ಬೆಂಗಳೂರು(ನ.14): ನಾಡಿನ ರೈತರ ಬದುಕು ಹಸನು ಮಾಡುವ ಧ್ಯೇಯದೊಂದಿಗೆ ಪ್ರತಿ ಜಿಲ್ಲೆಯಲ್ಲಿ ತಿಂಗಳಿಗೆ ಎರಡು-ಮೂರು ಬಾರಿ ವಿವಿಧ ಗ್ರಾಮದ ರೈತರ ಜೊತೆ ಕಳೆದ ಕಷ್ಟ-ಸುಖ ಆಲಿಸಿ ಪರಿಹರಿಸಲು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು ಹಮ್ಮಿಕೊಂಡಿರುವ ವಿಶಿಷ್ಟವಾದ ‘ರೈತರ ಜೊತೆ ಒಂದು ದಿನ’ ಕಳೆಯುವ ಕಾರ್ಯಕ್ರಮಕ್ಕೆ ಶನಿವಾರ (ನ. 14) ಚಾಲನೆ ದೊರೆಯಲಿದೆ.

ಶನಿವಾರ ಪಾಟೀಲರ ಜನ್ಮದಿನ. ಸ್ವತಃ ಕೃಷಿಕರೂ ಆಗಿರುವ ಪಾಟೀಲ್‌ ಮಣ್ಣಿನ ಮಕ್ಕಳ ಸಮಸ್ಯೆಯನ್ನು ತೀರಾ ಹತ್ತಿರದಿಂದ ನೋಡಿದವರು. ಆದರೂ ಅನ್ನದಾತನ ಸಮಸ್ಯೆ ಎಲ್ಲ ಕಡೆ ಒಂದೇ ರೀತಿ ಇಲ್ಲ, ಹಾಗಾಗಿ ಪ್ರತಿ ಜಿಲ್ಲೆಯ ರೈತರ ಸಮಸ್ಯೆ ತಿಳಿದು ಪರಿಹರಿಸುವ ಉದ್ದೇಶದಿಂದ ಆರಂಭಿಸಿರುವ ನೂತನ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದ ರೈತರ ಜೊತೆ ಸಚಿವರು ಕಳೆಯುವ ಮೂಲಕ ಆರಂಭಿಸಲಿದ್ದಾರೆ.

ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಇಡೀ ದಿನ ಸಮಗ್ರ ಕೃಷಿ, ಸಾವಯವ ಕೃಷಿ ಮಾಡುವ ರೈತರ ಜಮೀನಿಗೆ ಭೇಟಿ ನೀಡಲಿದ್ದಾರೆ. ಉತ್ತುವ, ಬಿತ್ತುವ,ಗೊಬ್ಬರ ಹಾಕುವುದು ಸೇರಿದಂತೆ ಹಲವು ಕೃಷಿ ಚಟುವಿಕೆಯಲ್ಲಿ ಖುದ್ದಾಗಿ ಭಾಗಿಯಾಗಲಿದ್ದಾರೆ. ಇಷ್ಟೇ ಅಲ್ಲ ರೈತರ ಜೊತೆ ಸಂವಾದ, ಸ್ಥಳೀಯ ರೈತರ ಸಮಸ್ಯೆ ಆಲಿಸಲಿದ್ದಾರೆ.

ಸಡಗರದಿಂದ ಸಜ್ಜಾಗಿರುವ ಗ್ರಾಮ:

ತಮ್ಮ ಸಮಸ್ಯೆ ಆಲಿಸಿ ಪರಿಹರಿಸಲು ಬರುತ್ತಿರುವ ಸಚಿವರನ್ನು ಪ್ರೀತಿಯಿಂದ ಸ್ವಾಗತಿಸಲು ಊರಿಗೆ ಊರೇ ಸಡಗರದಿಂದ ಕಾಯುತ್ತಿದೆ. ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಗ್ರಾಮದ ಪ್ರವೇಶ ದ್ವಾರದಲ್ಲಿ ಬೃಹತ್‌ ಸ್ವಾಗತ ಕಮಾನು ನಿರ್ಮಿಸಿಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲೂ ಹಸಿರು ಮತ್ತು ಹಳದಿ ಬಣ್ಣದ ಬಂಟಿಂಗ್ಸ್‌ ಕಟ್ಟಿದ್ದಾರೆ. ಸಚಿವರ ಮೆರವಣಿಗೆಗೆ ಅಲಂಕೃತ ಹಸಿರು ಬಂಡಿಯನ್ನು ಸಿದ್ಧಮಾಡಿಟ್ಟುಕೊಂಡಿದ್ದಾರೆ. ರೈತರೊಂದಿಗೆ ಸಂವಾದ ಮತ್ತು ಬಹಿರಂಗ ಸಭೆಯನ್ನು ನಡೆಸಲು ಬೃಹತ್‌ ವೇದಿಕೆಯನ್ನು ನಿರ್ಮಿಸಲಾಗಿದೆ.

