ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಾಗರೀಕರ ಸಹನೆ ಮಿತಿ ಮೀರಿದೆ. ಬೆಳಗ್ಗೆ ಒಂದು ಕಪ್ ಚಹಾನೋ, ಕಾಫಿನೋ ಕುಡಿಬೇಕು ಎಂದು ಹಾಲು ಕುದಿಸಿದರೆ, ಒಡೆದು ಹೋಗುತ್ತಿದೆ. ಈ ಕುರಿತಾಗಿ ಕೆಎಂಎಫ್‌ಗೆ ದೂರು ನೀಡಿದರೆ, ಬೇಸಿಗೆ ಟೈಮ್‌ನಲ್ಲಿ ಹೀಗೇ ಎನ್ನುವ ಉತ್ತರ ಬಂದಿದೆ.
ಬೆಂಗಳೂರು (ಮಾ.5): ಉದ್ಯಾನನಗರಿಯ ಬೆಂಗಳೂರಿನ ನಾಗರೀಕರ ಪಾಲಿಗೆ ಈ ವಾರ ಕೆಟ್ಟದಾಗಿತ್ತು. ಅದಕ್ಕೆ ಕಾರಣ, ಕೆಎಂಎಫ್. ಹೌದು, ಬೆಳ್ಳಬೆಳ್ಳಗ್ಗೆ ಚಳಿಯಲ್ಲಿ ಒಂದೊಳ್ಳೆ ಕಾಫಿನೋ, ಚಹಾನೋ ಮಾಡಿ ಕುಡಿಯೋಣ ಎಂದು ಹಾಲನ್ನು ಕುದಿಸಿದರೆ, ಅದು ಒಡೆದು ಹೋಗುತ್ತಿದೆ. ಕೆಟ್ಟ ಹಾಲು ಕಾಫಿ, ಟೀ ಮಾತ್ರವಲ್ಲ ಜನರ ಮೂಡ್‌ಅನ್ನು ಕೂಡ ಹಾಳು ಮಾಡಿದೆ. ಕೆಎಂಎಫ್‌ಗೆ ಹಿಡಿಶಾಪ ಹಾಕುತ್ತಲೇ ಹತ್ತಿರದ ಅಂಗಡಿಗೆ ಹೋಗಿ ಹಾಲು ತಂದೋ, ಇಲ್ಲವೇ ಅಂಗಡಿಗೆ ಹೋಗಿಯೇ ಕಾಫೀ-ಟೀ ಕುಡಿದು ಬರುತ್ತಿದ್ದಾರೆ. ಅದರಲ್ಲ ಕಳೆದ ಬುಧವಾರ ಹಾಗೂ ಗುರುವಾರ ಇದರಿಂದ ರೋಸಿಹೋದ ಬೆಂಗಳೂರಿನ ಹಲವು ನಾಗರೀಕರು ಸೀದಾ ಕೆಎಂಎಫ್‌ಗೆ ಕರೆ ಮಾಡಿ ಜಾಡಿಸಿದ್ದಾರೆ. ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ನಂದಿನ ಟೋನ್ಡ್ ಹಾಲನ್ನು (ನೀಲಿ ಪ್ಯಾಕೆಟ್) ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಸರಬರಾಜು ಮಾಡುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಎಂಎಫ್‌ನ ಈ ಹಾಲುಗಳು ಕೆಟ್ಟ ಗುಣಮಟ್ಟವನ್ನು ಹೊಂದಿದೆ ಎಂದು ಆರೋಪಿಸಲಾಗಿದೆ.
ಈಗಾಗಲೇ ಬೆಂಗಳೂರಿನ ಹೆಚ್ಚಿನ ನಿವಾಸಿಗಳು ಕೆಎಂಎಫ್‌ನ ಹೆಲ್ಪ್‌ಲೈನ್‌ಗೆ ಕರೆ ಮಾಡಿ ತಮ್ಮ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೇವಲ ಬೆಂಗಳೂರು ಮಾತ್ರವಲ್ಲದೆ, ಕೆಎಂಎಫ್‌ನಿಂದ ಸರಬರಾಜು ಆಗುತ್ತಿರುವ ನಗರದ ಇತರ ಪ್ರದೇಶಗಳಲ್ಲೂ ಹಾಲಿನ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ದೂರುಗಳು ಬಂದಿವೆ. ಹೆಚ್ಚಿನ ಈ ಎಲ್ಲಾ ದೂರುಗಳು ಯಲಹಂಕದಲ್ಲಿರುವ ಕೆಎಂಎಫ್ ಮದರ್ ಡೈರಿಯ ಮಿಲ್ಕ್ ಡೀಲರ್‌ಗಳ ವ್ಯಾಪ್ತಿಗೆ ಬರುವ ಪ್ರದೇಶಗಳಾಗಿವೆ. ಹಲವಾರು ಪ್ರಕರಣಗಳಲ್ಲಿ, ಡೀಲರ್‌ಗಳು ಬೆಳಗ್ಗೆ 6 ಗಂಟೆಯಿಂದಲೇ ದೂರುಗಳನ್ನು ಸ್ವೀಕರಿಸಲು ಆರಂಭಿಸಿದಾಗ ಅವರೂ ಸಹ ಇದನ್ನು ಕೆಎಂಎಫ್ ಮೇಲೆ ಎತ್ತಿಹಾಕಿದ್ದಾರೆ.
