Asianet Suvarna News Asianet Suvarna News

ಬಿಬಿಎಂಪಿ ಚುನಾವಣೆ: ದಿನವಿಡೀ ಸದಸ್ಯರ ವಾಗ್ವಾದ!

45ಕ್ಕೂ ಹೆಚ್ಚು ಆಸ್ತಿ 5 ವರ್ಷಕ್ಕೆ ಬಾಡಿಗೆ, ಗುತ್ತಿಗೆ| ಸರ್ವಾನುಮತದ ತೀರ್ಮಾನ| ಏರ್‌ಪೋರ್ಟ್‌ ಪರ್ಯಾಯ ರಸ್ತೆಗೆ 1 ಕೋಟಿ ಮೀಸಲು| ಆಸ್ತಿ ವಿವರ ಸಲ್ಲಿಸದ ಸದಸ್ಯರಿಗೆ ನೀಡಿದ್ದ ಕಾಲ ಮಿತಿ ಮನ್ನಾ| ಬಿಬಿಎಂಪಿ ಆಸ್ತಿ ಕಡಿಮೆ ದರಕ್ಕೆ ಬಾಡಿಗೆ ನೀಡಲು ನಿರ್ಧಾರ| 

BBMP Members Altercation for In terms of Holding Election
Author
Bengaluru, First Published Sep 9, 2020, 8:53 AM IST

ಬೆಂಗಳೂರು(ಸೆ.09): ಅವಧಿ ಮುಗಿಯುತ್ತಿರುವ ಬಿಬಿಎಂಪಿಯ ಚುನಾವಣೆ ನಡೆಸುವ ವಿಷಯದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ದಿನವಿಡೀ ವಾದ-ಪ್ರತಿವಾದ ನಡೆದಿದೆ. ಪ್ರತಿಪಕ್ಷಗಳು ಪಾಲಿಕೆಯ ಚುನಾವಣೆಯನ್ನು ಮುಂದೂಡಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರೆ, ಇದಕ್ಕೆ ಪ್ರತಿಯಾಗಿ ಚುನಾವಣೆ ವಿಳಂಬಕ್ಕೆ ಚುನಾವಣಾ ಆಯೋಗ ಕಾರಣ, ಚುನಾವಣೆಗೆ ರಾಜ್ಯ ಸರ್ಕಾರ ಮತ್ತು ಪಾಲಿಕೆ ಸಿದ್ಧವಿದೆ ಎಂದು ಆಡಳಿತ ಪಕ್ಷದ ಸದಸ್ಯರು ತಿರುಗೇಟು ನೀಡಿದ್ದಾರೆ.

ಸೆ.10ಕ್ಕೆ ಪಾಲಿಕೆ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಳ್ಳುವುದರಿಂದ ಮಂಗಳವಾರ ಅವಧಿಯ ಕೊನೆ ಮಾಸಿಕ ಸಭೆ ಕರೆಯಲಾಗಿತ್ತು. ಸಭೆ ಆರಂಭವಾಗುತ್ತಿದಂತೆ ಕಾಂಗ್ರೆಸ್‌ ಸದಸ್ಯರು ರಾಜ್ಯ ಸರ್ಕಾರ ಕೋವಿಡ್‌ ಕಾರಣ ನೀಡಿ ಬಿಬಿಎಂಪಿಯ ಚುನಾವಣೆಯನ್ನು ಮುಂದೂಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದಾಗ ಆಡಳಿತ ಪಕ್ಷದ ಬಿಜೆಪಿ ಸದಸ್ಯರು ಎದ್ದು ನಿಂತು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಉಭಯ ಸದಸ್ಯರ ನಡುವೆ ನಡುವೆ ವಾಗ್ವಾದ ಉಂಟಾಯಿತು. ಮಧ್ಯಪ್ರವೇಶಿಸಿದ ಮೇಯರ್‌, ಚುನಾವಣೆ ಕುರಿತು ಚರ್ಚೆ ಮಾಡೋಣ ಎಂದು ಹೇಳಿ ಇಡೀ ದಿನ ಚರ್ಚೆಗೆ ಅವಕಾಶ ನೀಡಿದರು.

ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌ ಮಾತನಾಡಿ, 2007-2010ರ ವರೆಗೆ ಚುನಾವಣೆ ಮುಂದೂಡಿದ ರೀತಿಯಲ್ಲಿಯೇ ಸರ್ಕಾರ ಈ ಬಾರಿಯೂ ಚುನಾವಣೆ ಮುಂದೂಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಚುನಾವಣೆ ನಡೆಸಲು ಸರ್ಕಾರಕ್ಕೆ ಭಯವಿದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ ಎಂದು ಆರೋಪಿಸಿದರು.

