ಬೆಂಗಳೂರು(ಜ.09): ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಸುವ ಕುರಿತಂತೆ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘದ ನಡುವೆ ಪರ-ವಿರೋಧ ನಿಲುವು ಹೊಂದಿರುವ ಹಿನ್ನೆಲೆಯಲ್ಲಿ ಪ್ರದರ್ಶನ ಆಯೋಜಿಸುವ ನಿರ್ಧಾರ ಈಗ ಮುಖ್ಯಮಂತ್ರಿಗಳಿಗೆ ಬಿಡಲಾಗಿದೆ.

ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಸಣ್ಣ ಪ್ರಮಾಣದಲ್ಲಿ ನೆರವೇರಿಸಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದ್ದರೆ, ಇದಕ್ಕೆ ಮೈಸೂರು ಉದ್ಯಾನ ಕಲಾ ಸಂಘ ವಿರೋಧ ವ್ಯಕ್ತ ಪಡಿಸಿದೆ. ಹೀಗಾಗಿ ಈ ಬಗ್ಗೆ ಶೀಘ್ರದಲ್ಲಿ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ.

ದುರಸ್ತಿಗಾಗಿ 2 ಗಂಟೆ ಮೆಟ್ರೋ ಸೇವೆ ಬಂದ್‌: ಎಲ್ಲೆಲ್ಲಿ..? ಇಲ್ನೋಡಿ

ಕಳೆದ ಅವಧಿಯಲ್ಲಿ (2020 ಆಗಸ್ಟ್‌ 15) ಪ್ರದರ್ಶನ ರದ್ದು ಮಾಡಲಾಗಿತ್ತು. ಮತ್ತೊಂದು ಅವಧಿಗೆ ಪ್ರದರ್ಶನ ರದ್ದು ಮಾಡುವುದು ಸೂಕ್ತವಲ್ಲ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆ ಸಚಿವರ ಕಚೇರಿ ಮೂಲಗಳು ತಿಳಿಸಿವೆ.

ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುವುದಕ್ಕೆ ಸರ್ಕಾರದಿಂದ ಈಗಾಗಲೇ ಸೂಚನೆ ಬಂದಿದೆ. ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಸೋಂಕು ನಿಯಂತ್ರಣ ಇಲ್ಲ:

ರಾಜ್ಯದಲ್ಲಿ ಈವರೆಗೂ ಕೊರೋನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಈ ನಡುವೆ ರೂಪಾಂತರ ಕೊರೋನಾ ವೈರಸ್‌ ಹರಡುವ ಆತಂಕ ಇದೆ. ಈ ನಿಟ್ಟಿನಲ್ಲಿ ಜ.26ರ ಫಲಪುಷ್ಪ ಪ್ರದರ್ಶನ ರದ್ದು ಮಾಡುವುದು ಸೂಕ್ತ ಎಂದು ಮೈಸೂರು ಉದ್ಯಾನ ಕಲಾ ಸಂಘ ತಿಳಿಸಿದೆ.

ಅಲ್ಲದೆ, ಪ್ರದರ್ಶನ ಹಮ್ಮಿಕೊಂಡರೆ ಜನರನ್ನು ನಿಯಂತ್ರಣ ಮಾಡಬೇಕಾಗುತ್ತದೆ. ಇದರಿಂದ ಹೆಚ್ಚು ಜನ ಬರುವುದನ್ನು ತಡೆದಲ್ಲಿ ಪ್ರದರ್ಶನಕ್ಕೆ ಮಾಡುವ ವೆಚ್ಚದ ಮೊತ್ತ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಅವಧಿಗೆ ಪ್ರದರ್ಶನ ರದ್ದು ಮಾಡುವುದು ಸೂಕ್ತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಲಾಲ್‌ಬಾಗ್‌ ಕೆರೆಗೆ ಬರುವ ವಲಸೆ ಹಕ್ಕಿಗಳ ಮೇಲೆ ನಿಗಾ

ಲಾಲ್‌ಬಾಗ್‌ ಕರೆಗೆ ಪ್ರತಿ ವರ್ಷ ನೂರಾರು ವಲಸೆ ಹಕ್ಕಿಗಳು ಬರುತ್ತವೆ. ಪ್ರಸಕ್ತ ವರ್ಷ ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಕುರಿತು ಈಗಾಗಲೇ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ವಲಸೆ ಹಕ್ಕಿಗಳ ಬಗ್ಗೆ ನಿಗಾ ವಹಿಸಲಾಗಿದೆ. ಯಾವುದಾದರು ಪಕ್ಷಿ ಮೃತ ಪಟ್ಟಲ್ಲಿ ತಕ್ಷಣ ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.