ಕೆಲ ದಿನಗಳ ಹಿಂದೆ ಅಂಗಡಿ ತೆರೆದು ಹಾಲು ಮಾರಾಟ ಮಾಡಿದ ಒಂದೇ ಗಂಟೆಯಲ್ಲಿ ಕನಿಷ್ಠ 10 ಗ್ರಾಹಕರು ಒಡೆದ ಹಾಲಿನ ಬಗ್ಗೆ ದೂರು ಕೊಡಲು ಆರಂಭ ಮಾಡಿದ್ದರು. ಅದಲ್ಲದೆ, ಹೆಚ್ಚಿನವರು ನಮಗೆ ಹಾಲಿನ ಹಣವನ್ನು ರೀಫಂಡ್ ಮಾಡಿ, ಕೆಎಂಎಫ್‌ನ ಅಧಿಕಾರಿಗಳು ಹೇಳುವ ಕಥೆಗಳೆಲ್ಲಾ ತಮಗೆ ಬೇಡ ಎನ್ನುತ್ತಿದ್ದಾರೆ ಎಂದು ಪ್ರದೇಶದ ಹಾಲಿನ ಡೀಲರ್ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟರ್‌ನಲ್ಲೂ ವ್ಯಕ್ತಿಯೊಬ್ಬರು ಕೆಎಂಎಫ್‌ನ ಸ್ಪೆಷಲ್ ಹಾಲು (ಆರೆಂಜ್ ಪ್ಯಾಕೆಟ್) ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಲು ತಂದ ಒಂದೇ ದಿನಕ್ಕೆ ಇದು ಹಾಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮುಲ್ ಸಂಸ್ಥೆಯಲ್ಲಿ ಕೆಎಂಎಫ್ ವಿಲೀನ ಇಲ್ಲ: ಸಿಎಂ, ಜೋಶಿ
'ಬೇಸಿಗೆ ಕಾಲವಾಗಿರುವ ಕಾರಣ ಹೀಗೆ ಆಗುತ್ತಿದೆ. ಅದಲ್ಲದೆ, ಹಾಲು ತೆಗೆದುಕೊಂಡು ಹೋದ ಗ್ರಾಹಕ ಅದನ್ನು ಫ್ರಿಜ್‌ನಲ್ಲಿ ಸರಿಯಾದ ತಾಪಮಾನದಲ್ಲಿ ಇಡಬೇಕಾಗುತ್ತದೆ. ಗ್ರಾಹಕರಿಗೆ ಈ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಬೆಂಗಳೂರಿನಲ್ಲಿ ಅಂದಾಜು 20 ಲಕ್ಷ ಲೀಟರ್ ಹಾಲನ್ನು ಕೆಎಂಎಫ್ ಸರಬರಾಜು ಮಾಡುತ್ತದೆ. ಅದರಲ್ಲಿ 10-5 ಲೀಟರ್ ಹಾಲುಗಳು ಮಾತ್ರವೇ ಒಡೆದು ಹೋಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಾಲು ಹಾಳಾಗಿರುವ ಬಗ್ಗೆ ಯಾವುದೇ ದೂರು ಸ್ವೀಕರಿಸಿಲ್ಲ' ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮುಲ್-ಕೆಎಂಎಫ್ ಒಪ್ಪಂದ: ಅಮಿತ್ ಶಾ ಕರೆಗೆ ಸಿದ್ದರಾಮಯ್ಯ ಕೆಂಡ
ಮಾರ್ಚ್ 1 ರಂದು ಬೆಂಗಳೂರಿನ ಹಲವು ಭಾಗಗಳಲ್ಲಿ ಕೆಎಂಎಫ್ ಸರಬರಾಜು ಮಾಡಿದ ನೀಲಿ ಪ್ಯಾಕೆಟ್ ನಂದಿನಿ ಹಾಲು ಹಾಳಾಗಿದೆ. ಮರುದಿನ ಅಂದರೆ, ಮಾರ್ಚ್ 2 ರಂದು ಕಿತ್ತಳೆ ಬಣ್ಣದ ಪ್ಯಾಕೆಟ್‌ನ ಹಾಲು ಕೂಡ ಹಾಳಾಗಿದೆ? ಡೈರಿಯಲ್ಲಿ ಏನಾದರೂ ಸಮಸ್ಯೆ ಇದೆಯೇ? ಮರುಪಾವತಿ ಹೇಗೆ ಮಾಡುತ್ತೀರಿ ಎಂದು ಅನಿಲ್ ಬುದರ್ ಎನ್ನುವ ವ್ಯಕ್ತಿ ಟ್ವಿಟರ್‌ನಲ್ಲಿ ಕೆಎಂಎಫ್‌ಗೆ ಪ್ರಶ್ನೆ ಮಾಡಿದ್ದಾರೆ. 'ಅಷ್ಟೇ ಅಲ್ಲ, ಕಳೆದ ಕೆಲವು ದಿನಗಳಿಂದ ಹಾಲು ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದು ಕೆಎಂಎಫ್ ಹಾಲಿನ ಮಳಿಗೆ ತಿಳಿಸಿದೆ' ಎಂದು ಇನ್ನೊಬ್ಬರು ಬರೆದಿದ್ದಾರೆ.