'ಬಿಬಿಎಂಪಿ ಚುನಾವಣೆ ಮುಂದೂಡಿದ್ರೆ ಹೈಕೋರ್ಟ್‌ಗೆ ಮೊರೆ'

ಚುನಾವಣಾ ಆಯೋಗ ವಿಫಲ:

ಬಿಜೆಪಿ ಮುಖಂಡ ಪದ್ಮನಾಭ ರೆಡ್ಡಿ ಮಾತನಾಡಿ, ಬಿಬಿಎಂಪಿ 2020-2025ನೇ ಸಾಲಿನ ಪಾಲಿಕೆ ಚುನಾವಣೆ ನಡೆಯದಿರಲು ಚುನಾವಣೆ ಆಯೋಗವೇ ಕಾರಣ. ಆಯೋಗ ಸಕಾಲದಲ್ಲಿ ಚುನಾವಣೆ ನಡೆಸುವಲ್ಲಿ ವಿಫಲವಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಲೋಪವಿಲ್ಲ ಎಂದು ಸಮರ್ಥಿಸಿಕೊಂಡರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು, ಸರ್ಕಾರ ವಾರ್ಡ್‌ ಮೀಸಲಾತಿ ಪಟ್ಟಿಪ್ರಕಟಿಲ್ಲ. ಹೀಗಾಗಿ, ಚುನಾವಣಾ ಆಯೋಗವೇ ಕೋರ್ಟ್‌ ಮೊರೆ ಹೋಗಿದೆ ಎಂದರು.

ಪಶ್ಚಿಮ ಬಂಗಾಳ ಮಾದರಿ ಜಾರಿಗೆ ಪದ್ಮನಾಭ ಆಗ್ರಹ

ಪಶ್ಚಿಮ ಬಂಗಾಳದಲ್ಲಿ 91 ಸ್ಥಳೀಯ ಸಂಸ್ಥೆಗಳ (ಮುನ್ಸಿಪಾಲಿಟಿ) ಸದಸ್ಯರ ಅಧಿಕಾರ ಅವಧಿಯನ್ನು ಮುಂದಿನ ಚುನಾವಣೆ ಘೋಷಣೆ ಆಗುವವರೆಗೆ ಮುಂದುವರಿಸಲಾಗಿದೆ. ಇದೇ ಮಾದರಿಯಲ್ಲಿ ಸರ್ಕಾರ ಪಾಲಿಕೆ ಸದಸ್ಯರ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಪದ್ಮನಾಭ ರೆಡ್ಡಿ ಅಭಿಪ್ರಾಯಪಟ್ಟರು. ಇದಕ್ಕೆ ಪಾಲಿಕೆಯಲ್ಲಿ ಪಕ್ಷಾತೀತ ಬೆಂಬಲ ವ್ಯಕ್ತವಾಯಿತು.

ಹೊಸ ಕಾಯ್ದೆಯಿಂದ ಅಧಿಕಾರ ಮೊಟಕು

ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಪಾಲಿಕೆ ಸದಸ್ಯ ಎಂ.ಶಿವರಾಜು ಮಾತನಾಡಿ, ರಾಜ್ಯ ಸರ್ಕಾರ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ತರಲು ಮುಂದಾಗಿದೆ. ಇದರಲ್ಲಿ ಪಾಲಿಕೆ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸುವ ಹಲವು ಅಂಶಗಳಿವೆ ಎಂದು ದೂರಿದರು. ಇದಕ್ಕೆ ಧ್ವನಿಗೂಡಿದ ಅಬ್ದುಲ್‌ ವಾಜೀದ್‌, ಹೊಸ ಕಾಯ್ದೆಯಲ್ಲಿ ಯಾವ ಅಂಶ ಇದೆ, ಯಾವುದೆಲ್ಲ ಜಾರಿಯಾಗಲಿದೆ ಎನ್ನುವ ಬಗ್ಗೆ ಒಮ್ಮೆಯೂ ಚರ್ಚೆ ಆಗಲಿಲ್ಲ. ತಜ್ಞರು, ನಗರಾಭಿವೃದ್ಧಿ ಪರಿಣಿತರ ಅಭಿಪ್ರಾಯ ಪಡೆದುಕೊಳ್ಳಲಿಲ್ಲ ಎಂದರು.

