ಬೆಂಗಳೂರು (ನ.06):  ಮೊದಲ ಬಾರಿ ತೀವ್ರ ಕೊರೋನಾ ಲಕ್ಷಣಗಳೊಂದಿಗೆ ಸೋಂಕಿತರಾಗಿದ್ದವರಿಗೆ ಮತ್ತೆ ಸೋಂಕು ಬಂದರೆ ಅದರ ತೀವ್ರತೆ ಕಡಿಮೆಯಿರುತ್ತದೆ. ಆದರೆ, ಮೊದಲು ಕಡಿಮೆ ಲಕ್ಷಣಗಳಿಂದ ಸೋಂಕಿತರಾಗಿದ್ದವರಿಗೆ ಮತ್ತೆ ಸೋಂಕು ತಗಲಿದರೆ ಪರಿಣಾಮಗಳ ತೀವ್ರತೆ ಹೆಚ್ಚಿರುತ್ತದೆ ಎಂದು ವರದಿಗಳು ಹೇಳಿವೆಯೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕವೂ ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ನಿಗಾ ವಹಿಸಿ ಚಿಕಿತ್ಸೆ ನೀಡುವ ಸಲುವಾಗಿ ಬೆಂಗಳೂರಿನ ಎಲ್ಲ ಪ್ರಮುಖ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ‘ಪೋಸ್ವ್‌ ಕೋವಿಡ್‌ ಕೇಂದ್ರ ಮತ್ತು ಪುನರ್ವಸತಿ ಕೇಂದ್ರ (ರಿಹ್ಯಾಬಿಲಿಟೇಶನ್‌)’ ಆರಂಭಿಸಲು ನಿರ್ಧರಿಸಿರುವುದಾಗಿಯೂ ತಿಳಿಸಿದ್ದಾರೆ.

ಚಳಿಗಾಲ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಧಾನಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ಹಾಗೂ ತಜ್ಞರೊಂದಿಗೆ ಗುರುವಾರ ಸಭೆ ನಡೆಸಿದ ಬಳಿಕ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ 2ನೇ ಅಲೆಯ ಆತಂಕ:  ರಾಜ್ಯದಲ್ಲಿ ಸೋಂಕು ಕಡಿಮೆಯಾಗುತ್ತಿದೆಯಾದರೂ ಬೇರೆ ಬೇರೆ ರಾಜ್ಯಗಳ ರೀತಿಯಲ್ಲಿ ಎರಡನೇ ಅಲೆಯ ಆತಂಕವಿದೆ. ಒಮ್ಮೆ ಸೋಂಕು ಬಂದು ಹೋದವರಲ್ಲಿ ಶೇ.5ರಷ್ಟುಜನರಿಗೆ ಮತ್ತೆ ಸೋಂಕು ತಗಲುವ ಸಾಧ್ಯತೆ ಇದೆ. ಮೊದಲ ಬಾರಿ ತೀವ್ರ ಲಕ್ಷಣಗಳೊಂದಿಗೆ ಸೋಂಕಿತರಾಗಿದ್ದವರಿಗೆ ಮತ್ತೆ ಸೋಂಕು ಬಂದರೆ ಇದರ ತೀವ್ರತೆಗಳು ಕಡಿಮೆ ಇರುತ್ತವೆ. ಈ ಮೊದಲು ಲಕ್ಷಣಗಳಿಲ್ಲದ ಹಾಗೂ ಕಡಿಮೆ ಲಕ್ಷಣಗಳಿಂದ ಸೋಂಕಿತರಾಗಿದ್ದವರಿಗೆ ಮತ್ತೆ ಸೋಂಕು ತಗುಲಿದರೆ ಪರಿಣಾಮಗಳ ತೀವ್ರತೆ ಹೆಚ್ಚಿರುತ್ತದೆ ಎಂದು ವರದಿಗಳು ಹೇಳಿವೆ. ಏಕೆಂದರೆ, ಮೊದಲು ಸೋಂಕು ಬಂದಾಗ ಲಕ್ಷಣಗಳು ಕಡಿಮೆಯಿದ್ದರೆ ಅವರಲ್ಲಿ ಕೊರೋನಾ ವಿರುದ್ಧದ ರೋಗನಿರೋಧಕ ಶಕ್ತಿ ಸರಿಯಾಗಿ ಅಭಿವೃದ್ಧಿಯಾಗದೆ ಹೋಗಬಹುದು. ಮೊದಲು ಸೋಂಕಿನ ಲಕ್ಷಗಳು ತೀವ್ರವಾಗಿದ್ದು ಗುಣಮುಖರಾಗಿದ್ದರೆ ರೋಗನಿರೋಧಕ ಶಕ್ತಿ ಚೆನ್ನಾಗಿ ಅಭಿವೃದ್ಧಿಯಾಗಿರಬಹುದು ಎಂದು ಸುಧಾಕರ್‌ ಹೇಳಿದರು.

ಕೊರೋನಾ ವಿರುದ್ಧ ಹೋರಾಟ: ಅಜೀಂ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ಸುಧಾಕರ್‌ ಅಭಿನಂದನೆ ..