ಆತಿಥ್ಯಕ್ಕೆ ಕಾಯುತ್ತಿರುವ ಪ್ರಗತಿಪರ ರೈತರು:

ಕೃಷಿ ಇಲಾಖೆ ಅಧಿಕಾರಿಗಳು ಈಗಾಗಲೇ ಗ್ರಾಮಕ್ಕೆ ಆಗಮಿಸಿ, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ರೈತರನ್ನು ಸಂಪರ್ಕಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ಕೋರಿದ್ದಾರೆ. ಅದೇ ರೀತಿ ಮಡುವಿನಕೋಡಿ ಗ್ರಾಮಕ್ಕೆ ತೆರಳುವ ಮುನ್ನ ಬರುವ ಹೊಸಕೋಟೆ ಗ್ರಾಮದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿರುವ ಲಕ್ಷ್ಮೇದೇವಮ್ಮ ಅವರ ಜಮೀನಿಗೆ ಸಚಿವರು ಭೇಟಿ ನೀಡಲಿದ್ದಾರೆ. ಹೀಗಾಗಿ ಲಕ್ಷ್ಮೇದೇವಮ್ಮ ಅವರು ಕುಟುಂಬದ ಸದಸ್ಯರು ಸಹ ಸಚಿವರನ್ನು ಆಧರಿಸಿ, ಆತಿಥ್ಯ ನೀಡಲು ಸಜ್ಜಾಗಿದ್ದಾರೆ.

ಅದೇ ರೀತಿ ಮಧ್ಯಾಹ್ನ ಮಡುವಿನಕೋಡಿ ಸಮೀಪದ ದೊಡ್ಡಯಾಚೇನಹಳ್ಳಿಯಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಮೋಹನ್‌ ಅವರ ಜಮೀನಿಗೆ ಭೇಟಿ ನೀಡಲಿರುವ ಕಾರಣ ಅವರು ಸಹ ಸಂಭ್ರಮದಿಂದ ಸಿದ್ಧತೆ ಮಾಡಿಕೊಂಡಿದ್ದಾರೆ.

ಬೇಡಿಕೆ, ಸಮಸ್ಯೆ ತೊಡಿಕೊಳ್ಳಲು ಸಹ ಸಜ್ಜು:

ಮಡುವಿನಕೋಡಿ ಕೆ.ಅರ್‌. ಪೇಟೆ ತಾಲೂಕಿನ ಮಾದರಿ ಗ್ರಾಮ, ಹೇಮಾವತಿ ನದಿ ದಂಡೆಯಲ್ಲಿದ್ದ ಗ್ರಾಮ ಸುಮಾರು 80 ವರ್ಷಗಳ ಹಿಂದೆ ನದಿ ದಂಡೆಯಿಂದ ಎರಡು ಕಿ.ಮಿ ದೂರಕ್ಕೆ ಸ್ಥಳಾಂತರಗೊಂಡಿದೆ. ಹೇಮಾವತಿ ನದಿಯ ಒಡ್ಡು ನಾಲೆಗಳಾದ ಹೇಮಗಿರಿ ಮತ್ತು ಮಂದಗೆರೆæ ಎಡದಂಡೆ ನಾಲೆಗಳು ಗ್ರಾಮವನ್ನು ಸಂಪೂರ್ಣ ಹಚ್ಚ ಹಸಿರಾಗಿದೆ.

