ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರಿ ಹಣ ಪಡೆಯುತ್ತಿರುವ ಬಗ್ಗೆ ರೈತರಿಂದ ದೂರು ಬರೆಸಿ ಕೊಟ್ಟರೆ ಅಂತಹ ಅಧಿಕಾರಿಯನ್ನು ಇಂದು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಅಮಾನತು ಮಾಡುತ್ತೇನೆ.
ವಿಧಾನಪರಿಷತ್ (ಆ.15): ನಾಡಪ್ರಭು ಕೆಂಪೇಗೌಡ ಬಡಾವಣೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರಿ ಹಣ ಪಡೆದಿದ್ದರೆ, ಭೂ ಸ್ವಾಧೀನ ಪ್ರಕ್ರಿಯೆಯಿಂದ ಕಾನೂನು ಬಾಹಿರವಾಗಿ ಜಮೀನು ಕೈಬಿಟ್ಟಿದ್ದರೆ ತನಿಖೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜೆಡಿಎಸ್ ಸದಸ್ಯ ಟಿ.ಎನ್.ಜವರಾಯಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರಿ ಹಣ ಪಡೆಯುತ್ತಿರುವ ಬಗ್ಗೆ ರೈತರಿಂದ ದೂರು ಬರೆಸಿ ಕೊಟ್ಟರೆ ಅಂತಹ ಅಧಿಕಾರಿಯನ್ನು ಇಂದು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಅಮಾನತು ಮಾಡುತ್ತೇನೆ. ಆ ಮೇಲೆ ತನಿಖೆ ನಡೆಸಲಾಗುವುದು. ಭೂಮಿ ಕಳೆದುಕೊಂಡ ರೈತನಿಗೆ 9,600 ಅಡಿ ಮಾತ್ರ ಸಿಗುತ್ತದೆ. ಅಭಿವೃದ್ಧಿ ಆದ ನಂತರ ಆತನಿಗೆ ಸ್ವಲ್ಪ ಹಣ ಸಿಗಬಹುದು. 2013ರಲ್ಲಿ ಯುಪಿಎ ಸರ್ಕಾರ ತೆಗೆದುಕೊಂಡ ದಿಟ್ಟ ತೀರ್ಮಾನದ ನಂತರ ಎರಡು, ಮೂರು ಹಾಗೂ ನಾಲ್ಕು ಪಟ್ಟು ಹಣ ನೀಡುವ ತೀರ್ಮಾನವಾಗಿದೆ.
ನಾವು 60:40 ಅನುಪಾತದಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ಯೋಜನೆ ಜಾರಿಗೆ ತಂದಿದ್ದೇವೆ ಎಂದರು. ಭೂಸ್ವಾಧೀನ ಪ್ರಕ್ರಿಯೆಯಿಂದ ಕೆಲವು ಭೂಮಿಯನ್ನು ಕಾನೂನು ಬಾಹಿರವಾಗಿ ಬಿಟ್ಟಿದ್ದರೆ ಅದನ್ನು ತನಿಖೆ ಮಾಡಲು ಸಿದ್ಧವಿದ್ದೇವೆ. ತಮಗೆ ಬೇಕಾದವರ ಜಮೀನು ಕೈಬಿಡಲು ಸಾಧ್ಯವಿಲ್ಲ. ಈ ಬಗ್ಗೆ ವಿವರ ಕೊಟ್ಟರೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿ ವರ್ಷ ₹1 ಸಾವಿರ ಕೋಟಿ ನಷ್ಟ: ಶಿವರಾಮ ಕಾರಂತ ಬಡಾವಣೆ ಯೋಜನೆ ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ನಿರ್ಮಾಣವಾಗುತ್ತಿದ್ದು, ಈಗ ಒಂದು ಹಂತಕ್ಕೆ ಬಂದಿದೆ. ಸರ್ಕಾರ ಸುಮಾರು ₹7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ಇದುವರೆಗೂ ಒಬ್ಬ ರೈತನಿಗೂ ಅಲ್ಲಿ ನಿವೇಶನ ನೀಡಲು ಆಗಿಲ್ಲ. ತಾವು ಬಂದ ನಂತರ ಅರ್ಜಿ ಹಾಕಲು ಅವಕಾಶ ನೀಡಿದೆ. ಆದರೆ ಹೈಕೋರ್ಟ್ ಅರ್ಜಿ ಸ್ವೀಕಾರದಲ್ಲೂ ಯಥಾಸ್ಥಿತಿ ಕಾಯುವಂತೆ ಆದೇಶಿಸಿದೆ.
ಈ ತಡೆಯಾಜ್ಞೆ ಇರುವ ಕಾರಣ ಸರ್ಕಾರಕ್ಕೆ ಪ್ರತಿ ವರ್ಷ ₹1 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ಡಿಕೆಶಿ ತಿಳಿಸಿದರು. ಈ ಜಮೀನು ಅಧಿಸೂಚನೆಯಾಗಿ 15 ವರ್ಷವಾಗಿದೆ. ಆ ಭಾಗದ ಕೆಲವು ರೈತರಿಗೆ ಒಂದು ರೂಪಾಯಿ ಹಣ ಕೂಡ ಸಿಕ್ಕಿಲ್ಲ. ಜಮೀನೂ ಇಲ್ಲವಾಗಿ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಜಮೀನು ಕಳೆದುಕೊಂಡವರಿಗೆ ನಿವೇಶನ ಹಂಚುವ ವ್ಯವಸ್ಥೆ ಮಾಡುತ್ತೇನೆ ಎಂದರು.
