ಬೆಂಗಳೂರು(ಜೂ.10): ಜನರೇಟರ್‌ನಲ್ಲಿ ಬಂದ ಹೊಗೆ (ಕಾರ್ಬನ್‌ ಮಾನಾಕ್ಸೈಡ್‌) ಸೇವಿಸಿ ನಿದ್ರೆಯಲ್ಲಿದ್ದ ದಂತ ವೈದ್ಯರೊಬ್ಬರು ಕ್ಲಿನಿಕ್‌ನಲ್ಲಿ ಅಸುನೀಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದಂತ ವೈದ್ಯ ನಿತಿನ್‌ ಶೆಟ್ಟಿ(26) ಮೃತರು.ಈ ಸಂಬಂಧ ಮೃತರ ಸಂಬಂಧಿ ಆಕಾಶ್‌ ಆಳ್ವಾ ಅವರು ಕೊಟ್ಟದೂರಿನ ಮೇರೆಗೆ ಸರ್ಜಾಪುರ ರಸ್ತೆಯಲ್ಲಿರುವ ಪಾರ್ಥ ದಂತ ಕ್ಲಿನಿಕ್‌ ಮಾಲಿಕರು, ಬೆಂಗಳೂರು ವಿಭಾಗದ ಪ್ರಭಾರಿ ಡಾ.ವಿಜಯ್‌ ಆನಂದ್‌ ಹಾಗೂ ವಲಯ ವಿಭಾಗದ ಅಧಿಕಾರಿ ಡಾ.ವೇಣು ಜಯರಾಮ್‌ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಾಗಿದೆ ಎಂದು ಬೆಳ್ಳಂದೂರು ಪೊಲೀಸರು ಹೇಳಿದ್ದಾರೆ.

ನಮ್ಮಲ್ಲೂ ಇದ್ದಾರೆ ನೀಚರು; ಹಣ್ಣಿನಲ್ಲಿ ವಿಷವಿಟ್ಟು 3 ಹಸುಗಳನ್ನು ಕೊಂದರು..!

ಮೂಲತಃ ಮಂಗಳೂರಿನ ದಂತ ವೈದ್ಯ ನಿತಿನ್‌ಶೆಟ್ಟಿಅವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಪತ್ನಿ ಜತೆ ನಗರದಲ್ಲಿ ನೆಲೆಸಿದ್ದರು. ಎರಡೂವರೆ ತಿಂಗಳ ಹಿಂದೆಯಷ್ಟೇ ನಿತಿನ್‌ ಅವರು ಸರ್ಜಾಪುರ ರಸ್ತೆಯಲ್ಲಿರುವ ಪಾರ್ಥ ಡೆಂಟಲ್‌ ಕ್ಲಿನಿಕ್‌ನಲ್ಲಿ ಡೆಂಟಿಸ್ಟ್‌ ಆಗಿ ಕೆಲಸಕ್ಕೆ ಸೇರಿದ್ದರು. ಕೊರೋನಾದಿಂದ ಲಾಕ್‌ಡೌನ್‌ ಆದ ಕಾರಣ ಕ್ಲಿನಿಕನ್ನು ಮುಚ್ಚಲಾಗಿತ್ತು. ನಿತಿನ್‌ ಶೆಟ್ಟಿಅವರು ಲಾಕ್‌ಡೌನ್‌ ತೆರವುಗೊಂಡ ಬಳಿಕ ಮೇ 21ರಂದು ಬೆಳಗ್ಗೆ 9ರ ಸುಮಾರಿಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಕ್ಲಿನಿಕ್‌ನಲ್ಲಿ ವಿದ್ಯುತ್‌ ಇರಲಿಲ್ಲ, ಸಹಾಯಕನೂ ಬೇರೆಡೆ ಹೋಗಿದ್ದ.

ನಿತಿನ್‌ ಅವರೇ ಜನರೇಟರ್‌ ಅನ್‌ ಮಾಡಿದ್ದಾರೆ. ಮಧ್ಯಾಹ್ನ ಕ್ಲಿನಿಕ್‌ನ ಆಪರೇಷನ್‌ ಥಿಯೇಟರ್‌ನಲ್ಲಿ ನಿದ್ರೆಗೆ ಜಾರಿದ್ದು, ಈ ವೇಳೆ ಜನರೇಟರ್‌ನಿಂದ ಬಂದಿರುವ ಕಾರ್ಬನ್‌ ಮಾನಾನ್ಸೈಡ್‌ ಕ್ಲಿನಿಕ್‌ ಒಳಗೆ ಹರಡಿದೆ. ನಿದ್ರೆಯಲ್ಲಿದ್ದ ಕಾರಣ ಅವರಿಗೆ ಗೊತ್ತಾಗಿಲ್ಲ. ಅಲ್ಲದೆ, ಜನರೇಟರ್‌ನಿಂದ ಕಪ್ಪು ಹೊಗೆ ಬೀರದ, ವಾಸನೆ ಕೂಡ ಬರುವುದಿಲ್ಲ. ಈ ವಿಷ ಅನಿಲ ಸೇವನೆಯಿಂದಾಗಿ ಮೃತಪಟ್ಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕ್ಲಿನಿಕ್‌ ಸಣ್ಣದಾಗಿದ್ದು, ಫ್ಯಾಬ್ರಿಕೇಷನ್‌ನಿಂದಾಗಿ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಹೀಗಾಗಿ ಒಳಗಡೆ ಆಮ್ಲಜನಕ ಬರುವಷ್ಟರ ಮಟ್ಟಿಗೆ ಜಾಗ ಇರಲಿಲ್ಲ. ಎರಡು ತಿಂಗಳು ಕಾಲ ಮುಚ್ಚಿದ್ದ ಕ್ಲಿನಿಕನ್ನು ತೆರೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸ್ಪೋಟಕವಿಟ್ಟ ಹಣ್ಣು ಸೇವಿಸಿ ಆನೆ ಸಾವನ್ನಪ್ಪಿದ ಘಟನೆ ಆಕಸ್ಮಿಕ: ಕೇಂದ್ರ

ಏಳು ಗಂಟೆಯಾದರೂ ವೈದ್ಯ ನಿತಿನ್‌ ಅವರು ಮನೆ ಬಂದಿರಲಿಲ್ಲ. ಎಷ್ಟುಬಾರಿ ಕರೆ ಮಾಡಿದರೂ ಪತಿ ಕರೆ ಸ್ವೀಕರಿಸಿಲ್ಲ. ಆತಂಕಗೊಂಡ ವೈದ್ಯರ ಪತ್ನಿ ನಗರದಲ್ಲಿರುವ ಸಹೋದರನಿಗೆ ಪತಿ ಕರೆ ಸ್ವೀಕರಿಸದ ಬಗ್ಗೆ ಮಾಹಿತಿ ನೀಡಿದ್ದರು. ಆಕಾಶ್‌ ಆಳ್ವಾ ಅವರು ರಾತ್ರಿ 9.30 ಗಂಟೆ ಸುಮಾರಿಗೆ ಕ್ಲಿನಿಕ್‌ ಹೋಗಿ ನೋಡಿದ್ದರು. ನಿತಿನ್‌ ಆಪರೇಷನ್‌ ಥಿಯೇಟರ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿತಿನ್‌ ಅವರನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ನಿತಿನ್‌ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಈ ಸಂಬಂಧ ಮೃತರ ಸಂಬಂಧಿ ಕೊಟ್ಟದೂರಿನ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.