ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಇನ್ನೂ 8 ಕೋಚ್‌ಗಳನ್ನು ಸೇರಿಸಿ: ಶಿವಮೊಗ್ಗ ಸಂಸದರ ಆಗ್ರಹ!
ಬೆಂಗಳೂರು ಹಾಗೂ ಕಾರವಾರ ನಡುವೆ ನಿತ್ಯ ಸಂಚಾರ ಮಾಡುವ ಪಂಚಗಂಗಾ ಎಕ್ಸ್‌ಪ್ರೆಸ್ ಪ್ರತಿದಿನವೂ ಸಂಪೂರ್ಣ ಭರ್ತಿಯಾಗಿ ಓಡಾಟ ನಡೆಸುತ್ತದೆ. ಆ ಕಾರಣಕ್ಕಾಗಿ ಈ ರೈಲಿಗೆ ಇನ್ನೂ 8 ಹೆಚ್ಚಿವರಿ ಕೋಚ್‌ಗಳನ್ನು ಸೇರಿಸುವಂತೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಆಗ್ರಹಿಸಿದ್ದಾರೆ.
ಬೆಂಗಳೂರು (ಜ.30): ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರತಿದಿನ ಸಂಚಾರ ಮಾಡಿ, ರಾಜ್ಯ ರಾಜಧಾನಿಯ ಸಂಪರ್ಕ ಕೊಂಡಿಯಾಗಿರುವ ಪಂಚಗಂಗಾ ಎಕ್ಸ್‌ಪ್ರೆಸ್ ನಿತ್ಯವೂ ಫುಲ್ ಭರ್ತಿಯಾಗಿ ಓಡಾಟ ನಡೆಸುತ್ತಿದೆ. ಒಂದು ತಿಂಗಳ ಮುಂಚೆ ಟಿಕೆಟ್ ಬುಕ್ ಮಾಡಲು ಪ್ರಯತ್ನ ಮಾಡಿದರೂ ಇದರಲ್ಲಿ ಟಿಕೆಟ್ ಸಿಗೋದಿಲ್ಲ. ಇದರ ನಡುವೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ, ಬೆಂಗಳೂರು-ಕಾರವಾರ ನಡುವೆ ನಿತ್ಯ ಸಂಚಾರ ಮಾಡುವ ಪಂಚಗಂಗಾ ಎಕ್ಸ್‌ಪ್ರೆಸ್ (16595/596) ರೈಲಿಗೆ ಇನ್ನೂ 8 ಕೋಚ್‌ಗಳನ್ನು ಸೇರಿಸುವಂತೆ ಆಗ್ರಹಿಸಿದ್ದಾರೆ. ಆದರೆ, ರೈಲ್ವೆ ಪ್ರಯಾಣಿಕರ ಅಸೋಸಿಯೇಷನ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಹಾಗೇನಾದರೂ ಇನ್ನಷ್ಟು ಕೋಚ್‌ಗಳನ್ನು ಇದಕ್ಕೆ ಸೇರಿಸಿದಲ್ಲಿ ಪ್ರಸ್ತುತ ಇರುವ ರೈಲಿನ ವೇಳಾಪಟ್ಟಿ ಸಂಪೂರ್ಣವಾಗಿ ಬದಲಾಗಲಿದ್ದು, ಬೆಂಗಳೂರು ಹಾಗೂ ಕಾರವಾರ ನಡುವಿನ ಪ್ರಯಾಣ ಅವಧಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮೂಕಾಂಬಿಕಾ ರಸ್ತೆ ನಿಲ್ದಾಣ ಮಾತ್ರವೇ, ಬೈಂದೂರು ಶಿವಮೊಗ್ಗ ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಏಕೈಕ ನಿಲ್ದಾಣವಾಗಿದೆ, ಆದರೆ ಇತರ ಪ್ರಮುಖ ನಿಲ್ದಾಣಗಳು ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಕ್ಷೇತ್ರಗಳಲ್ಲಿವೆ.
