ನವದೆಹಲಿ(ಜೂ.09): ಕೇರಳದಲ್ಲಿ ಇತ್ತೀಚೆಗೆ ಆನೆಯೊಂದು ಸಿಡಿಮದ್ದು ಅಡಗಿಸಿಟ್ಟಿದ್ದ ಅನಾನಸ್‌ ಸೇವಿಸಿ ಸಾವನ್ನಪ್ಪಿದ್ದ ಘಟನೆ, ಆನೆ ಹತ್ಯೆಗೆ ನಡೆಸಿದ ಸಂಚು ಅಲ್ಲದಿರಬಹುದು ಎಂದು ಕೇಂದ್ರ ಪರಿಸರ ಇಲಾಖೆ ಹೇಳಿದೆ. ಘಟನೆ ಕುರಿತು ನಡೆಸಿದ ಪ್ರಾಥಮಿಕ ತನಿಖೆಯಿಂದ ಈ ಅಂಶ ಕಂಡುಬಂದಿದೆ ಎಂದು ಅದು ಮಾಹಿತಿ ನೀಡಿದೆ.

ಅಲ್ಲಿ ಆನೆ, ಇಲ್ಲಿ ಶ್ವಾನ..ಮಾನವೀಯತೆ ಮರೆತ ಮಾನವ!

ಇದೇ ವೇಳೆ ರೈತರು ಬೆಳೆಗಳನ್ನು ಕಾಡುಹಂದಿ ಸೇರಿದಂತೆ ಇತರೆ ಪ್ರಾಣಿಗಳಿಂದ ರಕ್ಷಿಸಲು ಹಣ್ಣುಗಳ ಒಳಗೆ ಪಟಾಕಿ ಮತ್ತು ಇತರ ಸಿಡಿಮದ್ದುಗಳನ್ನು ತುಂಬಿಡುವ ಪರಿಪಾಠ ಇಟ್ಟುಕೊಂಡಿರುವುದೂ ಗಮನಕ್ಕೆ ಬಂದಿದೆ ಎಂದು ಪರಿಸರ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಗರ್ಭಿಣಿ ಹಸುವಿಗೆ ಸ್ಫೋಟಕ ತಿನ್ನಿಸಿದ್ದ 'ರಾಕ್ಷಸ' ಅರೆಸ್ಟ್!

ಇದೇ ವೇಳೆ ಆನೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ, ಈ ಕೃತ್ಯದ ಹಿಂದಿರುವ ಇತರ ತಪ್ಪಿತಸ್ಥರ ತ್ವರಿತ ಬಂಧನ ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕೇರಳ ಸರ್ಕಾರಕ್ಕೆ ಮಾರ್ಗಸೂಚಿಗಳನ್ನು ರವಾನಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬುವ ವದಂತಿಗಳಿಗೆ ಯಾರೂ ಸಹ ಕಿವಿಗೊಡಬಾರದು. ಕೇರಳ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಈ ಪ್ರಕರಣವನ್ನು ವಸ್ತುನಿಷ್ಠವಾಗಿ ತನಿಖೆ ನಡೆಸುತ್ತಿವೆ ಎಂದು ಜನತೆಗೆ ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ ಅವರು ಕರೆ ನೀಡಿದ್ದಾರೆ.