ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹಸಿವಿನಿಂದ ಮೂರು ಹುಲಿ ಮರಿಗಳು ಸಾವನ್ನಪ್ಪಿವೆ. ತಾಯಿ ಹುಲಿ ಮರಿಗಳಿಗೆ ಹಾಲುಣಿಸದೇ ಇರುವುದು ಮತ್ತು ಮೃಗಾಲಯದ ಸಿಬ್ಬಂದಿ ನಿರ್ಲಕ್ಷ್ಯ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ಘಟನೆ ಮೃಗಾಲಯ ಪ್ರಾಣಿಗಳ ಆರೈಕೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರು (ಜು.13): ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 2 ಗಂಡು ಹಾಗೂ ಒಂದು ಹೆಣ್ಣು ಸೇರಿದಂತೆ 3 ಹುಲಿ ಮರಿಗಳು ಹಸಿವಿನಿಂದ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಈ ಹುಲಿ ಮರಿಗಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪರಿಸರ ಪ್ರೇಮಿಗಳು ಹಾಗೂ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಒಂದು ವಾರದ ಹಿಂದೆ ‘ಹಿಮಾ’ (ವಯಸ್ಸು 7 ವರ್ಷ) ಹೆಸರಿನ ಹುಲಿ 3 ಮರಿಗಳಿಗೆ ಜನ್ಮ ನೀಡಿತ್ತು. ಮರಿಗಳಿಗೆ ಜನ್ಮ ನೀಡಿದ ಹಿಮಾ ಎಂಬ ಹುಲಿ ತಾನೇ ಜನ್ಮ ನೀಡಿದ ಮರಿಗಳಿಗೆ ಹಾಲುಣಿಸದೇ ಅವುಗಳನ್ನು ಬಿಟ್ಟು ಓಡಾಡಿದೆ. ಆದರೆ, ಇದಕ್ಕ ಮುನ್ನ 2 ಬಾರಿ ಮರಿಗಳಿಗೆ ಜನ್ಮ ನೀಡಿದ್ದ ಇದೇ ಹುಲಿ ಆಗ ಮರಿಗಳಿಗೆ ಹಾಲುಣಿಸುವ ಮೂಲಕ ಉತ್ತಮವಾಗಿ ಪೋಷಣೆ ಮಾಡಿತ್ತು. ಆದರೆ, ಇದೀಗ ಮೂರನೇ ಬಾರಿಗೆ 3 ಮರಿಗಳಿಗೆ ಜನ್ಮ ನೀಡಿದ್ದರೂ ತನ್ನ ಮರಿಗಳನ್ನು ದೂರ ಇಡುವ ಮೂಲಕ ಅವುಗಳ ಸಾವಿಗೆ ಕಾರಣವಾಗಿದೆ.
ಇನ್ನು ಅರಣ್ಯವಾಸಿಯಾಗಿರುವ ಹುಲಿ ಹಿಮಾ, ತನ್ನ ಸುತ್ತಲಿನ ಪರಿಸರದಿಂದ ಮರಿಗಳಿಗೆ ಹಾಲುಣಿಸುವುದನ್ನು ತ್ಯಜಿಸಿರಬಹುದು. ಆದರೆ, ಅಲ್ಲಿ ಲಕ್ಷಾಂತರ ರೂ. ಸಂಬಳವನ್ನು ಪಡೆಯುತ್ತಾ ತಾವು ಜೈವಿಕ ಉದ್ಯಾನದಲ್ಲಿರುವ ಪ್ರಾಣಿಗಳನ್ನು ಜೋಪಾನವಾಗಿ ನೋಡಿಕೊಳ್ಳುತ್ತೇವೆ ಎಂದು ನೇಮಕವಾಗಿರುವ ಸಿಬ್ಬಂದಿ ಹಾಗೂ ವೈದ್ಯರ ಗಮನ ಎಲ್ಲಿ ಹೋಗಿತ್ತು ಎಂಬುದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ದೇಶದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಿದ್ದು, ಅವುಗಳನ್ನು ಪೋಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಅದರಲ್ಲಿಯೂ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳುವುದಕ್ಕೆಂದೇ ಸರ್ಕಾರದಿಂದ ಸಂಬಳ ಪಡೆಯುವ ಸಿಬ್ಬಂದಿ ತಾಯಿ ಹಾಲು ಸಿಗದ ಹುಲಿ ಮರಿಗಳನ್ನು ಪೋಷಣೆ ಮಾಡಬೇಕಿತ್ತು. ಆದರೆ, ತಮ್ಮ ಜವಾಬ್ದಾರಿಯನ್ನು ಮರೆತು ಹುಲಿ ಮರಿಗಳನ್ನು ಪೋಷಣೆ ಮಾಡದೇ ಕೊಲೆ ಮಾಡಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಹಸಿವಿನಿಂದ ನರಳಿದ ಮರಿಗಳು ಸಾವನ್ನಪ್ಪಿದ ಬಳಿಕ ಇದೀಗ ಮೃಗಾಲಯದ ನಿರ್ವಹಣೆ, ವೈದ್ಯಕೀಯ ಗಮನ ಮತ್ತು ಸಿಬ್ಬಂದಿಯ ಕಾರ್ಯ ನಿರ್ವಹಣೆ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಗರ್ಭಿಣಿ ಜೀಬ್ರಾ ಸಹ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ, ವೈದ್ಯರ ಕೆಲಸದ ಮೇಲಿನ ಅನುಮಾನ ಮತ್ತಷ್ಟು ಗಂಭೀರವಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಎಡಿಐ (ED) ಸೂರ್ಯ ಸೇನ್ ಅವರು ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆದು, ಇಲ್ಲಿನ ವೈದ್ಯರು ಅನುಭವವಿಲ್ಲದವರಾಗಿದ್ದು, ಹೊಸ ಅನುಭವಿ ವೈದ್ಯರನ್ನು ನೇಮಿಸುವಂತೆ ಮನವಿ ಮಾಡಿದ್ದರು. ಆದರೆ, ಸರ್ಕಾರದ ಅನುದಾನ ಮತ್ತು ಕಾಲಹರಣದಿಂದಾಗಿ ಇದೀಗ ಜೀವಹಾನಿ ಸಂಭವಿಸಿದೆ ಎಂಬುದು ವನ್ಯಜೀವಿ ಪ್ರಿಯರ ಆಕ್ರೋಶ ಹೆಚ್ಚಾಗಲು ಮತ್ತಷ್ಟು ಕಾರಣವಾಗಿದೆ.
ಪ್ರಾಣಿ ಹಿತ ರಕ್ಷಣೆ ಕೇಂದ್ರಗಳಲ್ಲೂ ಪಾರದರ್ಶಕತೆ ಬೇಡಿಕೆ
ಈ ಘಟನೆಯಿಂದಾಗಿ ಪ್ರಾಣಿ ಪ್ರಿಯರು ಮಾತ್ರವಲ್ಲ, ಸಾರ್ವಜನಿಕರು ಕೂಡ ಮೃಗಾಲಯದ ಕಾರ್ಯಪದ್ಧತಿಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ಜೀವಿಗಳಿಗೆ ಶ್ರದ್ಧಾಪೂರ್ವಕ ಆರೈಕೆ, ಸಮಯಪಾಲನೆ ಹಾಗೂ ಶಿಷ್ಟ ವಿಧಾನಗಳು ಅನುಸರಿಸುವುದು ಅತ್ಯವಶ್ಯಕ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರು ಹಾಗೂ ನಿರ್ಲಕ್ಷ್ಯವಹಿಸಿದ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲು ಪರಿಸರ ಹಾಗೂ ಅರಣ್ಯ ಇಲಾಖೆ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂಬ ಪ್ರಾಣಿಪ್ರಿಯರು ಮತ್ತು ಸಾರ್ವಜನಿಕರ ಬೇಡಿಕೆ ಮತ್ತಷ್ಟು ಬಲ ಪಡೆದುಕೊಂಡಿದೆ.
