ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜ.06): ನಗರದ ವಾಹನ ದಟ್ಟಣೆ ಹೆಚ್ಚಾಗುವುದರೊಂದಿಗೆ ಸಂಚರಿಸುವ ವಾಹನಗಳ ವೇಗವೂ ಅಧಿಕ ಕೊಂಡಿದೆ. ಹೀಗಾಗಿ, ಪಾದಚಾರಿಗಳಿಗೆ ಸುರಕ್ಷತೆದೃಷ್ಟಿಯಿಂದ ನಗರದ ಪ್ರಮುಖ ಜಂಕ್ಷನ್‌, ಮಾರುಕಟ್ಟೆ, ಬಸ್‌ ನಿಲ್ದಾಣ ಹಾಗೂ ಜನದಟ್ಟಣೆ ಹೆಚ್ಚಿರುವ 300 ಕಡೆ ರಸ್ತೆಗಳಲ್ಲಿ ಬಿಬಿಎಂಪಿ ‘ಎತ್ತರಿಸಿದ ರಸ್ತೆದಾಟುವ ಪಾದಚಾರಿ ಮಾರ್ಗ (ಎಚ್‌ಆರ್‌ಪಿಸಿ)’ ನಿರ್ಮಿಸುತ್ತಿದೆ.

ನಗರದಲ್ಲಿ 1,400 ಕಿ.ಮೀ. ಉದ್ದದ ಆರ್ಟೀರಿಯಲ್‌ ಹಾಗೂ ಸಬ್‌-ಆರ್ಟೀರಿಯಲ್‌ ರಸ್ತೆಗಳಿವೆ. ಈ ರಸ್ತೆಗಳಲ್ಲಿ ದಿನದ 24 ಗಂಟೆಯೂ ಭಾರೀ ಪ್ರಮಾಣದ ವಾಹನ ದಟ್ಟಣೆ ಇರಲಿದೆ. ಪಾದಚಾರಿಗಳು ರಸ್ತೆ ದಾಟುವುದಕ್ಕೆ ಪರದಾಡುವ ಸ್ಥಿತಿ ಇದೆ.

ಬೆಂ.ವಿವಿ ಅಂಕ ಪಟ್ಟಿತಿದ್ದಿದ ಕೇಸ್‌ ಸಿಐಡಿಗೆ

ಜತೆಗೆ ನಗರ ಸಂಚಾರ ಪೊಲೀಸ್‌ ಹಾಗೂ ಬಿಬಿಎಂಪಿ ಅಧಿಕಾರಿಗಳು ಅಪಘಾತ ಹೆಚ್ಚಾಗುವ 29 ಡೇಂಜರಸ್‌ ಸ್ಪಾಟ್‌ಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ತೀರ್ಮಾನಿಸಿದ್ದರು. ಅದರಂತೆ ನಗರದ ಪ್ರಮುಖ ಜಂಕ್ಷನ್‌, ಮಾರುಕಟ್ಟೆಪ್ರದೇಶ, ಬಸ್‌ ನಿಲ್ದಾಣ, ಶಾಲಾ ವಲಯ ಸೇರಿದಂತೆ 300 ಕಡೆ ರಸ್ತೆಗಳಲ್ಲಿ ‘ಎತ್ತರಿಸಿದ ರಸ್ತೆದಾಟುವ ಪಾದಚಾರಿ ಮಾರ್ಗ’ ನಿರ್ಮಾಣ ಕಾಮಗಾರಿಯನ್ನು ಬಿಬಿಎಂಪಿ ಆರಂಭಿಸಿದೆ.

2 ಹಂತದಲ್ಲಿ ಕಾಮಗಾರಿ:

ಎರಡು ಹಂತದಲ್ಲಿ ನಿರ್ಮಿಸುವುದಕ್ಕೆ ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ 150 ಕಡೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಸದ್ಯ ನಗರದ ನವರಂಗ್‌ ಚಿತ್ರಮಂದಿರ ಮುಂಭಾಗದ ಜಂಕ್ಷನ್‌ ಹಾಗೂ ಮಲ್ಲೇಶ್ವರದ ಸರ್ಕಲ್‌ ಬಸ್‌ ನಿಲ್ದಾಣದ ಬಳಿ ಈಗಾಗಲೇ ನಿರ್ಮಿಸಲಾಗಿದೆ. ಪ್ರತಿ ಎತ್ತರಿಸಿದ ಮಾರ್ಗ ನಿರ್ಮಾಣಕ್ಕೆ ಸುಮಾರು 65 ಸಾವಿರ ರು. ವೆಚ್ಚ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೇಗಿರುತ್ತೆ ಈ ಎತ್ತರಿಸಿ ಮಾರ್ಗ?

ಸಿಗ್ನಲ್‌ ಜಂಕ್ಷನ್‌, ರಸ್ತೆ ದಾಟುವುದಕ್ಕೆ ನಿರ್ಮಿಸಲಾದ ಝೀಬ್ರಾ ಕ್ರಾಸಿಂಗ್‌ನಲ್ಲಿ ಈ ಎತ್ತರಿಸಿದ ರಸ್ತೆದಾಟುವ ಪಾದಚಾರಿ ಮಾರ್ಗ ನಿರ್ಮಿಸಲಾಗುವುದು.

ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಯ ವರೆಗೆ ಈ ಪಾದಚಾರಿ ಮಾರ್ಗ ನಿರ್ಮಾಣವಾಗಲಿದೆ. ರಸ್ತೆಗಿಂತ ಸುಮಾರು ಒಂದು ಅಡಿ ಎತ್ತರ ಇರಲಿದೆ. ಸುಮಾರು ಎರಡು ಮೀಟರ್‌ ಅಗಲ ಪಾದಚಾರಿ ಮಾರ್ಗ ಇರಲಿದ್ದು, ಕೆಂಪು ಮತ್ತು ಬಿಳಿಯ ಬಣ್ಣದ ಕಾಬೂಲ್‌ ಸ್ಟೋನ್‌ ಅಳವಡಿಸಲಾಗುತ್ತಿದೆ. ವಾಹನಗಳು ಈ ಎತ್ತರದ ಪಾದಚಾರಿ ಮಾರ್ಗವನ್ನು ಬಳಿಸಿಕೊಂಡು ಮುಂದೆ ಸಾಗಬೇಕಾಗಲಿದೆ.

ಪಾದಚಾರಿಗಳಿಗೆ ಸುರಕ್ಷತೆ ಹೇಗೆ?

ಎತ್ತರದ ರಸ್ತೆದಾಟುವ ಪಾದಚಾರಿ ಮಾರ್ಗ ನಿರ್ಮಾಣದಿಂದ ವಾಹನಗಳು ಜಂಕ್ಷನ್‌ ಅಥವಾ ಜನದಟ್ಟಣೆ ಇರುವ ಜಾಗಕ್ಕೆ ಆಗಮಿಸುತ್ತಿದಂತೆ ವೇಗ ಕಡಿಮೆಯಾಗಲಿದೆ. ಅಲ್ಲದೇ ನಿಧಾನವಾಗಿ ವಾಹನಗಳ ಸಂಚಾರ ಮಾಡಬೇಕಾಗಲಿದೆ. ಈ ವೇಳೆ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಬಹುದಾಗಿದೆ. ಝೀಬ್ರಾ ಕ್ರಾಸಿಂಗ್‌ ಪೇಟಿಂಗ್‌ ಮಾರ್ಕಿಂಗ್‌ ಮಾಡಿದಾಗ ವಾಹನಗಳನ್ನು ಝೀಬ್ರಾ ಕ್ರಾಸಿಂಗ್‌ ಮೇಲ್ಭಾಗದಲ್ಲಿ ನಿಲ್ಲಿಸಲಾಗುತ್ತಿತ್ತು.

ಇದರಿಂದ ಪಾದಚಾರಿಗಳು ರಸ್ತೆ ಮೇಲೆ ಹೆಜ್ಜೆ ಹಾಕಬೇಕಾಗಿತ್ತು. ಇದೀಗ ಎತ್ತರಿಸಿದ ರಸ್ತೆದಾಟುವ ಪಾದಚಾರಿ ಮಾರ್ಗದ ಮೇಲೆ ವಾಹನ ನಿಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಪಾದಚಾರಿಗಳು ಆರಾಮಾಗಿ ರಸ್ತೆ ದಾಟಬಹುದಾಗಿದೆ.

20 ಮೀಟರ್‌ ಅಂತರದಲ್ಲಿ ಫಲಕ

ವಾಹನ ಚಾಲಕರಿಗೆ ರಸ್ತೆಯಲ್ಲಿ ಎತ್ತರಿಸಿದ ರಸ್ತೆದಾಟುವ ಪಾದಚಾರಿ ಮಾರ್ಗ ಇರುವ ಬಗ್ಗೆ ಮಾಹಿತಿ ನೀಡುವುದಕ್ಕೆ ಬಿಬಿಎಂಪಿ 20 ಮೀಟರ್‌ ಮೊದಲೇ ಫಲಕ ಅಳವಡಿಕೆ ಮಾಡಲಿದೆ.

ಜಾಗೃತಿ ಇಲ್ಲ: ಈಗಾಗಲೇ ಎತ್ತರಿಸಿದ ರಸ್ತೆದಾಟುವ ಪಾದಚಾರಿ ಮಾರ್ಗ ನಿರ್ಮಿಸಿದ ಸ್ಥಳದಲ್ಲಿ ಪಾದಚಾರಿಗಳು ರಸ್ತೆಯಲ್ಲಿ ನಡೆಯುತ್ತಿರುವುದು, ವಾಹನ ಚಾಲಕರು ಎತ್ತರಿಸಿದ ಪಾದಚಾರಿ ಮಾರ್ಗದ ಮೇಲೆ ವಾಹನ ನಿಲುಗಡೆ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸರು ಅರಿವು ಮೂಡಿಸುವ ಕಾರ್ಯ ಆಗಬೇಕಿದೆ.