ಬೆಂಗಳೂರಿನಲ್ಲಿ ಭಾರೀ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಹವಾಮಾನ ಇಲಾಖೆಯು ಮುಂದಿನ 7 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆ ನೀಡಿದೆ. ನಾಳೆಯೂ ಬೆಂಗಳೂರಿಗೆ ಆಲಿಕಲ್ಲು ಮಳೆಯಾಗಲಿದೆ.

ಬೆಂಗಳೂರು (ಏ.29): ಕಳೆದೊಂದು ತಿಂಗಳಿನಿಂದ ಬಿಸಿಲಿನಿಂದ ಕಾದು ಕೆಂಡವಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬುಧವಾರ ಸಂಜೆ ಭಾರೀ ಗಾಳಿ, ಗುಡುಗು-ಸಿಡಿಲು ಸಹಿತ ಭರ್ಜರಿ ಆಲಿಕಲ್ಲು ಮಳೆಯಾಗಿದೆ. ಇದರಿಂದ ನೂರಾರು ಮರಗಳು ಧರೆಗುರುಳಿವೆ. ಹಲವು ಅಂಡರ್‌ಪಾಸ್‌ಗಳು ಜಲಾವೃತವಾಗಿವೆ. ಹಲವು ಕಚೇರಿಗಳಿಗೆ, ಮನೆಗಳು ಮಳೆ ನೀರು ನುಗ್ಗಿ ಹಾನಿಗೀಡಾಗಿವೆ. ಇದರ ಜೊತೆಗೆ, ಮುಂದಿನ 7 ದಿನಗಳ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ (Hailstorm) ಹಾಗೂ ಭಾರಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಏಪ್ರಿಲ್ 29 ಮತ್ತು 30: ಭಾರಿ ಮಳೆಯ ಎಚ್ಚರಿಕೆ

ಮುಂದಿನ ಎರಡು ದಿನಗಳು ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಿಗೆ ಅತ್ಯಂತ ನಿರ್ಣಾಯಕವಾಗಿವೆ.

ದಕ್ಷಿಣ ಒಳನಾಡು: ಹಾಸನ, ತುಮಕೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಜನಜೀವನಕ್ಕೆ ಅಡ್ಡಿಯಾಗಬಹುದು. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯ ಮುನ್ಸೂಚನೆ ನೀಡಲಾಗಿದೆ.

ಉತ್ತರ ಒಳನಾಡು: ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿ ಸಹಿತ ಮಳೆಯಾಗಲಿದೆ. ರಾಯಚೂರು, ಯಾದಗಿರಿ ಮತ್ತು ಕಲಬುರಗಿಯಲ್ಲಿ ಕೂಡ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಕರಾವಳಿ: ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಲಘು ಮಳೆಯಾಗಲಿದ್ದರೂ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಉಷ್ಣಾಂಶ ಹೆಚ್ಚಿರಲಿದ್ದು, ಸೆಖೆಯ ವಾತಾವರಣ ಮುಂದುವರಿಯಲಿದೆ.

ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?

ರಾಜಧಾನಿ ಬೆಂಗಳೂರಿನಲ್ಲಿ (ನಗರ ಮತ್ತು ಗ್ರಾಮಾಂತರ) ಏಪ್ರಿಲ್ 29 ರಿಂದ ಮೇ 2 ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಏಪ್ರಿಲ್ 30 ರಂದು ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಸಂಜೆ ಅಥವಾ ರಾತ್ರಿ ವೇಳೆಗೆ ನಗರದ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಲಿದೆ.

ಮೇ 1 ರಿಂದ ಮೇ 5 ರವರೆಗೆ ಮಳೆ ಮುಂದುವರಿಕೆ:

ಮೇ ತಿಂಗಳ ಆರಂಭದಲ್ಲೂ ರಾಜ್ಯದ ದಕ್ಷಿಣ ಭಾಗಗಳಲ್ಲಿ ಮಳೆ ಮುಂದುವರಿಯಲಿದೆ.

ಮೇ 1 ಮತ್ತು 2: ಉತ್ತರ ಕರ್ನಾಟಕದಲ್ಲಿ ಮಳೆ ಕ್ಷೀಣಿಸಲಿದ್ದರೂ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಮಳೆ ಮುಂದುವರಿಯಲಿದೆ.

ಮೇ 3 ರಿಂದ 5: ಕರಾವಳಿ ಮತ್ತು ಉತ್ತರ ಒಳನಾಡು ಬಹುತೇಕ ಒಣ ಹವೆಯಿಂದ ಕೂಡಿರಲಿದೆ. ಆದರೆ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಲಘುವಾದ ಮಳೆ ಮುಂದುವರಿಯುವ ಲಕ್ಷಣಗಳಿವೆ.

ರೈತರಿಗೆ ಮತ್ತು ಸಾರ್ವಜನಿಕರಿಗೆ ಸೂಚನೆ:

ಮಳೆಯ ಜೊತೆಗೆ ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿರುವುದರಿಂದ ಹಳೆಯ ಕಟ್ಟಡಗಳ ಕೆಳಗೆ ಅಥವಾ ಮರಗಳ ಕೆಳಗೆ ಆಶ್ರಯ ಪಡೆಯದಂತೆ ಸೂಚಿಸಲಾಗಿದೆ. ಆಲಿಕಲ್ಲು ಮಳೆಯಿಂದಾಗಿ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಯಿದ್ದು, ರೈತರು ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ. ಗುಡುಗು ಮಿಂಚಿನ ಸಂದರ್ಭದಲ್ಲಿ ವಿದ್ಯುತ್ ಕಂಬಗಳಿಂದ ದೂರವಿರಲು ಹವಾಮಾನ ಇಲಾಖೆ ಸಲಹೆ ನೀಡಿದೆ.