ಜನವರಿ 28 ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬರೆದ ಪತ್ರದಲ್ಲಿ. ಬಿವೈ ರಾಘವೇಂದ್ರ ಅವರು ಪಂಚಗಂಗಾ 14 ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಚಲಿಸುತ್ತದೆ ಆದರೆ ಬಹುತೇಕ ಎಲ್ಲಾ ಇತರ ರೈಲುಗಳು 22 ಕೋಚ್‌ಗಳೊಂದಿಗೆ ಚಲಿಸುತ್ತವೆ. 14-ಕೋಚ್ ರೇಕ್ ಮತ್ತು 22-ಕೋಚ್ ರೇಕ್ ಅನ್ನು ಒಂದೇ ರೀತಿಯ ಇಂಜಿನ್‌ಗಳಿಂದ ಎಳೆಯಲಾಗುತ್ತದೆ. ಹೀಗಾಗಿ, 14 ಬೋಗಿಗಳೊಂದಿಗೆ ರೈಲು ಓಡಿಸುವುದರಿಂದ ಸಂಪನ್ಮೂಲ ವ್ಯರ್ಥವಾಗುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಿಂದ ಕಾರವಾರಕ್ಕೆ ಹಾಗೂ ಕಾರವಾರದಿಂದ ಬೆಂಗಳೂರಿಗೆ ಪ್ರಯಾಣಿಸುವ ರೈಲುಗಳಲ್ಲಿ ಸೀಟ್‌ಗಾಗಿ ಭಾರಿ ಬೇಡಿಕೆ ಇದೆ ಎಂದು ತಿಳಿಸಿರುವ ಸಚಿವರು, ಇದರಿಂದಾಗಿ ಪ್ರತಿದಿನ ರೈಲು ಜಾಮ್ ಪ್ಯಾಕ್ ಆಗಿ ಸಂಚಾರ ಮಾಡುತ್ತದೆ. ಪ್ರಸ್ತುತ, ಶಿರಾಡಿ ಘಾಟ್ ವಿಭಾಗದ ಸಿರಿಬಾಗಿಲು ರೈಲು ನಿಲ್ದಾಣದಲ್ಲಿ ಅಪ್ ಮತ್ತು ಡೌನ್ ಪಂಚಗಂಗಾ ಸೇವೆಗಳು ಒಂದಕ್ಕೊಂದು ಮುಖಾಮುಖಿಯಾಗುತ್ತದೆ. ಈ ನಿಲ್ದಾಣ ಕೇವಲ 14 ಬೋಗಿಗಳ ರೈಲಿಗೆ ಮಾತ್ರ ಅವಕಾಶ ಕಲ್ಪಿಸುತ್ತದೆ. ಹಾಗಾಗಿ ಪಂಚಗಂಗಾ ರೈಲಿನ ಕ್ರಾಸಿಂಗ್‌ಅನ್ನು ಸಿರಿಬಾಗಿಲು ರೈಲು ನಿಲ್ದಾಣದಿಂದ ಸುಬ್ರಹ್ಮಣ್ಯ ರಸ್ತೆ ನಿಲ್ದಾಣಕ್ಕೆ ಸ್ಥಳಾಂತರ ಮಾಡು ಪ್ರಸ್ತಾಪ ಮಾಡಿದ್ದಾರೆ. ಸಕಲೇಶಪುರ-ನೆಲಮಂಗಲ ನಡುವಿನ ರನ್ನಿಂಗ್ ವೇಳಾಪಟ್ಟಿಯಲ್ಲಿನ ವಿಳಂಬವನ್ನು ಬಿಗಿಗೊಳಿಸುವುದರಿಂದ ಸಮಯದ ನಷ್ಟವನ್ನು ಮರಳಿ ಪಡೆಯಬಹುದು ಎಂದು ಹೇಳಿದರು. ಬೆಂಗಳೂರು ಮತ್ತು ಕಾರವಾರದಲ್ಲಿ ಪಂಚಗಂಗಾ ಎಕ್ಸ್‌ಪ್ರೆಸ್‌ನ ನಿರ್ಗಮನ ಮತ್ತು ಆಗಮನದ ಸಮಯವನ್ನು ಬದಲಾಯಿಸುವಂತೆ ಅವರು ಸಲಹೆ ನೀಡಿದ್ದಾರೆ.
ರಾಘವೇಂದ್ರ ಅವರ ಸಲಹೆಗೆ ಆಕ್ರೋಶ: ಹಿಂದೆ ಬೆಂಗಳೂರು ಹಾಗೂ ಕಾರವಾರ ನಡುವಿನ ಪ್ರಯಾಣ 17 ಗಂಟೆ ಆಗುತ್ತಿತ್ತು. ಈಗ 14 ಗಂಟೆಯಲ್ಲಿ ರೈಲು ಪ್ರಯಾಣ ಮಾಡಬಹುದು. ಅದೇ ಕಾರಣಕ್ಕಾಗಿ ಪಂಚಗಂಗಾ ಎಕ್ಸ್‌ಪ್ರೆಸ್ ಜನಪ್ರಿಯವಾಗಿದೆ. ಈ ಜನಪ್ರಿಯ ರೈಲಿನ ವೇಳಾಪಟ್ಟಿ ಹಾಳು ಮಾಡುವ ಪ್ರಯತ್ನ ಈ ಪತ್ರ ಮಾಡಬಾರದು ಎಂದು ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿ ರಾಜೀವ್ ಗಾಂವ್ಕರ್ ಹೇಳಿದ್ದಾರೆ. 'ರೈಲಿಗೆ ಹೆಚ್ಚಿನ ಕೋಚ್‌ಗಳನ್ನು ಸೇರಿಸುವುದಕ್ಕೆ ನಮಗೆ ಒಪ್ಪಿಗೆ ಇದೆ. ಆದರೆ, ಈಗಿರುವ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಬಾರದು. ಪ್ರಸ್ತುತ ಈ ರೈಲು ಯಶವಂತಪುರಕ್ಕೆ ಬೆಳಗ್ಗೆ 6.40ಕ್ಕೆ ಹೋಗಿ ಮುಟ್ಟುತ್ತದೆ ಮತ್ತು ಬೆಂಗಳೂರು ರೈಲು ನಿಲ್ದಾಣದಲ್ಲೂ ಸುಲಭವಾಗಿ ಫ್ಲಾಟ್‌ಫಾರ್ಮ್ ಪಡೆದುಕೊಳ್ಳುತ್ತಿದೆ' ಎಂದು ಹೇಳಿದ್ದಾರೆ.
