ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ, BMRCL ಮತ್ತು BMTC ಜಂಟಿಯಾಗಿ 'ನೇರಳೆ' ಮತ್ತು 'ಹಸಿರು' ಮಾರ್ಗದ ಪ್ರಮುಖ ನಿಲ್ದಾಣಗಳ ದ್ವಾರದ ಬಳಿ ಹೊಸ ಬಸ್ ನಿಲ್ದಾಣಗಳನ್ನು ಸ್ಥಾಪಿಸಿವೆ. ಮೆಟ್ರೋ ಮತ್ತು ಬಸ್ ನಡುವಿನ ಸಂಪರ್ಕ ಸುಧಾರಿಸಿ, ಪ್ರಯಾಣಿಕರು ನಡೆಯುವ ಪ್ರಯಾಸ ಕಡಿಮೆಯಾಗಲಿದೆ.
ಬೆಂಗಳೂರು (ಫೆ.07): ನಮ್ಮ ಮೆಟ್ರೋ ಪ್ರಯಾಣಿಕರಿಗೆ ರಾಜಧಾನಿಯಲ್ಲಿ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಬಿಎಂಟಿಸಿ (BMTC) ಮಹತ್ವದ ಹೆಜ್ಜೆಯನ್ನಿಟ್ಟಿವೆ. ಮೆಟ್ರೋ ನಿಲ್ದಾಣದಿಂದ ಇಳಿದು ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುವ ಪ್ರಯಾಸಕ್ಕೆ ಇನ್ನು ಬ್ರೇಕ್ ಬೀಳಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ‘ನೇರಳೆ’ ಮತ್ತು ‘ಹಸಿರು’ ಮಾರ್ಗದ ಪ್ರಮುಖ ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರದ ತೀರಾ ಸಮೀಪದಲ್ಲೇ ಹೊಸದಾಗಿ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ.
ಈಗಾಗಲೇ ಫೆಬ್ರವರಿ 05, 2026 ರಿಂದ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಮೆಟ್ರೋ ಮತ್ತು ಬಸ್ ನಡುವಿನ ಸಂಪರ್ಕ ಕೊಂಡಿಯನ್ನು (Last Mile Connectivity) ಬಲಪಡಿಸಲು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ.
ಹೊಸ ಬದಲಾವಣೆ ಏಕೆ?
ನಗರದ ಹಲವು ಕಡೆಗಳಲ್ಲಿ ಮೆಟ್ರೋ ನಿಲ್ದಾಣಗಳು ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳ ನಡುವೆ ಸಾಕಷ್ಟು ಅಂತರವಿತ್ತು. ಇದರಿಂದಾಗಿ ಮೆಟ್ರೋದಿಂದ ಇಳಿದ ಪ್ರಯಾಣಿಕರು ಬಸ್ ಹಿಡಿಯಲು ಸಾಕಷ್ಟು ದೂರ ನಡೆಯಬೇಕಿತ್ತು ಅಥವಾ ರಸ್ತೆ ದಾಟಲು ಪರದಾಡಬೇಕಿತ್ತು. ಈ ಅಸೌಕರ್ಯವನ್ನು ಮನಗಂಡ ಬಿಎಂಆರ್‌ಸಿಎಲ್, ಬಿಎಂಟಿಸಿ ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಪ್ರಯಾಣಿಕರಿಗೆ ಅನುಕೂಲವಾಗುವ ಜಾಗಗಳಲ್ಲಿ ಹೊಸ ಬಸ್ ನಿಲ್ದಾಣಗಳನ್ನು ಗುರುತಿಸಿದ್ದಾರೆ.
ನೇರಳೆ ಮಾರ್ಗದಲ್ಲಿ ಎಲ್ಲೆಲ್ಲಿ?
ವೈಟ್‌ಫೀಲ್ಡ್‌ನಿಂದ ಚಲಘಟ್ಟದವರೆಗಿನ ನೇರಳೆ ಮಾರ್ಗದಲ್ಲಿ ಸದ್ಯ ಎರಡು ಪ್ರಮುಖ ನಿಲ್ದಾಣಗಳಲ್ಲಿ ಹೊಸ ಸ್ಟಾಪ್‌ಗಳನ್ನು ನೀಡಲಾಗಿದೆ:
ಟ್ರಿನಿಟಿ: ಎಂ.ಜಿ.ರಸ್ತೆಯಿಂದ ಹಲಸೂರು ಕಡೆಗೆ ಹೋಗುವವರಿಗೆ ಅನುಕೂಲವಾಗುವಂತೆ ‘ಬಿ’ ಪ್ರವೇಶದ್ವಾರದ ಬಳಿ (ಹೋಟೆಲ್ ಒಬೆರಾಯ್ ಎದುರು) ಬಸ್ ನಿಲ್ದಾಣ ಸ್ಥಾಪಿಸಲಾಗಿದೆ.