ವಿಚಿತ್ರವೆಂದರೆ ಗೋಮಾಳ ಎಂದು ಗುರುತಿಸಿರುವ ಈ ಗ್ರಾಮದಲ್ಲಿನ ಯಾವುದೇ ಮನೆಗಳಿಗೆ ದಾಖಲೆ ಇಲ್ಲ. ಹೀಗಾಗಿ ಇ-ಸ್ವತ್ತು ಮಾಡಿಸುವ ವ್ಯವಸ್ಥೆ ಆಗಬೇಕಾಗಿದೆ. ಕೆ.ಆರ್‌. ಪೇಟೆ ಹಾಗೂ ಕೆ.ಆರ್‌. ನಗರ ಸಂಪರ್ಕಿಸಲು ಹೇಮಾವತಿ ನದಿಗೆ ಅಡ್ಡಲಾಗಿ ಸೇತುವೆ ಅವಶ್ಯವಾಗಿದೆ. ಗ್ರಾಮದಲ್ಲಿ ಸಣ್ಣಪುಟ್ಟಕಾರ್ಯಕ್ರಮ, ಸಭೆ, ಸಮಾರಂಭ ನಡೆಸಲು ಸಮುದಾಯ ಭವನದ ಅಗತ್ಯತೆ ಇದೆ ಎನ್ನುವ ರೈತರ ಇವುಗಳ ಬಗ್ಗೆ ಸಚಿವರ ಗಮನ ಸೆಳೆಯಲು ರೈತರು ಸಜ್ಜಾಗಿದ್ದಾರೆ.

ರೈತರೊಂದಿಗೆ ಒಂದು ದಿನ ನಡೆವುದು ಹೀಗೆ...

ಹೊಸಕೋಟೆ ಗ್ರಾಮಕ್ಕೆ ಭೇಟಿ:

ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು ಶನಿವಾರ ಮಂಡ್ಯ ನಗರದಿಂದ ಬೆಳಗ್ಗೆ 7ಕ್ಕೆ ಹೊರಟು 8.15ಕ್ಕೆ ಕೆ.ಆರ್‌.ಪೇಟೆ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ಇಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ನಾರಾಯಣಗೌಡ ಅವರೊಂದಿಗೆ ಮಂಡ್ಯ ಜಿಲ್ಲಾ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸುವರು. ನಂತರ 9 ಗಂಟೆಯಿಂದ ಸುಮಾರು ಅರ್ಧ ಗಂಟೆಗಳ ಕಾಲ ಕೆ.ಆರ್‌.ಪೇಟೆ ತಾಲೂಕು ಹೊಸಕೋಟೆ ಗ್ರಾಮದ ಲಕ್ಷ್ಮೇದೇವಮ್ಮನವರ ಸಮಗ್ರ ಕೃಷಿ ಪದ್ಧತಿ ಅಳವಡಿಸಿರುವ ಜಮೀನಿಗೆ ಭೇಟಿ ನೀಡುವರು. ಅಲ್ಲಿ ಭತ್ತದ ಜಮೀನಿನ ವೀಕ್ಷಣೆ, ಹಸುಗಳಿಗೆ ನೇಪಿಯರ್‌ ಹುಲ್ಲು ಕೊಯ್ಯುವುದು, ಹುಲ್ಲನ್ನು ಚಾಫ್‌ ಕಟರ್‌ನಿಂದ ಕತ್ತರಿಸಿ ಹಸುಗಳಿಗೆ ತಿನ್ನಿಸುವುದು,ಹಾಲು ಕರೆಯುವುದು, ಬಯೋ ಡೈಜೆಸ್ಟರ್‌ ವೀಕ್ಷಣೆ, ವಿವಿಧ ತಳಿಗಳ ಸೀಬೆ ತೋಟದ ವೀಕ್ಷಣೆ, ಕೃಷಿ ಯಂತ್ರೋಪಕರಣಗಳನ್ನು ರೈತರ ಮನೆ ಬಾಗಿಲಲ್ಲೇ ವಿತರಿಸಲಿದ್ದಾರೆ.

