- ಆರ್‌ಎಸ್‌ಎಸ್‌ ಆರೆಸ್ಸೆಸ್‌ ಮುರ್ದಾಬಾದ್‌ ಘೋಷಣೆ- ಐಎಸ್‌ಐ ಪರವೂ ಘೋಷಣೆ? 2 ವಿಡಿಯೋ ಪ್ರತ್ಯಕ್ಷ- ಹುಬ್ಬಳ್ಳಿ ಗಲಭೆ ಹಿಂದಿನ ಸೀಕ್ರೆಟ್

ಹುಬ್ಬಳ್ಳಿ(ಏ.20): ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ಶನಿವಾರ ಸಂಭವಿಸಿದ ಗಲಭೆ ವೇಳೆ ಉದ್ರಿಕ್ತ ಜನರ ಗುಂಪು ಪ್ರಚೋದನಾಕಾರಿ ಘೋಷಣೆ ಕೂಗಿರುವ ಮತ್ತೆರಡು ವಿಡಿಯೋ ಇದೀಗ ವೈರಲ್‌ ಆಗಿವೆ. ‘ತಪ್ಪಿತಸ್ಥನಿಗೆ ಶಿರಚ್ಛೇದವೊಂದೇ ಶಿಕ್ಷೆ’ ಎಂದು ಉದ್ರಿಕ್ತರು ಘೋಷಣೆ ಕೂಗುತ್ತಿರುವುದು ಒಂದು ವಿಡಿಯೋದಲ್ಲಿದ್ದರೆ, ‘ಆರ್‌ಎಸ್‌ಎಸ್‌ ಮುರ್ದಾಬಾದ್‌’ ಎಂಬ ಕೂಗು ಮತ್ತೊಂದು ವಿಡಿಯೋದಲ್ಲಿದೆ. ಇದೇ ವಿಡಿಯೋದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಪರವೂ ಕೂಗಿರುವ ಆರೋಪವಿದ್ದು, ಐಎಸ್‌ಐ ಕುರಿತ ಘೋಷಣೆ ಅಸ್ಪಷ್ಟವಾಗಿದೆ.

ಮೌಲ್ವಿಯನ್ನು ಹೋಲುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸ್‌ ಕಾರಿನ ಮೇಲೆ ಹತ್ತಿ ಪ್ರಚೋದನಾಕಾರಿಯಾಗಿ ಮಾತನಾಡುತ್ತಿದ್ದ ವಿಡಿಯೋ ಸೋಮವಾರವಷ್ಟೇ ವೈರಲ್‌ ಆಗಿತ್ತು. ಇದೀಗ ವೈರಲ್‌ ಆಗಿರುವ ಎರಡೂವರೆ ನಿಮಿಷದ ವಿಡಿಯೋದಲ್ಲಿರುವ ಕೋಪೋದ್ರಿಕ್ತಗೊಂಡಿದ್ದ ಯುವಜನರ ಗುಂಪು ‘ತಪ್ಪಿತಸ್ಥನಿಗೆ ಏನು ಶಿಕ್ಷೆ, ಏನು ಶಿಕ್ಷೆ’ ಎಂದು ಕೂಗುತ್ತಿದ್ದರೆ, ಮತ್ತೊಂದು ಗುಂಪು ‘ಶಿರಚ್ಛೇದ ಮಾಡುವುದೊಂದೇ ಶಿಕ್ಷೆ’ ಎಂದು ಜೋರಾಗಿ ಕೂಗುತ್ತಿತ್ತು. ಹಲವರು ತಿಳಿ ಹೇಳುವ ಪ್ರಯತ್ನ ಮಾಡಿದರೂ ಕೇಳದ ಈ ಗುಂಪು ಹಲವಾರು ಬಾರಿ ಜೋರಾಗಿ ಕೂಗಿ ಪರಿಸ್ಥಿತಿ ಮತ್ತಷ್ಟುಬಿಗಡಾಯಿಸುವಂತೆ ಮಾಡಲು ಯತ್ನಿಸುತ್ತಿದ್ದುದು ವಿಡಿಯೋದಲ್ಲಿ ದಾಖಲಾಗಿದೆ. ಇದು ಇದೀಗ ಮತ್ತಷ್ಟುಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.

ಹುಬ್ಬಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಎಂದ ಕಟೀಲ್‌!