ಹೂಡಿ: ಸೀತಾರಾಮಪಾಳ್ಯದಿಂದ ಗರುಡಾಚರ್ಪಾಳ್ಯ ಕಡೆಗೆ ಹೋಗುವವರಿಗೆ ‘ಬಿ’ ಪ್ರವೇಶದ್ವಾರದ ಬಳಿ (ಡಿ’ಮಾರ್ಟ್ ಎದುರು) ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಹಸಿರು ಮಾರ್ಗದಲ್ಲಿ ಭರ್ಜರಿ ಬದಲಾವಣೆ:
ಮಾದಾವರದಿಂದ ರೇಷ್ಮೆ ಸಂಸ್ಥೆವರೆಗಿನ ಹಸಿರು ಮಾರ್ಗದಲ್ಲಿ ಅತಿ ಹೆಚ್ಚು, ಅಂದರೆ 8 ನಿಲ್ದಾಣಗಳಲ್ಲಿ ಹೊಸ ಬಸ್ ಸ್ಟಾಪ್‌ಗಳನ್ನು ನೀಡಲಾಗಿದೆ.
ಮಂಜುನಾಥ ನಗರ: ಚಿಕ್ಕಬಿದರಕಲ್ಲು ಕಡೆಯಿಂದ ಬರುವವರಿಗೆ ‘ಎ’ ದ್ವಾರದ ಬಳಿ.
ಪೀಣ್ಯ: ಮೆಟ್ರೋ ನಿಲ್ದಾಣದ ಎದುರಿನ ಸರ್ವಿಸ್ ರಸ್ತೆ ಹಾಗೂ ‘ಬಿ’ ದ್ವಾರದ ಕೆಳಭಾಗದಲ್ಲಿ.
ಲಾಲ್‌ಬಾಗ್: ನ್ಯಾಷನಲ್ ಕಾಲೇಜ್ ಕಡೆಗೆ ಹೋಗುವವರಿಗೆ ‘ಬಿ’ ದ್ವಾರದ ಬಳಿ.
ಸೌತ್ ಎಂಡ್ ಸರ್ಕಲ್: ಜಯನಗರ ಕಡೆಗೆ ತೆರಳುವವರಿಗೆ ‘ಎ’ ದ್ವಾರದ ಬಳಿ.
ಜಯಪ್ರಕಾಶ್ ನಗರ (JP Nagar): ಬನಶಂಕರಿ ಕಡೆಗೆ ಹಾಗೂ ಯಲಚೇನಹಳ್ಳಿ ಕಡೆಗೆ ಸಂಚರಿಸುವವರಿಗೆ ‘ಸಿ’ ಮತ್ತು ‘ಡಿ’ ದ್ವಾರದ ಬಳಿ ಪ್ರತ್ಯೇಕ ನಿಲ್ದಾಣಗಳು.
ಕೊಣನಕುಂಟೆ ಕ್ರಾಸ್: ಪಿಲ್ಲರ್ ಸಂಖ್ಯೆ 147 ಮತ್ತು 148 ರ ಬಳಿ (ಎರಡೂ ಬದಿಯಲ್ಲಿ) ಬಸ್ ನಿಲ್ದಾಣ ಒದಗಿಸಲಾಗಿದೆ.
ವಜ್ರಹಳ್ಳಿ & ತಲಘಟ್ಟಪುರ: ಈ ಎರಡೂ ನಿಲ್ದಾಣಗಳಲ್ಲೂ ‘ಎ’ ಮತ್ತು ‘ಬಿ’ ದ್ವಾರಗಳ ಬಳಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.
ವಿಮಾನ ನಿಲ್ದಾಣ ಪ್ರಯಾಣಿಕರಿಗೂ ಸಿಹಿ ಸುದ್ದಿ:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ತೆರಳುವ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಇಲ್ಲಿದೆ. ಇನ್ಮುಂದೆ ಮೆಟ್ರೋ ಮಾರ್ಗದ ಎಲ್ಲಾ ನಿಲ್ದಾಣಗಳಲ್ಲೂ ಬಿಎಂಟಿಸಿಯ ‘ವಾಯುವಜ್ರ’ (Vayu Vajra) ಬಸ್‌ಗಳಿಗೆ ನಿಲುಗಡೆ ನೀಡಲಾಗಿದೆ. ಪ್ರಯಾಣಿಕರು ತಾವು ಇಳಿಯುವ ಯಾವುದೇ ಮೆಟ್ರೋ ನಿಲ್ದಾಣದಿಂದ ನೇರವಾಗಿ ಏರ್‌ಪೋರ್ಟ್ ಬಸ್‌ಗಳನ್ನು ಹತ್ತಬಹುದಾಗಿದೆ.
ಉಳಿದ ನಿಲ್ದಾಣಗಳಲ್ಲಿ ಈಗಾಗಲೇ 100 ಮೀಟರ್ ಅಂತರದಲ್ಲಿ ಬಸ್ ನಿಲ್ದಾಣಗಳಿದ್ದು, ಜಾಗದ ಅಭಾವವಿರುವ ಕಡೆಗಳಲ್ಲಿ ಮಾತ್ರ ಹೊಸ ನಿಲ್ದಾಣ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