ಮಡುವಿನಕೋಡಿ ಗ್ರಾಮ:

ಹೊಸಕೋಟೆ ಗ್ರಾಮದಿಂದ ಹೊರಟು ಬೆಳಗ್ಗೆ 9.45ಕ್ಕೆ ಮಡುವಿನಕೋಡಿ ಗ್ರಾಮಕ್ಕೆ ಸಚಿವರು ತೆರಳುವರು. ನಂತರ 10.30ರವರೆಗೆ ಗ್ರಾಮದ ರೈತರ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವರು. ಭತ್ತದ ಗದ್ದೆಗೆ ಮೆಲುಗೊಬ್ಬರ ಹಾಕುವುದು, ರಾಗಿ ನಾಟಿಯಲ್ಲಿ ಭಾಗವಹಿಸಲಿದ್ದಾರೆ. ಯಾಂತ್ರೀಕೃತ ಕಬ್ಬುನಾಟಿ ವಿಧಾನದ ತಾಂತ್ರಿಕತೆ ಸಮರ್ಪಣೆ, ಸೂಕ್ಷ್ಮಾಣು ಜೀವಿ ಗೊಬ್ಬರ ಬಳಸಿ ಕಬ್ಬಿನಲ್ಲಿ ತರಗು ನಿರ್ವಹಣೆ ಮಾಡುವ ಬಗ್ಗೆ ತಾಂತ್ರಿಕತೆ ಪರಿಚಯ, ಯಂತ್ರೋಪಕರಣ ಬಳಸಿ ತೆಂಗಿನಗರಿ ಪುಡಿ ಮಾಡುವುದರ ಪರಿಚಯ, ರಾಗಿಹೊಲದಲ್ಲಿ ಎಡೆಕುಂಟೆ ಒಡೆಯುವ ರೈತರೊಂದಿಗೆ ಭಾಗಿಯಾಗಲಿದ್ದಾರೆ.

10.40ಕ್ಕೆ ಮಡುವಿನಕೋಡಿ ಗ್ರಾಮದಲ್ಲಿ ಎತ್ತಿನಗಾಡಿ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಗ್ರಾಮ ದೇವತೆಗೆ ಪೂಜೆ ಸಲ್ಲಿಸುತ್ತಾರೆ. 11 ಗಂಟೆಗೆ ಕೃಷಿ ವಸ್ತು ಪ್ರದರ್ಶನ ಉದ್ಘಾಟನೆ, ಫಲಾನುಭವಿಗಳಿಗೆ ಕೆ-ಕಿಸಾನ್‌ ಮುಖಾಂತರ ಕೃಷಿ ಯಂತ್ರೋಪಕರಣಗಳ ವಿತರಣೆ, ಪ್ರಗತಿಪರ ರೈತ ದಂಪತಿಗಳಿಗೆ ಸನ್ಮಾನ, ಭತ್ತದ ಬೆಳೆ ಸ್ಪರ್ಧೆಯಲ್ಲಿ ವಿಜೇತ ರೈತರಿಗೆ ಸನ್ಮಾನ, ಭಿತ್ತಿಪತ್ರಗಳ ಬಿಡುಗಡೆ ಮಾಡಲಿದ್ದಾರೆ.

ಭೋಜನದ ನಂತರ 2.35ಕ್ಕೆ ದೊಡ್ಡ ಯಾಚೇನಹಳ್ಳಿಯ ಮೋಹನ್‌ ಅವರ ಸಾವಯವ ಕೃಷಿ ಪದ್ಧತಿ ಜಮೀನಿಗೆ ಭೇಟಿ ಮಾಡಲಿದ್ದಾರೆ. ಮಧ್ಯಾಹ್ನ 3.05ಕ್ಕೆ ಮಂಡ್ಯ ಜಿಲ್ಲೆಯ ರೈತರೊಂದಿಗೆ ಗೂಗಲ್‌ ಮೀಟ್‌ದಲ್ಲಿ ಭಾಗಿಯಾದ ನಂತರ ಸಂಜೆ 4.30ಕ್ಕೆ ಸ್ಥಳೀಯ ರೈತರೊಂದಿಗೆ ಸಂವಾದ ಮತ್ತು ಆಯ್ದ ಫಲಾನುಭವಿಗಳಿಗೆ ಕೆ-ಕಿಸಾನ್‌ ಮೂಲಕ ಕಿಟ್‌ ವಿತರಿಸಲಿದ್ದಾರೆ. ಸಂಜೆ 4.30ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.