2025ನೇ ಇಸವಿಯಲ್ಲಿ ಬಿಯರ್ ಮಾರಾಟದಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 77.95 ಲಕ್ಷ ಕೇಸ್ ಕಡಿಮೆಯಾಗಿದೆ. 2023ರಲ್ಲಿ ಒಟ್ಟಾರೆ 444.05 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು 2024 ರಲ್ಲಿ ಇದು 450.36 ಲಕ್ಷ ಕೇಸ್‌ಗೆ ಬಂದು ಮುಟ್ಟಿತ್ತು
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು : 2025ನೇ ಇಸವಿಯಲ್ಲಿ ಬಿಯರ್ ಮಾರಾಟದಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 77.95 ಲಕ್ಷ ಕೇಸ್ ಕಡಿಮೆಯಾಗಿದೆ.
2023ರಲ್ಲಿ ಒಟ್ಟಾರೆ 444.05 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು (ಒಂದು ಬಾಕ್ಸ್‌ನಲ್ಲಿ 7.80 ಲೀಟರ್). 2024 ರಲ್ಲಿ ಇದು 450.36 ಲಕ್ಷ ಕೇಸ್‌ಗೆ ಬಂದು ಮುಟ್ಟಿತ್ತು. ಆದರೆ 2025ರಲ್ಲಿ ಈ ಪ್ರಮಾಣ 392.77 ಲಕ್ಷ ಬಾಕ್ಸ್‌ಗೆ ಕುಸಿದಿದೆ. ಬಿಯರ್ ಬೆಲೆ ಹೆಚ್ಚಳವೇ ಮಾರಾಟ ಕುಸಿಯಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಸ್ಕಿ, ಬ್ರಾಂದಿ, ರಮ್, ಜಿನ್ ಸೇರಿ ಐಎಂಎಲ್ ಮದ್ಯ ಮಾರಾಟದಲ್ಲಿ ಮಾತ್ರ ಒಂದಷ್ಟು ಹೆಚ್ಚಳವಾಗಿದೆ. 2023ರಲ್ಲಿ ಒಟ್ಟಾರೆ 705.53 ಲಕ್ಷ ಬಾಕ್ಸ್ ಐಎಂಎಲ್ ಮದ್ಯ (ಒಂದು ಬಾಕ್ಸ್‌ನಲ್ಲಿ 8.64 ಲೀಟರ್) ಮಾರಾಟವಾಗಿತ್ತು. 2024ರಲ್ಲಿ ಇದು 700.09 ಲಕ್ಷ ಕೇಸ್‌ಗೆ ಇಳಿಕೆಯಾಗಿತ್ತು. ಆದರೆ 2025ರಲ್ಲಿ ಈ ಪ್ರಮಾಣ ಒಂದಿಷ್ಟು ಚೇತರಿಕೆ ಕಂಡಿದ್ದು, 703.69 ಲಕ್ಷ ಬಾಕ್ಸ್ ಮಾರಾಟವಾಗಿದೆ.
ಶೇ.50 ರಷ್ಟು ಬೆಲೆ ಹೆಚ್ಚಳ:
ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ‘ಒಂದು ವರ್ಷದ ಹಿಂದೆ ಬಿಯರ್ ಬೆಲೆ ಹೆಚ್ಚಳ ಮಾಡಲಾಗಿತ್ತು. ಪುನಃ ಆರು ತಿಂಗಳ ಹಿಂದೆ ಮತ್ತೆ ಬೆಲೆ ಹೆಚ್ಚಳ ಮಾಡಲಾಯಿತು. ಇದೆರಡೂ ಸೇರಿ ಸುಮಾರು ಶೇ.50ರಷ್ಟು ಬೆಲೆ ಅಧಿಕವಾಗಿ ಬಿಯರ್ ದುಬಾರಿಯಾಯಿತು. ಇದು ಮಾರಾಟಕ್ಕೆ ಹೊಡೆತ ನೀಡಿದೆ’ ಎಂದು ವಿಶ್ಲೇಷಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ, ‘ಬಿಯರ್ ಬೆಲೆಯಲ್ಲಿ ಭಾರೀ ಹೆಚ್ಚಳ ಮಾಡಿರುವುದು ಮಾರಾಟ ಕುಸಿತವಾಗಲು ಪ್ರಮುಖ ಕಾರಣ. ಬೆಲೆ ಹೆಚ್ಚಳದಿಂದಾಗಿ ಬಿಯರ್ ಮಾರಾಟವಾಗುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.
ಬಿಯರ್ ಮಾರಾಟ ಲಕ್ಷ ಕೇಸ್‌ಗಳಲ್ಲಿ
ತಿಂಗಳು 2024 2025
ಜನವರಿ 36.37 25.22
ಫೆಬ್ರವರಿ 37.15 35.08
ಮಾರ್ಚ್ 46.13 38.99
ಏಪ್ರಿಲ್ 49.72 41.60
ಮೇ 50.71 37.10
ಜೂನ್ 37.06 31.94
ಜುಲೈ 36.06 27.93
ಆಗಸ್ಟ್ 34.36 26.23
ಸೆಪ್ಟೆಂಬರ್ 34.82 30.47
ಅಕ್ಟೋಬರ್ 36.06 32.35
ನವೆಂಬರ್ 34.66 29.72
ಡಿಸೆಂಬರ್ 37.62 36.14
ಒಟ್ಟು 470.72 392.77
ಐಎಂಎಲ್ ಮದ್ಯ ಮಾರಾಟ ಲಕ್ಷ ಕೇಸ್‌ಗಳಲ್ಲಿ
ತಿಂಗಳು 2024 2025
ಜನವರಿ 57.74 60.61
ಫೆಬ್ರವರಿ 57.46 56.23
ಮಾರ್ಚ್ 57.07 64.19
ಏಪ್ರಿಲ್ 54.46 57.44
ಮೇ 63.81 63.06
ಜೂನ್ 61.36 53.31
ಜುಲೈ 56.40 56.35
ಆಗಸ್ಟ್ 52.75 54.85
ಸೆಪ್ಟೆಂಬರ್ 56.98 57.92
ಅಕ್ಟೋಬರ್ 61.64 60.11
ನವೆಂಬರ್ 58.60 55.91
ಡಿಸೆಂಬರ್ 61.82 63.71
ಒಟ್ಟು 700.09 703.69


