ಜ್ಞಾನಭಾರತಿ ಇನ್ಸ್ಪೆಕ್ಟರ್ ರವಿ ಅವರ ಅಮಾನತು ಪ್ರಕರಣವು ಹವಾಲಾ ಹಣದ ನಂಟಿನಿಂದ ಹೊಸ ತಿರುವು ಪಡೆದಿದೆ. ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡ ಕಾರ್ಯಾಚರಣೆಯಲ್ಲಿ ವ್ಯಾಪ್ತಿ ಮೀರಿ ವರ್ತಿಸಿದ್ದು ಮತ್ತು ಹಣ ದುರ್ಬಳಕೆಯ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಬೆಂಗಳೂರು (ಜ.21): ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿ ಅವರ ಅಮಾನತು ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಕೇವಲ ಕೊಲೆ ಪ್ರಕರಣದ ತನಿಖೆಯಲ್ಲಿ ವಿಳಂಬ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದರೂ, ಇದರ ಹಿಂದೆ ಕೋಟಿ ಕೋಟಿ ಹವಾಲಾ ಹಣದ ನಂಟಿರುವ ಗಂಭೀರ ಅನುಮಾನಗಳು ವ್ಯಕ್ತವಾಗುತ್ತಿವೆ.

ಘಟನೆಯ ಹಿನ್ನೆಲೆ: ಸಿನಿಮೀಯ ಶೈಲಿಯ ಚೇಸ್!

ಕಳೆದ ಜನವರಿ 15ರ ಮುಂಜಾನೆ ನಾಗರಬಾವಿ ವ್ಯಾಪ್ತಿಯಲ್ಲಿ ಹವಾಲಾ ಹಣ ವರ್ಗಾವಣೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಇನ್ಸ್ಪೆಕ್ಟರ್ ರವಿ ಅವರಿಗೆ ಲಭಿಸಿತ್ತು. ಹ್ಯುಂಡೈ ಐ-10 ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಆರೋಪಿಗಳನ್ನು ಹಿಡಿಯಲು ರವಿ ಅಂಡ್ ಟೀಮ್ ಫೀಲ್ಡಿಗಿಳಿದಿತ್ತು. ಪೊಲೀಸರನ್ನು ಕಂಡೊಡನೆ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಇನ್ಸ್ಪೆಕ್ಟರ್ ರವಿ ಅವರು ತಮ್ಮ ವ್ಯಾಪ್ತಿಯನ್ನು (Jurisdiction) ಮೀರಿ ಆರೋಪಿಗಳನ್ನು ನೈಸ್ ರಸ್ತೆಯವರೆಗೆ ಬೆನ್ನಟ್ಟಿದ್ದರು.

ಹುಳಿಮಾವು ಪೊಲೀಸರ ಸಾಥ್

ಆರೋಪಿಗಳು ನೈಸ್ ರಸ್ತೆಯ ಮೂಲಕ ತಮಿಳುನಾಡಿನತ್ತ ಪಾರಾಗಲು ಯತ್ನಿಸುತ್ತಿದ್ದಾಗ, ಇನ್ಸ್ಪೆಕ್ಟರ್ ರವಿ ಅವರು ಹುಳಿಮಾವು ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರ ಸಹಾಯ ಕೋರಿದ್ದರು. ಇಬ್ಬರೂ ಇನ್ಸ್ಪೆಕ್ಟರ್‌ಗಳು ಜಂಟಿ ಕಾರ್ಯಾಚರಣೆ ನಡೆಸಿ ನೈಸ್ ಟೋಲ್ ಬಳಿ ಕಾರನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಕಾರನ್ನು ತಪಾಸಣೆ ನಡೆಸಿದಾಗ ಬರೋಬ್ಬರಿ 1 ಕೋಟಿ 5 ಲಕ್ಷ ರೂಪಾಯಿ ಹವಾಲಾ ಹಣ ಪತ್ತೆಯಾಗಿತ್ತು. ಆದರೆ, ಅಸಲಿಗೆ ಹವಾಲಾ ಹಣದ ಮೊತ್ತ ಇದಕ್ಕಿಂತಲೂ ಹಚ್ಚಾಗಿದ್ದು, ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಬಿಎಂಟಿಸಿ ಟಿಕೆಟ್ ಹಣ ಗುಳುಂ: ಸ್ವಂತ UPI ಸ್ಕ್ಯಾನರ್ ಬಳಸಿ ಹಣ ಲೂಟಿ ಮಾಡುತ್ತಿದ್ದ 3 ಕಂಡಕ್ಟರ್‌ಗಳ ಅಮಾನತು!

