ಇಂಟರ್ನ್‌ಶಿಪ್ ಎಂಬುದು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಬಯಸುವ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ಅನೇಕ ವಿದ್ಯಾರ್ಥಿಗಳಿಗೆ ಬಹಳ ಅಗತ್ಯವಾಗಿ ಬೇಕಾಗಿರುವಂತಹ ಪ್ರಕ್ರಿಯೆಯಾಗಿದೆ.
ಹಲವು ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ಗೆ ಸೇರುವ ವಿದ್ಯಾರ್ಥಿಗಳು ಅಲ್ಲೇ ತಮ್ಮ ಕಾರ್ಯಕ್ಷಮತೆಯ ಪ್ರದರ್ಶನ ಮಾಡಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಹೀಗಾಗಿ ಉದ್ಯೋಗ ಅರಸುವ ವಿದ್ಯಾರ್ಥಿಗಳಿಗೆ ಇದು ಬಹಳ ಅಗತ್ಯ.
ಹಲವು ಕಂಪನಿಗಳು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶ ನೀಡುತ್ತವೆ. ಆದರೆ ಈ ಸಮಯದಲ್ಲಿ ಕೆಲವು ಕಡೆಗಳಲ್ಲಿ ವೇತನ ನೀಡುವುದಿಲ್ಲ, ನೀಡಿದರೂ ಅದು ಯಾವುದಕ್ಕೂ ಸಾಲದ ಸಣ್ಣ ಮೊತ್ತದ ಒಂದು ಗೌರವ ಧನವಾಗಿರುತ್ತದೆ.
ಹೀಗಿರುವಾಗ ಸ್ವಿಟ್ಜರ್ಲ್ಯಾಂಡ್‌ನ ಸಂಸ್ಥೆಯೊಂದು 4 ಲಕ್ಷ ರೂಪಾಯಿ ಸ್ಟೈಫಂಡ್ ನೀಡಿ ಸಮ್ಮರ್ ಇಂಟರ್ನ್‌ಶಿಪ್ ಮಾಡುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ.
ಜಾಗತಿಕ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ವಿಟ್ಜರ್ಲ್ಯಾಂಡ್ ಇಟಿಹೆಚ್ ಝ್ಯೂರಿಚ್ ವಿಶ್ವವಿದ್ಯಾನಿಲಯವು ಸಂಪೂರ್ಣ ಅನುದಾನಿತವಾದ ಇಂಟರ್ನ್‌ಶಿಪ್‌ಗೆ ಅವಕಾಶ ನೀಡುತ್ತಿದೆ.
ಈ ಎರಡು ತಿಂಗಳ ಬೇಸಿಗೆ ಇಂಟರ್ನ್‌ಶಿಪ್ 2026ರಿಂದ ಆರಂಭವಾಗಲಿದ್ದು, ಈ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ 4 ಲಕ್ಷ ರೂಪಾಯಿ ಸ್ಟೈಫಂಡ್ ನೀಡಲಾಗುತ್ತದೆ.
ಜಗತ್ತಿನೆಲ್ಲೆಡೆಯ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಗಣಿತ, ಭೌತಶಾಸ್ತ್ರ ಸಂಬಂಧಿತ ವಿಷಯಗಳ ವಿದ್ಯಾರ್ಥಿಗಳಿಗೆ ಈ ಸಮ್ಮರ್ ಇಂಟರ್ನ್‌ಶಿಪ್‌ನಲ್ಲಿ ಭಾಗವಹಿಸುವುದಕ್ಕೆ ಮುಕ್ತ ಅವಕಾಶವಿದೆ.
ಈ ಇಂಟರ್ನ್‌ಶಿಪ್‌ನಲ್ಲಿ ಮೇಲೆ ಹೇಳಿದ ವಿಷಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಮೂರನೇ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಈ ಸಮ್ಮರ್ ಇಂಟರ್ನ್‌ಶಿಪ್ ಎರಡು ತಿಂಗಳ ಕಾಲ ನಡೆಯಲ್ಲಿದ್ದು, ವಾರದಲ್ಲಿ 40 ಗಂಟೆಗಳ ಕೆಲಸವಿರುತ್ತದೆ. ಜೂನ್ 15ರ 2026ರಿಂದ ಈ ಇಂಟರ್ನ್‌ಶಿಪ್ ಆರಂಭವಾಗಲಿದೆ.
ಈ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳು ಆರೋಗ್ಯವಿಮೆ ಸೌಲಭ್ಯದ ಜೊತೆಗೆ ದಿನಕ್ಕೆ 93 ಸಿಹೆಚ್‌ಎಫ್ ಎಂದರೆ 10,064 ರೂಪಾಯಿ ತೆರಿಗೆ ಮುಕ್ತ ವೇತನವನ್ನು ಪಡೆಯಲಿದ್ದಾರೆ.
ಈ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ವಿಟ್ಜರ್ಲ್ಯಾಂಡ್‌ಗೆ ಪ್ರಯಾಣಿಸುವ ಸವಲತ್ತು, ಅಲ್ಲಿ ವಸತಿ ಹಾಗೂ ಐಟಿ ಹಾಗೂ ಭೌತಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ನೀಡುವುದಕ್ಕೆ ಅವಕಾಶ ಇರುತ್ತದೆ.
ಈ ಫೇಲೋಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜೀವನ ವೆಚ್ಚ, ವಸತಿ, ಪ್ರಯಾಣ ವೆಚ್ಚವನ್ನು ಯುನಿವರ್ಸಿಟಿಯೇ ಭರಿಸಲಿದ್ದು, ಇದರ ಜೊತೆಗೆ ವೀಸಾಗೆ ವೆಚ್ಚವಾದ ಹಣವನ್ನು ಮರುಪಾವತಿ ಮಾಡಲಾಗುತ್ತದೆ.
ಈ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳು ವಿಶ್ವದರ್ಜೆಯ ಅಧ್ಯಾಪಕರ ಕೆಳಗೆ ಇಟಿಹೆಚ್ ಜ್ಯೂರಿಚ್ ವಿಶ್ವವಿದ್ಯಾನಿಲಯದ ಸಂಶೋಧನಾ ಪ್ರಯೋಗಾಲಯಗಳಲ್ಲಿ ಕೆಲಸ ಮಾಡಲಿದ್ದಾರೆ.
ಈ ಇಂಟರ್ನ್‌ಶಿಪ್‌ಗಾಗಿ ವಿದ್ಯಾರ್ಥಿಗಳು ತಮ್ಮ ರೆಸ್ಯೂಮ್‌ನ ಜೊತೆಗೆ ಎಸ್‌ಒಪಿಯೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.