ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ, ಬಿಬಿಎಂಪಿ ಅಧಿಕಾರಿಗಳು ತಲಾ 2000 ಜನರನ್ನು ಕರೆತರಬೇಕು; ಎನ್.ಆರ್. ರಮೇಶ್ ಆರೋಪ
ಬೆಂಗಳೂರಿನ 198 ವಾರ್ಡ್‌ಗಳಲ್ಲಿ ಆ.16ರಂದು ನಡೆಯುವ ಗೃಹಲಕ್ಷ್ಮಿ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಬಿಬಿಎಂಪಿ ಅಧಿಕಾರಿಗಳೇ ತಲಾ 2000 ಜನರನ್ನು ಕರೆತರುವಂತೆ ಶಾಸಕರು ಮೌಖಿಕ ಆದೇಶ ನೀಡಿದ್ದಾರೆ.
ಬೆಂಗಳೂರು (ಆ.08): ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಜಾರಿಗೆ ತರಲಾಗಿರುವ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆಗೆ ಬೆಂಗಳೂರಿನಲ್ಲಿ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದ್ದು, ಶಾಸಕರು ಮತ್ತು ಸಚಿವರು ಸ್ಥಳೀಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳಿಗೆ ತಲಾ 2000 ಜನರನ್ನು ಸೇರಿಸುವ ಟಾಸ್ಕ್ ಕೊಟ್ಟಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ವಿಭಾಗದ ಅಧ್ಯಕ್ಷ ಎನ್.ಆರ್. ರಮೇಶ್ ಆರೋಪ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿರುವ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು, ನಿಮ್ಮ ಪಕ್ಷದ ಶಾಸಕರು, ಸಚಿವರು ಹಾಗೂ ಹಿರಿಯ ನಾಯಕರು ಸರ್ಕಾರದ ಅಧಿಕಾರಿ ಮತ್ತು ನೌಕರರನ್ನು ತಮ್ಮ ಪಕ್ಷದ ವೈಯಕ್ತಿಕ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷದಿಂದ ಹೊರಡಿಸಲಾದ ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ "ಗೃಹಲಕ್ಷ್ಮಿ ಯೋಜನೆ" (ಪ್ರತಿ ಮನೆಯ ಯಜಮಾನಿಗೆ ಮಾಸಿಕ 2000 ರೂ. ಆರ್ಥಿಕ ನೆರವು) ನೀಡುವುದಾಗಿ ಘೋಷಣೆ ಮಾಡಿತ್ತು. ಈಗ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಪ್ರಣಾಳಿಕೆಯ ಉದ್ದೇಶ ಈಡೇರಿಕೆ ಮಾಡಿಕೊಳ್ಳುವುದಕ್ಕೆ ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
Bengaluru: ಬಿಬಿಎಂಪಿ 500 ಗುತ್ತಿಗೆದಾರರಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಕೆ
ರಾಜ್ಯದ ರಾಜಧಾನಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಆರು ಮಂದಿ ಸಚಿವರಾಗಿದ್ದಾರೆ. ಆ.16ರಂದು ಬೆಳಗಾವಿಯಲ್ಲಿ ತಾವು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (KPCC) ಯು ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿರುವ 'ಗೃಹಲಕ್ಷ್ಮಿ ಯೋಜನೆ'ಯನ್ನು ಅಧಿಕೃತವಾಗಿ ಉದ್ಘಾಟನೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಿಜಕ್ಕೂ ನಿಮ್ಮ ಗೃಹಲಕ್ಷ್ಮಿ ಯೋಜನೆಯು ಅರ್ಹ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ತಲುಪಿದರೆ ಬಿಜೆಪಿ ಮುಕ್ತವಾಗಿ ಸ್ವಾಗತಿಸುತ್ತದೆ.