ಈ ಹಿನ್ನೆಲೆಯಲ್ಲಿ ಸೋಂಕಿನಿಂದ ಗುಣಮುಖರಾದರೂ ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಮೇಲೆ ನಿಗಾ ವಹಿಸಲು ಹಾಗೂ ಅಗತ್ಯ ವೈದ್ಯಕೀಯ ಚಿಕಿತ್ಸೆ ಒದಗಿಸಲು ಪೋಸ್ಟ್‌ ಕೋವಿಡ್‌ ಕೇಂದ್ರ ಮತ್ತು ಪುನರ್ವಸತಿ ಕೇಂದ್ರ ಆರಂಭಿಸಲು ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗಾಗಲೇ ಸೋಂಕಿನಿಂದ ಗುಣಮುಖರಾಗಿರುವವರು ಕೂಡ ಕೋವಿಡ್‌ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಎಲ್ಲ ಜಿಲ್ಲಾಸ್ಪತ್ರೆಯಲ್ಲಿ ಪೋಸ್ಟ್‌ ಕೋವಿಡ್‌ ಕೇಂದ್ರ:

ಬೆಂಗಳೂರಿನಲ್ಲಿ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ, ವಿಕ್ಟೋರಿಯಾ, ಬೌರಿಂಗ್‌, ಕೆ.ಸಿ.ಜನರಲ್‌ ಆಸ್ಪತ್ರೆಗಳು ಹಾಗೂ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಪೋಸ್ಟ್‌ ಕೋವಿಡ್‌ ಕೇಂದ್ರಗಳನ್ನು ಆರಂಭಿಸಲಾಗುವುದು. ಕೇಂದ್ರಕ್ಕೆ ಬೇಕಾದ ಸೌಲಭ್ಯ, ಸಿಬ್ಬಂದಿ ಬಗ್ಗೆ ತಜ್ಞರು ವರದಿ ಸಲ್ಲಿಸಿದ್ದಾರೆ. ಕೆಲ ಖಾಸಗಿ ಆಸ್ಪತ್ರೆಗಳು ಈ ಬಗೆಯ ಕೇಂದ್ರಗಳನ್ನು ಆರಂಭಿಸಿವೆ. 100ಕ್ಕಿಂತ ಹೆಚ್ಚು ಹಾಸಿಗೆ ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಈ ರೀತಿಯ ಕೇಂದ್ರ ಆರಂಭಿಸಬೇಕು ಎಂದು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಚಿವ ಸುಧಾಕರ್‌ಗೆ ಸಿಕ್ಕಿತು ಕೇಂದ್ರದಿಂದ ಪ್ರಶಂಸೆ

ಕೆಲವರು ಅನಾರೋಗ್ಯದ ಲಕ್ಷಣ ಕಾಣಿಸಿಕೊಂಡಾಗ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಮನೆಯಲ್ಲೇ ಉಳಿಯುತ್ತಿದ್ದಾರೆ. ಆದರೆ ಅನಾರೋಗ್ಯ ಬಂದಾಗ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬೇರೆ ರೋಗ ಲಕ್ಷಣ ಕಾಣಿಸಿಕೊಂಡಾಗಲೂ ಕೆಲವರು ಭಯದಿಂದ ಆಸ್ಪತ್ರೆಗೆ ಹೋಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೇರೆ ರೋಗಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇರುವುದರಿಂದ ಜನರು ಚಿಕಿತ್ಸೆಯಿಂದ ದೂರ ಉಳಿಯಬಾರದು ಎಂದು ಸಚಿವರು ಕಿವಿಮಾತು ಹೇಳಿದರು.

ಅಧ್ಯಯನಕ್ಕೆ ಸೂಚನೆ:  ಇದುವರೆಗೆ ಕೊರೋನಾ ಸೋಂಕು ತಗಲಿದ ಬಳಿಕ ಉಂಟಾಗಿರುವ ಸಾವಿನ ಪ್ರಕರಣಗಳಲ್ಲಿ ಎಷ್ಟುಪ್ರಕರಣಗಳಲ್ಲಿ ಪಕ್ಕಾ ಕೋವಿಡ್‌ನಿಂದಲೇ ಸಾವು ಸಂಭವಿಸಿದೆ ಹಾಗೂ ಪೂರ್ವದಲ್ಲೇ ಬಳಲುತ್ತಿದ್ದ ಕಾಯಿಲೆಗಳೂ ಸಾವಿಗೆ ಕಾರಣವಾದ ಪ್ರಕರಣಗಳೆಷ್ಟುಎಂಬ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎರಡನೇ ಬಾರಿಗೆ ಸೋಂಕು ಬರುವ ಬಗ್ಗೆಯೂ ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ. ಈ ಎರಡು ವರದಿಗಳು ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ ಎಂದು ಸಚಿವ ಡಾ.ಕೆ.ಸುಧಾಕರ್‌ ಇದೇ ವೇಳೆ ಹೇಳಿದರು.

ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ, ನಿರ್ದೇಶಕ ಓಂ ಪ್ರಕಾಶ್‌ ಪಾಟೀಲ್‌, ಡಾ.ಸುದರ್ಶನ್‌ ಬಲ್ಲಾಳ್‌ ಸೇರಿದಂತೆ ವಿವಿಧ ತಜ್ಞರು ಭಾಗವಹಿಸಿದ್ದರು.