ಹಾಗೇನಾದರೂ ರೈಲು ಹೋಗಿ ಮುಟ್ಟುವುದು 10 ನಿಮಿಷ ತಡವಾದಲ್ಲಿ, ರೈಲು ಬೆಂಗಳೂರಿನ ಹೊರವಲಯದಲ್ಲಿ ನಿಲ್ಲುತ್ತದೆ. ಯಾಕೆಂದರೆ ಆ ಸಮಯದಲ್ಲಿ ಉತ್ತರ ಕರ್ನಾಟಕದಿಂದ ಸಾಕಷ್ಟು ರೈಲುಗಳು ಬೆಂಗಳೂರಿಗೆ ಬರಲು ಆರಂಭಿಸುತ್ತದೆ. ಅಂತಹ ವಿಳಂಬವನ್ನು ಸರಿದೂಗಿಸಲು ಸಕಲೇಶಪುರ ಮತ್ತು ನೆಲಮಂಗಲ ನಡುವೆ ವೇಳಾಪಟ್ಟಿಯಲ್ಲಿ ಹೆಚ್ಚಿನ ಸಮಯ ನೀಡಲಾಗಿದೆ. ಹಾಗಾಗಿ, ಈ ನಿಧಾನಗತಿಯ ಸಮಯವನ್ನು ತೆಗೆದು ಹಾಕಿ, ರಾಘವೇಂದ್ರ ಅವರ ಸಲಹೆಯನ್ನು ಸ್ವೀಕರಿಸುವುದರಿಂದ ಬೆಂಗಳೂರಿಗೆ ಆಗಮಿಸುವ ಸಮಯದ (ಬೆಳಿಗ್ಗೆ 7.10) ಪ್ರತಿಕೂಲ ಪರಿಣಾಮ ಬೀರುತ್ತದೆ, ”ಎಂದು ತಿಳಿಸಿದ್ದಾರೆ.
ಬೆಂಗಳೂರು-ಮಂಗಳೂರು ರೈಲು ಮುರ್ಡೇಶ್ವರಕ್ಕೆ ವಿಸ್ತರಣೆ, ಪ್ರತಾಪ್ ಸಿಂಹ ಮನವಿ ಒಪ್ಪಿದ ರೈಲ್ವೆ ಇಲಾಖೆ!
ಖಾಸಗಿ ಬಸ್ ಮಾಲೀಕರ ಲಾಬಿ ಇರಬಹುದು: ಪಂಚಗಂಗಾ ಸಂಚಾರದ ಸಮಯದ ಮೇಲೆ ಪರಿಣಾಮ ಬೀರುವ ಹೆಚ್ಚುವರಿ ಬೋಗಿಗಳ ಬೇಡಿಕೆಯ ಹಿಂದೆ ಖಾಸಗಿ ಬಸ್ ನಿರ್ವಾಹಕರ ಲಾಬಿ ಇದೆ ಎಂದು ಕುಂದಾಪುರ ರೈಲ್ವೆ ಪ್ರಯಾಣಿಕ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಶಂಕಿಸಿದ್ದಾರೆ. ಬೆಂಗಳೂರು-ಕಾರವಾರ ಸೆಕ್ಟರ್‌ನಲ್ಲಿ ಮತ್ತೊಂದು ರೈಲನ್ನು ಪರಿಚಯಿಸುವುದು ಮತ್ತು ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ ರೈಲನ್ನು (16585/586) ಕಾರವಾರಕ್ಕೆ ವಿಸ್ತರಿಸುವುದು ಮಾತ್ರವೇ ಇದಕ್ಕೆ ಪರಿಹಾರವಾಗಿದೆ ಎಂದಿದ್ದಾರೆ.
ಬೆಂಗಳೂರು-ಕಾರವಾರ ರೈಲಿಗೆ "ಪಂಚಗಂಗಾ ಎಕ್ಸ್‌ಪ್ರೆಸ್" ಎಂದು ನಾಮಕಾರಣ