ಬೆಂಗಳೂರು (ಅ.17):  ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮಾಡಿದ ಆರೋಪದಡಿ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ಮಾಜಿ ಶಾಸಕ ಸತೀಶ್‌ ಸೈಲ್‌ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಂಬಲಿಗ ಖಾರದಪುಡಿ ಮಹೇಶ್‌ ಹಾಗೂ ಬಂದರು ಕನ್ಸರ್ವೇಟರ್‌ ಮಹೇಶ್‌ ಬಿಲಿಯೆ ಸೇರಿದಂತೆ 18 ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ. ಮಾಜಿ ಶಾಸಕ ಸತೀಶ್‌ ಸೈಲ್‌ ಹಾಗೂ ಇತರೆ ಆರೋಪಿಗಳ ಅರ್ಜಿ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಶುಕ್ರವಾರ ಈ ಆದೇಶ ಮಾಡಿದೆ.

ಪ್ರಸಿದ್ಧ ಹಿಂದೂ ದೇವಾಲಯ: ಚಿದಂಬರಂ ದರ್ಶನ ಪಡೆದ ಜನಾರ್ದನ ರೆಡ್ಡಿ ಕುಟುಂಬ ...

ವಿಚಾರಣೆ ವೇಳೆ ಸಿಬಿಐ ಪರ ವಿಶೇಷ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌ ವಾದ ಮಂಡಿಸಿ, ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಆರೋಪಿಗಳು ಬೇಲೆಕೇರಿ ಬಂದರಿನಿಂದ ಸುಮಾರು ಎಂಟು ಲಕ್ಷ ಮೆಟ್ರಿಕ್‌ ಟನ್‌ ಅದಿರನ್ನು ಅಕ್ರಮವಾಗಿ ಸಾಗಿಸಿ ಕೋಟ್ಯಂತರ ಹಣ ಗಳಿಕೆ ಮಾಡಿದ್ದಾರೆ. ಪ್ರಕರಣದ ಕುರಿತು ಸಿಬಿಐ ಸಮಗ್ರವಾದ ತನಿಖೆ ನಡೆಸಿದೆ.

 ಆರೋಪಿಗಳ ವಿರುದ್ಧ ಸಾಕಷ್ಟುಸಾಕ್ಷ್ಯಧಾರಗಳು ತನಿಖೆಯಲ್ಲಿ ಲಭ್ಯವಾಗಿವೆ. ಸಿಬಿಐ ದೋಷಾರೋಪ ಪಟ್ಟಿಸಲ್ಲಿಸಿದ್ದು, ಸದ್ಯ ಪ್ರಕರಣ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇದೆ. ಹೀಗಾಗಿ, ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಬಾರದು ಎಂದು ಕೋರಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಆರೋಪಿಗಳ ಅರ್ಜಿ ವಜಾಗೊಳಿಸಿ ಆದೇಶಿದೆ.
 
- ಸತೀಶ್‌ ಸೈಲ್‌, ರೆಡ್ಡಿ ಆಪ್ತ ಖಾರದಪುಡಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟಲ್ಲಿ ತಿರಸ್ಕೃತ