ಆದರೆ, ಆ.16ರಂದು ನಡೆಯುತ್ತಿರುವ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿನ ಯೋಜನೆಯಾದ 'ಗೃಹಲಕ್ಷ್ಮಿ ಯೋಜನೆ'ಯ ಉದ್ಘಾಟನೆ ಕಾರ್ಯಕ್ರಮವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲಾ 198 ವಾರ್ಡ್ ಗಳಲ್ಲಿ ಹಮ್ಮಿಕೊಳ್ಳಬೇಕೆಂಬ ಉದ್ದೇಶದಿಂದ ತಾವು, ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ತಮ್ಮ ಪಕ್ಷದ ಶಾಸಕರು ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ - ರಾಜಕೀಯ ಪಕ್ಷವೊಂದರ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಕರೆತರುವ ಹೊಣೆಗಾರಿಕೆಯನ್ನು ಪಾಲಿಕೆಯ ಎಂಜಿನಿಯರಿಂಗ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿ/ನೌಕರರಿಗೆ ವಹಿಸಿರುವುದು ನಿಜಕ್ಕೂ ತಾವು ಮತ್ತು ತಮ್ಮ ಸರ್ಕಾರ ಅಧಿಕಾರ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಒಂದು ಸ್ಪಷ್ಟ ನಿದರ್ಶನವಾಗಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿನ ಯೋಜನೆಯೊಂದರ ಉದ್ಘಾಟನೆ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಕರೆತರುವ ಕೆಲಸವನ್ನು ನಿಮ್ಮ ಪಕ್ಷದ ಕಾರ್ಯಕರ್ತರು ಮಾಡಬೇಕಾಗಿರುತ್ತದೆ. ಆದರೆ, ಸರ್ಕಾರಿ ಅಧಿಕಾರಿ/ ನೌಕರರಲ್ಲ ಎಂಬ ಸತ್ಯವನ್ನು ಅರಿತುಕೊಳ್ಳದ ತಾವು ತಮ್ಮ ಎಂದಿನ ಸರ್ವಾಧಿಕಾರಿ ಧೋರಣೆಯಿಂದ ಸರ್ಕಾರಿ ಅಧಿಕಾರಿ / ನೌಕರರಿಗೆ ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಕರೆತರುವ ಹೊಣೆಯನ್ನು ಬಲವಂತವಾಗಿ ಹೇರಿರುವುದು ನಿಮ್ಮ ದೌರ್ಜನ್ಯಯುತ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.
ಪಾಲಿಕೆ ಬಾಕಿ ಬಿಲ್ ವಿಳಂಬ: ಎಚ್‌ಡಿಕೆ ಮುಂದೆ ಬಿಬಿಎಂಪಿ ಗುತ್ತಿಗೆದಾರರ ಅಳಲು
ಸರ್ಕಾರದಿಂದ ಸಂವಿಧಾನ ವಿರೋಧಿ ಕಾರ್ಯ: ಬಿಬಿಎಂಪಿಯ 8 ವಲಯಗಳಲ್ಲಿ ಆ.3ರಂದು ನಡೆದ ಹಿರಿಯ ಅಧಿಕಾರಿಗಳ ನೇತೃತ್ವದ ಸಭೆಯಲ್ಲಿ ಕಿರಿಯ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕನಿಷ್ಠ 2,000 ಮಂದಿ ಸಾರ್ವಜನಿಕರನ್ನು ಪ್ರತಿಯೊಂದು ವಾರ್ಡ್ ನಲ್ಲಿ ಜಮಾವಣೆಗೊಳಿಸಬೇಕೆಂಬ ಮೌಖಿಕ ಆದೇಶವನ್ನು ಹೊರಡಿಸಲಾಗಿದೆ. ಈ ಮೂಲಕ ತಮ್ಮ ಸರ್ಕಾರ ಸಂವಿಧಾನ ವಿರೋಧಿ ಕಾರ್ಯವನ್ನು ಮಾಡಿರುತ್ತದೆ ಎಂದು ಅತ್ಯಂತ ಸ್ಪಷ್ಟವಾಗಿ ತಿಳಿಸಲಿಚ್ಚಿಸುತ್ತೇನೆ. ಈ ಕೂಡಲೇ ತಾವು ತಮ್ಮ ಸರ್ವಾಧಿಕಾರಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿ ಧೋರಣೆಯನ್ನು ಬದಲಿಸಿಕೊಂಡು, ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಾರ್ವಜನಿಕರನ್ನು ಕರೆತರುವ ಹೊಣೆಯನ್ನು ಹೊರಿಸಬೇಕೆಂದು ಹಾಗೂ ಒಂದು ವೇಳೆ ಪಾಲಿಕೆಯ ಅಧಿಕಾರಿ / ನೌಕರರು ಸಾರ್ವಜನಿಕರನ್ನು ಕರೆತರುವ ಕಾರ್ಯಕ್ಕೆ ಮುಂದಾಗಿದ್ದೇ ಆದಲ್ಲಿ ಅದರ ಎಲ್ಲಾ ವಿಡಿಯೋ ತುಣುಕುಗಳೊಂದಿಗೆ ತಮ್ಮ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ. ಕೂಡಲೇ ತಮ್ಮ ಈ ದೌರ್ಜನ್ಯಯುತ ಮೌಖಿಕ ಆದೇಶವನ್ನು ಹಿಂಪಡೆಯಬೇಕೆಂದು ವಿನಂತಿಸಿದ್ದಾರೆ.