ಎಂಬಿಎ, ಎಂಸಿಎ ಮತ್ತು ಎಂಇ ಕೋರ್ಸುಗಳ 2ನೇ ಸುತ್ತಿನ ಸೀಟು ಹಂಚಿಕೆ ನಡೆಸದ ಕೆಇಎ ಕ್ರಮವನ್ನು ಖಂಡಿಸಿ ಪಿಜಿಸಿಇಟಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. ಮೊದಲ ಸುತ್ತಿನ ಪ್ರವೇಶಾವಧಿಯನ್ನು ವಿಸ್ತರಿಸಿರುವ ಪ್ರಾಧಿಕಾರದ ನಡೆ ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಅನುಮಾನ ಮೂಡಿಸಿದೆ. ಸುಪ್ರೀಂ ಕೋರ್ಟ್ ಅನುಮತಿ ಸಿಕ್ಕರೆ ಮಾತ್ರ ಮುಂದಿನ ಪ್ರಕ್ರಿಯೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಎಂಬಿಎ, ಎಂಸಿಎ, ಎಂಇ ಕೋರ್ಸುಗಳ ಪ್ರವೇಶಕ್ಕೆ 2ನೇ ಸುತ್ತಿನ ಸೀಟು ಹಂಚಿಕೆ ನಡೆಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕ್ರಮ ಖಂಡಿಸಿ ನೂರಾರು ಪಿಜಿಸಿಇಟಿ ಅಭ್ಯರ್ಥಿಗಳು ಗುರುವಾರ ಮಲ್ಲೇಶ್ವರದ ಪ್ರಾಧಿಕಾರದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಎಬಿವಿಪಿ ಕಾರ್ಯಕರ್ತರು ಸಾಥ್ ನೀಡಿದ್ದರು.
ಸಂಜೆ ಕೆಇಎ ಕಚೇರಿ ಮುಂದೆ ದೌಡಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಪ್ರಾಧಿಕಾರ ಮೊದಲ ಸುತ್ತಿನ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಇದ್ದ ಕಾಲಾವಕಾಶವನ್ನು ಗುರುವಾರ ಅ.12ರವರೆಗೆ ವಿಸ್ತರಿಸಿದೆ. ಇದರಿಂದ 2ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಆತಂಕ ಶುರುವಾಗಿ ಸಂಜೆ ಕೆಇಎ ಕಚೇರಿ ಮುಂದೆ ದೌಡಾಯಿಸಿದ್ದಾರೆ.
ಇದೇ ವಿಷಯಕ್ಕೆ ಸೋಮವಾರ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ಮೊದಲ ಸುತ್ತಿನ ಪ್ರವೇಶ ಪ್ರಕ್ರಿಯೆ ಮುಗಿದ ಬಳಿಕ ಉಳಿಯುವ ಸೀಟುಗಳನ್ನು ನೋಡಿಕೊಂಡು 2ನೇ ಸುತ್ತಿನ ಸೀಟು ಹಂಚಿಕೆ ಮಾಡುವ ಭರವಸೆ ನೀಡಿದ್ದರು. ಆದರೆ, ಇನ್ನೂ ಪ್ರಕ್ರಿಯೆ ನಡೆಸದೆ ಕೇವಲ ಮೊದಲ ಸುತ್ತಿನಲ್ಲಿ ಸೀಟು ಸಿಕ್ಕವರು ಶುಲ್ಕ ಪಾವತಿಸಿ ಪ್ರವೇಶ ಪಡೆಯಲು ಇದ್ದ ಕಾಲಾವಕಾಶವನ್ನು ಮತ್ತಷ್ಟು ವಿಸ್ತರಿಸಿದೆ. ಎರಡನೇ ಸುತ್ತಿನ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ವರ್ಷ ಏಕೆ ಒಂದೇ ಸುತ್ತಿಗೆ ಸೀಟು ಹಂಚಿಕೆ ಮುಕ್ತಾಯ
ಪ್ರತೀ ವರ್ಷ 2 ಸುತ್ತು ಸೀಟು ಹಂಚಿಕೆ ಮಾಡುತ್ತಿದ್ದ ಕೆಇಎ ಈ ವರ್ಷ ಏಕೆ ಒಂದೇ ಸುತ್ತಿಗೆ ಮುಕ್ತಾಯಗೊಳಿಸಲು ಹೊರಟಿದೆ ಅರ್ಥವಾಗುತ್ತಿಲ್ಲ. ಅಧಿಕಾರಿಗಳ ನಡೆ ಅನುಮಾನಗಳಿಗೆ ಕಾರಣವಾಗಿದೆ. ಮೊದಲ ಸುತ್ತಿನಲ್ಲಿ ಉಳಿಯುವ ಸೀಟುಗಳನ್ನು ಕಾಲೇಜುಗಳಿಗೆ ಬಿಟ್ಟುಕೊಟ್ಟು ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಕೆಇಎ ಅಧಿಕಾರಿಗಳು ಹೇಳುವ ಪ್ರಕಾರ, ಪಿಜಿಸಿಇಟಿ ವೇಳಾಪಟ್ಟಿಯನ್ನು ಎಐಸಿಟಿಇ ನೀಡುತ್ತದೆ. ಎಲ್ಲ ರಾಜ್ಯಗಳಿಗೂ ಒಂದೇ ವೇಳಾಪಟ್ಟಿ, ಆ ಪ್ರಕಾರ ಸೀಟು ಹಂಚಿಕೆ ಪ್ರಕ್ರಿಯೆಗೆ ಅವಧಿ ಮುಗಿದಿದೆ. ಸೀಟು ಹಂಚಿಕೆ ಪ್ರಕ್ರಿಯೆಗೆ ಕಾಲಾವಕಾಶ ವಿಸ್ತರಿಸಲು ಸುಪ್ರೀಂ ಕೋರ್ಟ್ ಮುಂದೆ ಕೆಲವು ರಾಜ್ಯಗಳು ಮನವಿ ಮಾಡಿವೆ. ಅನುಮತಿ ಸಿಕ್ಕರೆ ನಾವೂ ಎರಡನೇ ಸುತ್ತಿನ ಸೀಟು ಹಂಚಿಕೆ ನಡೆಸಬಹುದು ಎಂದು ಹೇಳುತ್ತಿದ್ದಾರೆ.
ಪಿಜಿ ವೈದ್ಯಕೀಯ ಕೋರ್ಸ್, ಅರ್ಹರಿಂದ ಅರ್ಜಿ ಆಹ್ವಾನ
ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಮತ್ತು ಸೇವಾನಿರತ ವೈದ್ಯರ ಸ್ನಾತಕೋತ್ತರ ಡಿಎನ್‌ಬಿ ಮತ್ತು ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಂಕ್ ಬಿಡುಗಡೆ ಮಾಡಿದೆ. ಅರ್ಹ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅ.15ರಂದು ಬೆಳಗ್ಗೆ 11 ಗಂಟೆಯೊಳಗೆ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಿದ ನಂತರ ಸ್ಲಾಟ್ ಬುಕ್ ಮಾಡಿಕೊಂಡು ಮೂಲ ದಾಖಲೆಗಳ ಪರಿಶೀಲನೆಗೆ ಕೆಇಎ ಕಚೇರಿಗೆ ಹಾಜರಾಗಬೇಕು. ವಿವಿಧ ಮೀಸಲಾತಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಬೇಕು ಎಂದು ಅವರು ವಿವರಿಸಿದ್ದಾರೆ.


