಡೆದಿದ್ದರು. ಆದರೆ, ಕಳೆದೊಂದು ದಶಕದಲ್ಲಿ 50 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಪಡೆದಿದ್ದಾರೆ. ಮಾನಸಿಕ ಆರೋಗ್ಯ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸಲು 1,000ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ನಿಮ್ಹಾನ್ಸ್ ಮೂಲಕ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೆ ನಾಡಿ, ಮಾನಸಿಕ ಆರೋಗ್ಯದ ಆರೈಕೆ ಜೊತೆಗೆ ರೋಗದ ಕುರಿತು ಅಂಟಿಕೊಳ್ಳುವ ಸಮಾಜದ ನಕರಾತ್ಮಕ ದೃಷ್ಟಿಕೋನ ನಿವಾರಿಸುವಲ್ಲಿ ನಿಮ್ಹಾನ್ಸ್ ಬಹುತೇಕ ಯಶಸ್ವಿಯಾಗಿದೆ. ಪಾರ್ಶವಾಯು, ಮೆದುಳು ಕಾಯಿಲೆಗಳು ಮತ್ತು ನರರೋಗ ಚಿಕಿತ್ಸೆಯಲ್ಲಿ ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ನಿಮ್ಹಾನ್ಸ್ ಕೊಡುಗೆ ಶ್ಲಾಘನೀಯ ಎಂದರು.
ಆಲದಮರ ಫೌಂಡೇಶನ್ ಸಹಯೋಗ ದೊಂದಿಗೆ ಬೆಂಗಳೂರಿನ ಸರ್‌ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ 25 ಹಾಸಿಗೆ ಸಾಮರ್ಥ್ಯದ ತುರ್ತು ಚಿಕಿತ್ಸೆ ಹಾಗೂ ಆರೈಕೆ ಕೇಂದ್ರವು ಮಾನಸಿಕ ಕಾಯಿಲೆಯಿಂದ ಬಳಲುವ ನಿರ್ಗತಿಕರಿಗೆ ಪುನರ್ವಸತಿ ಕಲ್ಪಿಸಿದೆ. 146 ತಾಲೂಕುಗಳ ಐದು ಲಕ್ಷ ಜನರಿಗೆ ಉಪ ಯೋಗವಾಗಿದೆ. ಅಲ್ಲದೇ, ಆರ್.ಸಿ.ಎಚ್. ಆರ್‌ಬಿಎಸ್‌ಕೆ ಮತ್ತು ಆರ್‌ಕೆಎಸ್‌ಕೆ ಸಹ ಭಾಗಿತ್ವದೊಂದಿಗೆ ತಾಯಿ, ಮಗು, ಮಕ್ಕಳ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಕೋಲ್ಕತಾ ಘಟನೆ ದಿಗ್ಭ್ರಮೆ ಹುಟ್ಟಿಸಿತು: ಮೊದಲ ಬಾರಿಗೆ ರೇಪ್ ಕೇಸ್ ಬಗ್ಗೆ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಜ್ಯದಿಂದ ನಿಮ್ಹಾನ್ಸ್‌ಗೆ ವರ್ಷಕ್ಕೆ ₹137 ಕೋಟಿ: ಸಿದ್ದು
ನಿಮ್ಹಾನ್ಸ್ ಸಂಸ್ಥೆ ಕರ್ನಾಟಕದಲ್ಲಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯ. ಮಾನಸಿಕ ಆರೋಗ್ಯ ಸೇವೆ ಉತ್ತಮಗೊಳಿಸಲು ರಾಜ್ಯ ಸರ್ಕಾರ ನಿಮ್ಹಾನ್ಸ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಪ್ರತಿವರ್ಷ 137 ಕೋಟಿ ರು. ಒದಗಿಸುತ್ತಿದೆ. ಟೆಲಿ ಮನಸ್ ಯೋಜನೆಯಡಿ ರಾಜ್ಯದ 17 ಲಕ್ಷ ಜನ ಪ್ರಯೋಜನ ಪಡೆದಿದ್ದಾರೆ. ನಿಮ್ಹಾನ್ಸ್ ಸಹಯೋಗದಲ್ಲಿ ಆರಂಭಿಸಿರುವ ಕರ್ನಾಟಕ ಬ್ರೌನ್ ಹೆಲ್ತ್ ಇನಿಷಿಯೇಟಿವ್, ನರರೋಗ ಅರೈಕೆಯಲ್ಲಿ ತಜ್ಞರ ಸೇವೆಯನ್ನು ಜಿಲ್ಲಾಮಟ್ಟದಲ್ಲಿಯೂ ಲಭ್ಯವಾಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಿಮ್ಹಾನ್ಸ್‌ನಲ್ಲಿ ಉದ್ಘಾಟನೆ ಆದ ನೂತನ ಸೇವೆಗಳು
ಮನೋರೋಗ ವಿಶೇಷ ವಿಭಾಗ, ಕೇಂದ್ರ ಪ್ರಯೋಗಾಲಯ ಸಂಕೀರ್ಣ, ಭೀಮಾ ಹಾಸ್ಟೇಲ್, ಹೊಸ ತಲೆಮಾರಿನ 3ಟಿ ಎಂಆರ್‌ಐ ಸ್ಕ್ಯಾನರ್, ಆಧುನಿಕ ಅಂಜಿಯೋಗ್ರಾಫಿ (ಡಿಎಸ್‌ಎ) ವ್ಯವಸ್ಥೆಯನ್ನು ರಾಷ್ಟ್ರಪತಿ ದೌಪದಿ ಮುರ್ಮು ಅವರು ಸೇವೆಗೆ ಸಮರ್ಪಿಸಿದರು.