ಆರ್‌.ವಿ.ರಸ್ತೆ-ಬೊಮ್ಮಸಂದ್ರದ ಹಳದಿ ಮಾರ್ಗವು ಮೇ 2025ರಲ್ಲಿ ಆರಂಭವಾಗುವುದು ನಿಶ್ಚಿತ. ಕಾಳೇನ ಅಗ್ರಹಾರ-ನಾಗವಾರದ ಪಿಂಕ್ ಲೈನ್ ಡಿಸೆಂಬರ್ 2025 ಮತ್ತು 2026ರಲ್ಲಿ ಹಂತ ಹಂತವಾಗಿ ತೆರೆಯಲಾಗುವುದು. ರೋಲಿಂಗ್ ಸ್ಟಾಕ್ ಕೊರತೆಯಿಂದ ವಿಳಂಬವಾಗಿದೆ. ಚೀನಾದ ಸಿಆರ್‌ಆರ್‌ಸಿ ಪೂರೈಸಿರುವ ಚಾಲಕ ರಹಿತ ರೈಲು ಪರೀಕ್ಷಾರ್ಥ ಸಂಚಾರ ನಡೆಸುತ್ತಿದೆ. ಒಟ್ಟು 34 ರೈಲುಗಳು ಸೇರ್ಪಡೆಯಾಗಲಿವೆ. 

ಬಹುನಿರೀಕ್ಷಿತ ಆರ್‌.ವಿ.ರಸ್ತೆ - ಬೊಮ್ಮಸಂದ್ರ (19.15 ಕಿ.ಮೀ.) ಸಂಪರ್ಕಿಸುವ ಹಳದಿ ಮಾರ್ಗ ಮೆಟ್ರೋ ರೈಲಿನ ಸಂಚಾರ ಮೇ 2025 ರಲ್ಲಿ ಅಂದರೆ ಮುಂದಿನ ಎರಡು ತಿಂಗಳಲ್ಲಿ ಆರಂಭವಾಗುವುದು ನಿಶ್ಚಿತವಾಗಿದೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗವನ್ನು ಮೇ 2025 ರೊಳಗೆ ಸಾರ್ವಜನಿಕ ಸೇವೆಗೆ ತೆರೆಯಲಾಗುವುದು" ಎಂದು ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಮಾರ್ಚ್ 4 ರಂದು ರಾಜ್ಯ ವಿಧಾನಸಭೆಯಲ್ಲಿ ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ.

ಪಿಂಕ್ ಲೈನ್ (21.2 ಕಿ.ಮೀ., ಕಾಳೇನ ಅಗ್ರಹಾರದಿಂದ ನಾಗವಾರ) ಸ್ಥಿತಿ ಕುರಿತು ಮಾತನಾಡಿದ ಡಿಸಿಎಂ ಡಿಕೆಶಿ ಈ ಮಾರ್ಗದ 7.5 ಕಿ.ಮೀ ಎತ್ತರದ ವಿಭಾಗ (ಕಾಳೇನ ಅಗ್ರಹಾರ (ಗೊಟ್ಟಿಗೆರೆ) ತಾವರೆಕೆರೆ (ಸ್ವಾಗತ್ ಕ್ರಾಸ್) ಡಿಸೆಂಬರ್ 2025 ರೊಳಗೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಉಳಿದ 13.7 ಕಿಮೀ ಸುರಂಗ ಮಾರ್ಗ (ಡೈರಿ ಸರ್ಕಲ್ ನಿಂದ ನಾಗವಾರ) ಡಿಸೆಂಬರ್ 2026ರ ಒಳಗೆ ಸಂಚಾರ ಮುಕ್ತವಾಗಲಿದೆ ಎಂದಿದ್ದಾರೆ.