ಬಿಬಿಎಂಪಿ ವಾರ್ಡ್‌ ಸಂಖ್ಯೆ 225ಕ್ಕೆ ಹೆಚ್ಚಿಸಲು ಶಿಫಾರಸು

ಪಾಲಿಕೆ ಸದಸ್ಯರನ್ನು ತುಳಿಯುವ ವ್ಯೂಹ

ಪಾಲಿಕೆ ಸದಸ್ಯರನ್ನು ತುಳಿಯುವ ವ್ಯೂಹ ನಮಗೆ ತಿಳಿಯದಂತೆ ಸೃಷ್ಟಿಯಾಗುತ್ತಲೇ ಇದೆ. ಇಲ್ಲಿರುವ ಹಲವು ಪಾಲಿಕೆ ಸದಸ್ಯರು ಮುಂದಿನ ಚುನಾವಣೆಗಳಲ್ಲಿ ಶಾಸಕರಾಗಿ ಸ್ಪರ್ಧಿಸಲಿದ್ದಾರೆ. ಆದರೆ, ಇದು ಕೆಲವರಿಗೆ ಬೇಕಾಗಿಲ್ಲ. ಅವರ ಅಸ್ತಿತ್ವದ ಪ್ರಶ್ನೆಯೂ ಇದರಲ್ಲಿ ಇದೆ. ಇದೇ ಕಾರಣಕ್ಕೆ ಪಾಲಿಕೆ ಚುನಾವಣೆ ಮುಂದೂಡಿಕೆ ತಂತ್ರ ಮಾಡಲಾಗುತ್ತಿದೆ ಎಂದು ಎಂ.ಶಿವರಾಜು ಆರೋಪಿಸಿದರು.

ಪ್ರಣಬ್‌ಗೆ ಸಂತಾಪ

ಇತ್ತೀಚಿಗೆ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಕ ನಿರ್ಣಯ ಮಂಡಿಸಲಾಯಿತು. ಬಿಬಿಎಂಪಿ ಮೇಯರ್‌ ಸೇರಿದಂತೆ ಹಲವು ಮುಖಂಡರು ನುಡಿ ನಮನ ಸಲ್ಲಿಸಿದರು.
ಬಿಬಿಎಂಪಿ ಆಸ್ತಿ ಕಡಿಮೆ ದರಕ್ಕೆ ಬಾಡಿಗೆ ನೀಡಲು ನಿರ್ಧಾರ

ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಇನ್ನೊಂದು ದಿನ ಬಾಕಿ ಇರುವಾಗ 45ಕ್ಕೂ ಅಧಿಕ ಪಾಲಿಕೆ ಆಸ್ತಿಗಳನ್ನು ಕಡಿಮೆ ದರಕ್ಕೆ ಬಾಡಿಗೆ ಮತ್ತು ಗುತ್ತಿಗೆ ನೀಡುವ ನಿರ್ಣಯವನ್ನು ಮಂಗಳವಾರ ತೆಗೆದುಕೊಳ್ಳಲಾಗಿದೆ. ಬಿಬಿಎಂಪಿ ಸದಸ್ಯ ಅಧಿಕಾರ ಅವಧಿ ಸೆ.10ಕ್ಕೆ ಮುಕ್ತಾಯಗೊಳ್ಳಲಿದೆ. ಹಾಗಾಗಿ, ತರಾತುರಿಯಲ್ಲಿ ಮಂಗಳವಾರದ ಸಭೆಯಲ್ಲಿ ಕಡಿಮೆ ಶುಲ್ಕದ ಬಾಡಿಗೆ ಮತ್ತು ಗುತ್ತಿಗೆಗೆ ಪಾಲಿಕೆಯ ಸುಮಾರು 45ಕ್ಕೂ ಹೆಚ್ಚು ಆಸ್ತಿಗಳನ್ನು ಕನಿಷ್ಠ 5 ವರ್ಷಗಳವರೆಗೆ ಗುತ್ತಿಗೆ ನೀಡಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ.

ಪಾಲಿಕೆ ಆಸ್ತಿಗಳನ್ನು ಕಡಿಮೆ ಹಣಕ್ಕೆ ಗುತ್ತಿಗೆ ನೀಡಬಾರದು. ಪ್ರಸ್ತುತ ಮಾರುಕಟ್ಟೆಬೆಲೆಗೆ ಅನುಗುಣವಾಗಿ ಪಾಲಿಕೆ ಆಸ್ತಿಗಳನ್ನು ಗುತ್ತಿಗೆ ಅಥವಾ ವಾರ್ಷಿಕ ಬಾಡಿಗೆ ನೀಡಬೇಕು, ಗುತ್ತಿಗೆ ಆಸ್ತಿಗಳನ್ನು ವಶಕ್ಕೆ ಪಡೆಯಬೇಕು ಎಂಬ ಮಾತುಗಳನ್ನು ಹೇಳುತ್ತಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಮಂಗಳವಾರದ ಸಭೆಯಲ್ಲಿ ಕಡಿಮೆ ದರಕ್ಕೆ ಪಾಲಿಕೆ ಆಸ್ತಿಗಳನ್ನು ಗುತ್ತಿಗೆ ಮತ್ತು ಬಾಡಿಗೆ ನೀಡಲಾಗಿದೆ.