ಶನಿವಾರ ತಡರಾತ್ರಿ ನಡೆದ ಗಲಭೆ ವೇಳೆ ಉದ್ರಿಕ್ತ ಗುಂಪು ಏಕಕಾಲಕ್ಕೆ ಠಾಣೆಗೆ ದಾಳಿ ಮಾಡಿತ್ತು. ಈ ವೇಳೆ ಕೆಲವರು ತಪ್ಪಿತಸ್ಥನ ವಿರುದ್ಧ ಎಫ್‌ಐಆರ್‌ ಆಗಿದೆ. ಆತನನ್ನು ಬಂಧಿಸುತ್ತಾರೆ. ಇಲ್ಲಿಂದ ಹೊರಡಿ ಎಂದು ತಿಳಿ ಹೇಳುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ ಕೇಳುವ ಗೋಜಿಗೆ ಹೋಗದ ಗುಂಪು, ‘ಗುಸ್ತಾಕೆ ರಸೂಲ್‌ ಕಿ ಏಕ್‌ ಹೀ ಸಝಾ, ಗರ್ದನ್‌ ಸರ್‌ ಸೆ ಝುದಾ’(ತಪ್ಪಿತಸ್ಥನಿಗೆ ಒಂದೇ ಶಿಕ್ಷೆ, ಅದು ಶಿರಚ್ಛೇದ ಮಾಡುವುದು) ಎಂಬ ಘೋಷಣೆ ಕೂಗಿದ್ದಾರೆ. ಸುಮಾರು ಏಳೆಂಟು ಬಾರಿ ಉದ್ರಿಕ್ತರು ಈ ಘೋಷಣೆ ಕೂಗಿದ್ದಾರೆ. ಈ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ ಮೌಲ್ವಿಯ ವೇಷಭೂಷಣ ಧರಿಸಿದ ವಸೀಂ ಪಠಾಣ ಕೂಡ ಈ ವಿಡಿಯೋದಲ್ಲಿ ಇದ್ದಾನೆ. ಈತನ ಸುತ್ತಮುತ್ತಲೂ ಇದ್ದವರೇ ಈ ಘೋಷಣೆ ಕೂಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಆರೆಸ್ಸೆಸ್‌ ಮುರ್ದಾಬಾದ್‌:
ಮತ್ತೊಂದು ವಿಡಿಯೋದಲ್ಲಿ ಉದ್ರಿಕ್ತ ಗುಂಪು ಆರ್‌ಎಸ್‌ಎಸ್‌ ಮುರ್ದಾಬಾದ್‌ ಎಂಬ ಘೋಷಣೆ ಕೂಗಿರುವುದು ಸ್ಪಷ್ಟವಾಗಿ ಕೇಳಿದೆ. ಇದೇ ವೇಳೆ ಐಎಸ್‌ಐ ಜಿಂದಾಬಾದ್‌ ಎಂದು ಕೂಡ ಕೂಗಿದ್ದಾರೆಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪಾಕಿಸ್ತಾನದ ಪರ ಘೋಷಣೆ ಕೂಗಿದರೇ ಎಂಬ ಸಂಶಯ ಇದೀಗ ಪ್ರಶ್ನೆ ಉದ್ಭವವಾಗಿದೆ. 12 ಸೆಕೆಂಡ್‌ಗಳ ಈ ವಿಡಿಯೋದಲ್ಲಿನ ಮುಖಗಳನ್ನು ನೋಡಿಕೊಂಡು ಪೊಲೀಸರು ಬಂಧನಕ್ಕೆ ಜಾಲ ಬೀಸಿದ್ದಾರೆ.

Hubli Violence ಬಂಧಿತರು ಅಮಾಯಕರೆಂದು ಎಚ್ಡಿಕೆಗೆ ಹೇಗೆ ಗೊತ್ತು, ಜೋಶಿ ಪ್ರಶ್ನೆ!

ಹಳೆಹುಬ್ಬಳ್ಳಿ ಗಲಭೆ ನಡೆದ 2ನೇ ದಿನಕ್ಕೆ ಹಳೆ ಹುಬ್ಬಳ್ಳಿ ಮೇಲ್ನೋಟಕ್ಕೆ ಸಹಜ ಸ್ಥಿತಿಗೆ ಬಂದಂತಾದರೂ ಸುತ್ತಲ ನಿವಾಸಿಗಳಲ್ಲಿ ಇನ್ನೂ ಆತಂಕವಿದೆ. ಸಣ್ಣಪುಟ್ಟಅಂಗಡಿ ಮುಂಗಟ್ಟು, ಬೀದಿ ವ್ಯಾಪಾರಸ್ಥರು ಸೇರಿ ಇಲ್ಲಿನ ವಹಿವಾಟು ಕುಸಿದಿದೆ. ಜತೆಗೆ ಪತೇಶಾವಲಿ ದರ್ಗಾಕ್ಕೆ ನಮಾಜ್‌ ಸಲ್ಲಿಸಲು ಬರುವವರ ಸಂಖ್ಯೆಯೂ ಕಡಿಮೆಯಾಗಿದೆ. ಈ ನಡುವೆ ಬಿಗಿ ಪೊಲೀಸ್‌ ಬಂದೋಬಸ್‌್ತ ಮುಂದುವರಿದಿದೆ.

ಶನಿವಾರ ತಡರಾತ್ರಿ ವಿವಾದಿತ ಪೋಸ್ಟ್‌ ಹಿನ್ನೆಲೆಯಲ್ಲಿ ಸಂಭವಿಸಿದ ಗಲಾಟೆ ಬಳಿಕ ಈ ಭಾಗ ದೈನಂದಿನ ಸ್ಥಿತಿಗೆ ಮರಳುತ್ತಿದೆ. ಭಾನುವಾರ ಮುಚ್ಚಿದ್ದ ಎಲ್ಲ ಅಂಗಡಿ ಮುಂಗಟ್ಟುಗಳು ಸೋಮವಾರ ತೆರೆದಿದ್ದವು. ವಾಹನ ಸಂಚಾರ ಸಹಜವಾಗಿತ್ತು. ಆದರೆ, ಭೀತಿ ಸ್ಥಳೀಯರಲ್ಲಿ ಇನ್ನೂ ಮಾಸಿಲ್ಲ. ಹೆಚ್ಚು ದಾಂಧಲೆ ನಡೆದ ದಿಡ್ಡಿ ಓಣಿ, ಸಂಜೀವಿನಿ ಆಸ್ಪತ್ರೆ, ಪೊಲೀಸ್‌ ಸ್ಟೇಷನ್‌ ಹಿಂಭಾಗದ ರಸ್ತೆಗಳಲ್ಲಿ ಭಯದ ವಾತಾವರಣವಿತ್ತು. ಪೊಲೀಸ್‌ ಠಾಣೆಯ ಸುತ್ತಮುತ್ತಲು ಕಂಡು ಬಂದ ದೃಶ್ಯಗಳು ಎಲ್ಲವೂ ಸರಿಯಾಗಿಲ್ಲ ಎಂದು ತೋರ್ಪಡಿಸುತ್ತಿದ್ದವು.