Greenpeace India: ಟಿಕೆಟ್‌ ದರ ಏರಿಕೆ ವಿರುದ್ಧ Namma Metro ರೈಲಿನೊಳಗೆ ಮೌನ ಪ್ರತಿಭಟನೆ

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ರೋಲಿಂಗ್ ಸ್ಟಾಕ್ ಕೊರತೆಯನ್ನು ಎದುರಿಸುತ್ತಿದೆ, ಇದು ಹಳದಿ ಮಾರ್ಗವನ್ನು ವಿಳಂಬಗೊಳಿಸಲು ಕಾರಣವಾಗಿದೆ ಎನ್ನಲಾಗಿದೆ. ಹಳದಿ ಮಾರ್ಗವು ಇನ್ಫೋಸಿಸ್‌, ಬಯೋಕಾನ್‌ನಂತಹ ಕಂಪನಿಗಳಿರುವ ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ಕಳೆದ ವರ್ಷದ ಕೊನೆಯಲ್ಲಿ ಡಬಲ್‌ ಡೆಕ್ಕರ್ ಫ್ಲೈಓವರ್‌ನಲ್ಲಿ ವಾಹನಗಳ ಓಡಾಟಕ್ಕೆ ಚಾಲನೆ ಸಿಕ್ಕಿದೆ. ಇದೇ ವೇಳೆ 2024ರ ವರ್ಷಾಂತ್ಯಕ್ಕೆ ಈ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ತಿಳಿಸಿತ್ತು. ಆದರೆ ಇದು ಸಾಧ್ಯವಾಗಿರಲಿಲ್ಲ.

ಒಟ್ಟಾರೆ ಎಂಟು ರೈಲುಗಳಿಂದ ಹಳದಿ ಮಾರ್ಗ ಪ್ರಾರಂಭಿಸಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ. ಚೀನಾದ ಸಿಆರ್‌ಆರ್‌ಸಿ ಪೂರೈಸಿರುವ ಸಿಬಿಟಿಸಿ (ಕಮ್ಯೂನಿಕೇಶನ್‌ ಬೇಸ್ಡ್ ಟ್ರೈನ್‌ ಕಂಟ್ರೋಲ್‌) ತಂತ್ರಜ್ಞಾನ ಆಧಾರಿತ ಚಾಲಕ ರಹಿತ ರೈಲು ಪ್ರತಿದಿನ ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುತ್ತಿದೆ. ಸಿಗ್ನಲಿಂಗ್‌, ವಿದ್ಯುತ್‌ ಪೂರೈಕೆ, ರೈಲಿನ ಸಾಮಾನ್ಯ ವೇಗ, ತಿರುವಿನ ವೇಗ, ಬ್ರೇಕ್‌ ವ್ಯವಸ್ಥೆ, ನಿಲುಗಡೆ ಸೇರಿ ಹಲವು ವಿಧಾನಗಳ ತಪಾಸಣೆಯನ್ನು ನಡೆಸಲಾಗುತ್ತಿದೆ. ಸುಮಾರು 15 ನಿಮಿಷಕ್ಕೆ ಎಂಟು ಆವರ್ತನದಂತೆ ರೈಲುಗಳ ಸಂಚಾರ ಮಾಡಬಹುದು ಎಂದು ಮೆಟ್ರೋ ಅಧಿಕಾರಿಗಳು ಕಳೆದ ಬಾರಿ ವಿವರಿಸಿದ್ದರು.

ಹೊತ್ತಿನ ಊಟಕ್ಕಿಂತಲೂ ಹೆಚ್ಚು ದುಬಾರಿಯಾದ ಮೆಟ್ರೋ ಪ್ರಯಾಣ: ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಒಟ್ಟಾರೆ ಹಳದಿ ಮಾರ್ಗವು 14 ರೈಲುಗಳಿಂದ ಕಾರ್ಯಾಚರಣೆ ಆಗಲಿದೆ. ಇದಲ್ಲದೆ ಈಗಿನ ಚಲ್ಲಘಟ್ಟ-ವೈಟ್‌ಫೀಲ್ಡ್‌ ನೇರಳೆ ಮಾರ್ಗ, ಸಿಲ್ಕ್‌ ಇನ್‌ಸ್ಟಿಟ್ಯೂಟ್‌-ನಾಗಸಂದ್ರ ಹಸಿರು ಮಾರ್ಗಕ್ಕಾಗಿ ತೀತಾಘರ್‌ ರೈಲ್‌ ಸಿಸ್ಟಮ್ಸ್‌ ಕಂಪನಿ 20 ಡಿಟಿಜಿ (ಡಿಸ್ಟೆನ್ಸ್‌ ಟು ಗೋ) ತಂತ್ರಜ್ಞಾನದ ರೈಲುಗಳನ್ನು ನಮ್ಮ ಮೆಟ್ರೋಗೆ ಒದಗಿಸಬೇಕಿದೆ. ಹೀಗೆ ಒಟ್ಟು 34 ರೈಲುಗಳು ಸೇರ್ಪಡೆ ಆಗಲಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.

