ಬೆಳಗಾವಿ, (ಆ.23): ಗಣೇಶ ಹಬ್ಬ ಮುಗಿದ ಬಳಿಕ ಪೀರಣವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದ ಬಗೆಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಭರವಸೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ತೆರವುಗೊಳಿಸಲಾಗಿದ್ದು, ಇದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ವಿವಿಧ ಸಂಘಟನೆಗಳು ರಾಜ್ಯದೆಲ್ಲೆಡೆ ಪ್ರತಿಭಟನೆಗಳು ಮಾಡುತ್ತಿವೆ.

1824ರಲ್ಲಿ ಬ್ರಟಿಷರ ವಿರುದ್ಧ ತೊಡೆತಟ್ಟಿ ನಿಂತ ಸಂಗೊಳ್ಳಿ ರಾಯಣ್ಣ; ಈಗಲೂ ಬದುಕ್ಕಿದ್ದಾನೆ ಕ್ರಾಂತಿವೀರ!

ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ  ವಿಧಾನ ಪರಿಷತ್ ಸದಸ್ಯರಾದ ವಿವೇಕರಾವ್ ಪಾಟೀಲ್ ಹಾಗೂ ಹಾಲುಮತ ಸಮಾಜದ ನಾಯಕರು ಇಂದು (ಭಾನುವಾರ)  ಸಚಿವ ರಮೇಶ್ ಜಾರಕಿಹೊಳಿ ಅವರನ್ನ ಭೇಟಿ ಮಾಡಿ ಪ್ರಕರಣ ಇತ್ಯರ್ಥ ಪಡೆಸಿ ಜಿಲ್ಲಾಡಳಿತ ವತಿಯಿಂದಲೇ ಮೂರ್ತಿ ಸ್ಥಾಪನೆ ಮಾಡುವಂತೆ ಒತ್ತಡ ಹೇರಿದರು.

ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸರ್ಕಾರ ಹಾಗೂ ನಮ್ಮ ಮೇಲೆ ಭರವಸೆ ಇಡಿ. ಗಣೇಶ ಚತುರ್ಥಿ ಹಬ್ಬ ಮುಗಿದ ಬಳಿಕ ವಿವಾದ ಬಗೆಹರಿಸಲಾಗುವುದು. ಪೀರಣವಾಡಿಯಲ್ಲಿ ಪ್ರಮುಖರ ಸಭೆ ಕರೆದು ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುವುದು. ಅಲ್ಲಿಯವರೆಗೂ ಸಹಕಾರ ನೀಡುವಂತೆ ಮನವಿ ಮಾಡಿದರು.