ಅಮಾನತ್ತಿಗೆ ಅಸಲಿ ಕಾರಣವೇನು?

ನಗರ ಪೊಲೀಸ್ ಆಯುಕ್ತರು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ರವಿ ಅವರನ್ನು ಅಮಾನತುಗೊಳಿಸಿದ್ದಾರೆ. ಆದರೆ, ಪೊಲೀಸ್ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳೇ ಬೇರೆ.

ವ್ಯಾಪ್ತಿ ಮೀರಿದ ದಾಳಿ: ತನ್ನ ಠಾಣಾ ವ್ಯಾಪ್ತಿಯನ್ನು ಬಿಟ್ಟು ಬೇರೆಡೆ ದಾಳಿ ಮಾಡುವ ಮುನ್ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೇ? ಎಂಬ ಪ್ರಶ್ನೆ ಎದ್ದಿದೆ.

ಹಣ ನಾಪತ್ತೆ ಆರೋಪ: ಸೀಜ್ ಮಾಡಲಾದ 1.05 ಕೋಟಿ ರೂಪಾಯಿಯಲ್ಲಿ ಒಂದಷ್ಟು ಮೊತ್ತ ಮಿಸ್ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಾರಿನಲ್ಲಿ ಇದಕ್ಕಿಂತಲೂ ಹೆಚ್ಚಿನ ಹಣವಿತ್ತು ಎಂಬ ಮಾಹಿತಿಯೂ ಮೂಲಗಳಿಂದ ಲಭ್ಯವಾಗಿದೆ.

ದಾಖಲೆಗಳಲ್ಲಿ ವ್ಯತ್ಯಾಸ: ಜ್ಞಾನಭಾರತಿ ಇನ್ಸ್ಪೆಕ್ಟರ್ ರವಿ ಅವರೇ ಈ ಪ್ರಕರಣದಲ್ಲಿ ದೂರುದಾರರಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆದರೆ ದಾಖಲಾಗಿರುವ ಹಣಕ್ಕೂ ಸಿಕ್ಕಿರುವ ಹಣಕ್ಕೂ ವ್ಯತ್ಯಾಸವಿದೆಯೇ ಎಂಬ ತನಿಖೆ ನಡೆಯುತ್ತಿದೆ.

ತನಿಖೆಗೆ ಆಯುಕ್ತರ ಕಟ್ಟುನಿಟ್ಟಿನ ಆದೇಶ

ಈ ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತರು, ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಅವರಿಗೆ ಸೂಚಿಸಿದ್ದಾರೆ. ಈಗಾಗಲೇ ಕಾರಿನಲ್ಲಿದ್ದ ಸಿದ್ದಾರ್ಥ, ಸಾಂಬಶಿವ ಮತ್ತು ದಿನೇಶ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಹವಾಲಾ ದಂಧೆಯ ಹಿಂದೆ ಯಾರಿದ್ದಾರೆ? ಇನ್ಸ್ಪೆಕ್ಟರ್ ಅಮಾನತ್ತಿನ ಹಿಂದೆ ಹವಾಲಾ ಹಣದ ಪಾಲಿನ ಕಿತ್ತಾಟವಿದೆಯೇ? ಅಥವಾ ನಿಜಕ್ಕೂ ತನಿಖಾ ವೈಫಲ್ಯವೇ ಅಮಾನತ್ತಿಗೆ ಕಾರಣವೇ? ಎಂಬುದು ಡಿಸಿಪಿ ವರದಿ ಬಂದ ನಂತರವಷ್ಟೇ ಸ್ಪಷ್ಟವಾಗಬೇಕಿದೆ. ಇಂತಹ ಇನ್ನಷ್ಟು ಪ್ರಕರಣಗಳು ನಡೆಯುತ್ತಿವೆಯೇ ಎಂಬುದರ ಮೇಲೆ ಗೃಹ ಇಲಾಖೆ ಕಣ್ಣಿಡಬೇಕಿದೆ.