ಹೊಸ ಕೋಚ್‌ಗಳ ಆಸಿಲೇಷನ್ ಟ್ರಯಲ್ಸ್ ಮತ್ತು ಸುರಕ್ಷತಾ ಕ್ಲಿಯರೆನ್ಸ್ ಸೇರಿದಂತೆ ಎಲ್ಲಾ ಪ್ರಾಯೋಗಿಕ ಸಂಚಾರಗಳು ಮುಗಿಯಬೇಕು. ಕನಿಷ್ಠ 6 ರೈಲುಗಳಿದ್ದರೆ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಬಹುದು. ಅಂತಿಮವಾಗಿ ಮೆಟ್ರೋ ಸುರಕ್ಷತಾ ಆಯುಕ್ತರಿಂದ ಹಸಿರು ನಿಶಾನೆ ಸಿಕ್ಕ ಮೇಲಷ್ಟೇ ಮೆಟ್ರೋ ನಿಗಮವು ಮುಂದಿನ ಹೆಜ್ಜೆ ಇಡಲಿದೆ.

2021ರಲ್ಲೇ ಪೂರ್ಣ ಆಗಬೇಕಿದ್ದ ಮಾರ್ಗ
ಹಳದಿ ಮಾರ್ಗ 2021ರಲ್ಲಿಯೇ ಪೂರ್ಣಗೊಂಡು ಜನಸಂಚಾರದ ಕಾರ್ಯಾಚರಣೆ ಆರಂಭಿಸಬೇಕಿತ್ತು. ಆದರೆ, ಕಾಮಗಾರಿ ವಿಳಂಬ, ರೈಲುಗಳ ಪೂರೈಕೆಯಲ್ಲಿ ತಡವಾದ ಕಾರಣ 4 ವರ್ಷ ವಿಳಂಬವಾಗಿದೆ. 2024ರ ಮಾರ್ಚ್‌ಗೆ ಸಂಪೂರ್ಣ ಮಾರ್ಗ ಮುಕ್ತವಾಗಬೇಕಿತ್ತಾದರೂ ಈಗ 2025ರ ಮೇಗೆ ಬಂದು ನಿಂತಿದೆ.

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ ಒಟ್ಟಾರೆ 19 ಕಿ.ಮೀ. ಇರುವ ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗೆ (ಸಿಎಸ್‌ಬಿ) ಡಬ್ಬಲ್‌ ಡೆಕ್ಕರ್ (3.3 ಕಿ.ಮೀ.) ನಿರ್ಮಿಸಲಾಗಿದೆ. ಡಬ್ಬಲ್‌ ಡೆಕ್ಕರ್‌ ಫ್ಲೈಓವರ್‌ನ ಮೇಲ್ಭಾಗದಲ್ಲಿ ನಮ್ಮ ಮೆಟ್ರೋ ರೈಲು ಓಡಾಡಲಿದೆ. ಕೆಳಭಾಗ ವಾಹನಗಳ ಓಡಾಟಕ್ಕೆ ಮೀಸಲಾಗಿದೆ. 

ಕೆಳರಸ್ತೆಯಿಂದ ಡಬ್ಬಲ್‌ ಡೆಕ್ಕರ್‌ನ ಮೊದಲ ಫ್ಲೈಓವರ್‌ 8 ಮೀ. ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್‌ 16 ಮೀ. ಎತ್ತರದಲ್ಲಿದೆ. ಸಂಚಾರ ದಟ್ಟಣೆ ನಿವಾರಣೆ ದೃಷ್ಟಿಯಿಂದ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗೆ ಸಿಗ್ನಲ್‌ ಮುಕ್ತವಾಗಿಸಲಾಗಿದೆ. ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಹೊಸೂರು ಲೇಔಟನ್ನು ಇದರಿಂದ ಅಡ್ಡಿಯಿಲ್ಲದೆ ತಲುಬಹುದು.

ಸಿಎಸ್‌ಬಿ ಜಂಕ್ಷನ್‌ನಲ್ಲಿ ಕೇವಲ 500 ಮೀ. ಅಂತರದಲ್ಲಿ ಸಿಎಸ್‌ಬಿ-ಕೆ.ಆರ್‌.ಪುರ ಸಂಪರ್ಕಿಸುವ ನೀಲಿ ಮಾರ್ಗ ಹಾಗೂ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗದ ಎರಡು ಮೆಟ್ರೋ ನಿಲ್ದಾಣಗಳು ನಿರ್ಮಾಣ ಆಗಲಿವೆ. ಎರಡು ಮೆಟ್ರೋ ನಿಲ್ದಾಣಗಳ ನಡುವೆ ಟ್ರಾವೆಲೆಟರ್‌ ನಿರ್ಮಿಸಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ.