ಒಂದೇ ಮಳೆಗೆ ಹಾಳೂರಾದ ಬೆಂಗಳೂರು, 7 ಸಾವು, ಸಂಪೂರ್ಣ ಅಸ್ತವ್ಯಸ್ತಕ್ಕೆ ಯಾರು ಹೊಣೆ? ಕಾಂಪೌಂಡ್ ಕುಸಿತ, ಧರೆಗುರುಳಿದ ಮರಗಳು, ವಾಹನಗಳ ಮೇಲೆ ಬಿದ್ದ ಮರ ಸೇರಿದಂತೆ ಒಂದು ಮಳೆ ಬೆಂಗಳೂರಲ್ಲಿ ಅವಾಂತರ ಸೃಷ್ಟಿಸಿದೆ. 

ಬೆಂಗಳೂರು (ಏ.29) ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಉರಿ ಬಿಸಿಲ ಬೇಗೆ ನಡುವೆ ಸುರಿದ ಮಳೆ ತಂಪರೆಯುವ ಬದಲು ಆತಂಕ ಹೆಚ್ಚಿಸಿದೆ. ಒಂದು ಮಳೆಗೆ ಬೆಂಗಳೂರು ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರಿ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆಗೆ ಬೆಂಗಳೂರಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶಿವಾಜಿನಗರ ಬೌರಿಂಗ್ ಆಸ್ಪತ್ರೆ ಬಳಿಯ ಕಾಂಪೌಂಡ್ ಕುಸಿದು 7 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇನ್ನು 50ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ವಾಹನಗಳು ಜಖಂಗೊಂಡಿದೆ. ಅರ್ಧ ಗಂಟೆ ಸುರಿದ ಮಳೆಗೆ ಬೆಂಗಳೂರಿನ ಪರಿಸ್ಥಿತಿ ಸಂಪೂರ್ಣ ಹದೆಗೆಟ್ಟಿದೆ. ಬೆಂಗಳೂರಿನ ಈ ಸ್ಥಿತಿಗೆ ಹೊಣೆ ಯಾರು, ಮಳೆರಾಯನೋ ಅಥವಾ ನಮ್ಮ ಆಡಳಿತವೋ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದುರ್ಬಲ ಗೋಡೆಗಳ ಕುರಿತು ಆಡಳಿತಕ್ಕೆ ಗೊತ್ತಿರಲಿಲ್ಲವೇ?

ಸಾಮಾನ್ಯವಾಗಿ ಎಪ್ರಿಲ್ ತಿಂಗಳ ಆರಂಭದಿಂದಲೇ ಬೆಂಗಳೂರಿನಲ್ಲಿ ಮಳೆಯಾಗುತ್ತದೆ. ಈ ಬಾರಿ ಎಪ್ರಿಲ್ ಕೊನೆಯ ಹಂತದವರಗೆ ಮಳೆಗಾಗಿ ಕಾಯುವ ಪರಿಸ್ಥಿತಿಯಾಗಿತ್ತು. ಪ್ರತಿ ಬಾರಿ ಬೆಂಗಳೂರಲ್ಲಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಅವಾಂತರಗಳು ಸೃಷ್ಟಿಯಾಗುತ್ತದೆ. ಈ ಬಾರಿ ಪರಿಸ್ಥಿತಿಯನ್ನು ಮೊದಲೇ ಗ್ರಹಿಸಿ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ವಿಫಲಗೊಂಡಿತಾ? ದುರ್ಬಲ ಕಾಂಪೌಂಡ್, ತಡೆಗೋಡೆ, ಕಟ್ಟಡಗಳ ಕುರಿತು ಅಧಿಕಾರಿಗಳಿಗೆ ಮಾಹಿತಿಯೇ ಇರಲಿಲ್ಲವೇ ಅನ್ನೋ ಪ್ರಶ್ನೆಗಳು ಉದ್ಭವಿಸಿದೆ.

ಮರಗಳು ಧರೆಗುರುಳುತ್ತಿರುವುದೇಕೆ?

ಬೆಂಗಳೂರಿನಲ್ಲಿ ಸಣ್ಣ ಮಳೆಯಾದರೂ ಹಲವು ಮರಗಳು ಧರೆಗುರುಳುತ್ತದೆ. ಈ ಪೈಕಿ ಮರದ ರೆಂಬೆ ಕೊಂಬೆಗಳು ಬಿದ್ದು ವಾಹನಗಳು ಜಖಂ, ಸಾರ್ವಜನಿಕರ ಮೇಲೆ ಮರಗಳು ಬಿದ್ದು ಪ್ರಾಣಕ್ಕೆ ಹಾನಿಯಾದ ಘಟನೆಗಳಿವೆ. ಈ ಬಾರಿ ಹಲವು ಮರಘಳು ಧರೆಗುರುಳಿದೆ. ಈ ಕುರಿತು ಮೊದಲೇ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲವೇ? ಮರದ ರೆಂಬೆ ಕಡಿಯುವ, ಒಣಗಿದ ಮರಗಳನ್ನು ತೆರುವುಗೊಳಿಸುವ, ಇರುವ ಮರಗಳ ಬುಡಗಳ ರಕ್ಷಣೆ ಮಾಡುವ ಕೆಲಸ ಕಾರ್ಯಕ್ಕೆ ಅಧಿಕಾರಿಗಳು ಮಂದಾಗುತ್ತಿಲ್ಲವೇ? ಇಲ್ಲೂ ಕೂಡ ನಿರೀಕ್ಷೆಗೂ ಮೀರಿದ ಗಾಳಿ ಮಳೆ ಅನ್ನೋ ಉತ್ತರವೇ? ಬೆಂಗಳೂರಿನ ಅಸ್ತವ್ಯಸ್ತ ಕುರಿತು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ.

ಆನಂದ ರಾವ್ ಸರ್ಕಲ್, ಓಲ್ಡ್ ಏರ್ಪೋರ್ಟ್ ರೋಡ್,ಎಂ ಜಿ ರೋಡ್,ವಸಂತ್ ನಗರ,ಗಿಬಿಎ ಸ್ಮಾರ್ಟ್ ಸಿಟಿ, ನೃಪತುಂಗ ರಸ್ತೆ, ಸಿ ಎಂ ಮನೆ ರಸ್ತೆ, ಶಿವಾನಂದ ಸರ್ಕಲ್ ಸೇರಿದಂತೆ ಹಲವು ಭಾಗದಲ್ಲಿ ಮರಗಳು ಧರೆಗುರುಳಿದೆ. ಶಿವಾನಂದ ಸರ್ಕಲ್ ಬಳಿಯ ಕ್ರೆಸೆಂಟ್ ರಸ್ತೆಯಲ್ಲಿ ಮಳೆಗೆ‌ ಮರ ಧರೆಗುರುಳಿದೆ. 3 ಬೈಕ್, 1 ಕಾರು ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾ ಹಾನಿ‌ ಆಗಿಲ್ಲ. ಭಾರಿ ಮಳೆಯಿಂದ ಬನಶಂಕರಿ ಮೆಟ್ರೊ ನಿಲ್ದಾಣಕ್ಕೂ ನೀರು ನುಗ್ಗಿದೆ.

ಬೆಂಗಳೂರಲ್ಲಿ 78 ಮಿ.ಮಿ ಮಳೆ

ಕಳೆದ ಎರಡು ಗಂಟೆಯಲ್ಲಿ ಬೆಂಗಳೂರು ಸಿಟಿಯಲ್ಲಿ 78 ಮಿ.ಮಿ ಮಳೆಯಾಗಿದೆ. ಹೆಚ್ ಎಎಲ್ ಏರ್ ಪೋರ್ಟ್ ನಲ್ಲಿ 24. 7ಮಿಮಿ ಮಳೆಯಾಗಿದೆ. ಆಲಿಕಲ್ಲು ಸಹಿತ ಮಳೆ ಆತಂಕ ಪ್ರಮಾಣ ಹೆಚ್ಚಿಸಿದೆ.

ರಸ್ತೆ ಮೇಲೆ ನೀರು ಮಳೆಯ ಸಮಸ್ಯೆಯೇ, ಚರಂಡಿ ಸಮಸ್ಯೆಯೋ?

ಇಂದು ಸುರಿದ ಭಾರಿ ಮಳೆಗೆ ಬೆಂಗಳೂರಿನ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುತ್ತಿದ್ದಾರೆ. ಹಲೆವೆಡೆ ನೀರಿನಲ್ಲಿ ವಾಹನಗಳು ಕೆಟ್ಟು ನಿಂತಿದೆ. ಇದು ಪ್ರತಿ ಮಳೆಗೂ ಬೆಂಗಳೂರಿನಲ್ಲಿ ಎದುರಾಗುವ ಸಮಸ್ಯೆ. ಆದರೆ ಚರಂಡಿಯಲ್ಲಿ ಸರಾಗವಾಗಿ ನೀರು ಹರಿದರೆ ರಸ್ತೆ ಮೇಲೆ ನೀರು ಹರಿಯಲು ಸಾಧ್ಯವಿಲ್ಲ. ಆದರೆ ಚರಂಡಿಯಲ್ಲಿ ಕಸಕಡ್ಡಿಗಳೇ ತುಂಬಿಹೋಗಿದೆ. ಮಳೆಗಾಲಕ್ಕೂ ಮೊದಲು ಚರಂಡಿಗಳ ದುರಸ್ತಿ ಕಾರ್ಯಗಳು ಸಂಪೂರ್ಣವಾಗಿ ನಡೆದಿಲ್ಲ. ಇದಕ್ಕೆ ಹೊಣೆ ಯಾರು? ಗ್ರೇಟರ್ ಬೆಂಗಳೂರು ಪ್ರಾಧಿಕಾರ ಏನು ಮಾಡುತ್ತಿದೆ? ಸರ್ಕಾರದ ಜವಾಬ್ದಾರಿ ಏನು? ಬಲಿಯಾದವರಿಗೆ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವುದು ಬೆಂಗಳೂರಿನ ಸಮಸ್ಯೆಗೆ ಪರಿಹಾರವಲ್ಲ ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.