ಜತೆಗೆ ಮಂಗಳವಾರ ನಗರದ ರಸ್ತೆಗಳು, ವೃತ್ತ, ಉದ್ಯಾನ ಹಾಗೂ ಮೇಲ್ಸೇತುವೆಗಳಿಗೆ ಸಮಾಜ ಸೇವಕರು, ಮಹನೀಯರ ಹೆಸರನ್ನು ನಾಮಕರಣ ನಿರ್ಣಯ ತೆಗೆದುಕೊಳ್ಳಲಾಗಿದೆ. ಸ್ವಾಮಿ ವಿವೇಕಾನಂದ, ಶಿವಕುಮಾರ ಸ್ವಾಮೀಜಿ, ಕನಕದಾಸ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳ ನಿರ್ಮಾಣಕ್ಕೆ ಸಭೆ ಒಪ್ಪಿಗೆ ಸೂಚಿಸಿದೆ.

ಶಾಲಾ-ಕಾಲೇಜುಗಳಿಗೆ ಕೆಂಪೇಗೌಡರ ಹೆಸರು:

ದಾನಿಗಳಿಂದ ನೆರವು ಪಡೆದು ನಿರ್ಮಾಣವಾಗದ ಹಾಗೂ ಯಾವುದೇ ನಾಮಾಂಕಿತವಿಲ್ಲದ ಪಾಲಿಕೆ ಶಾಲಾ-ಕಾಲೇಜುಗಳಿಗೆ ನಾಡಪ್ರಭು ಕೆಂಪೇಗೌಡ ಶಾಲಾ-ಕಾಲೇಜುಗಳೆಂದು ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಲಾಯಿತು.
ಆಸ್ತಿ ವಿವರ ಸಲ್ಲಿಸದ ಸದಸ್ಯರಿಗೆ ನೀಡಿದ್ದ ಕಾಲ ಮಿತಿ ಮನ್ನಾ

2015-16ರಲ್ಲಿ ಆಯ್ಕೆಯಾದ ಪಾಲಿಕೆ ಸದಸ್ಯರು ಆಸ್ತಿ ಘೋಷಣೆ ಮಾಡಿಕೊಳ್ಳಲು ತಿಳಿಸಲಾಗಿತ್ತು. ಆದರೆ, 19 ಸದಸ್ಯರು ಆಸ್ತಿ ಘೋಷಣೆ ಮಾಡಿಕೊಳ್ಳದ ಕಾರಣ ಅವರಿಗೆ ಕಾಲಮಿತಿ ನೀಡಲಾಗಿತ್ತು. ಈಗ ಸದಸ್ಯರ ಅಧಿಕಾರ ಮುಕ್ತಾಯವಾಗುತ್ತಿದೆ. 19 ಸದಸ್ಯರಿಗೆ ನೀಡಲಾದ ಕಾಲಮಿತಿಯನ್ನು ಮನ್ನಾ ಮಾಡಲು ಸಭೆಯಲ್ಲಿ ಸರ್ಕಾರಕ್ಕೆ ಕೋರುವಂತೆ ಆಯುಕ್ತರಿಗೆ ಸೂಚಿಸಿ ತೀರ್ಮಾನಿಸಲಾಗಿದೆ.

ಏರ್‌ಪೋರ್ಟ್‌ ಪರ್ಯಾಯ ರಸ್ತೆಗೆ 1 ಕೋಟಿ ಮೀಸಲು

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ರೇವಾ ಕಾಲೇಜ್‌ ಜಂಕ್ಷನ್‌ನಿಂದ ವಿದ್ಯಾನಗರ ಕ್ರಾಸ್‌ವರೆಗಿನ ರಸ್ತೆ ನಿರ್ಮಾಣದ ಭೂ ಸ್ವಾಧೀನಕ್ಕೆ ಒಂದು ಕೋಟಿ ರು. ಮೀಸಲಿಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜತೆಗೆ, ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಕ್ರಮವಹಿಸಲು ಆಯುಕ್ತರಿಗೆ ಸೂಚಿಸಿ ತೀರ್ಮಾನಿಸಲಾಯಿತು.

ಬಿಬಿಎಂಪಿ ಸೂಪರ್‌ ಸೀಡ್‌ ಇಲ್ಲ: ಮೇಯರ್‌ ಗೌತಮ್‌

ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಳ್ಳುವುದಕ್ಕೆ ಕೇವಲ ಎರಡು ದಿನ ಬಾಕಿ ಇದೆ. ಹೀಗಾಗಿ, ಪಾಲಿಕೆ ಸೂಪರ್‌ ಸೀಡ್‌ ಮಾಡುವ ಪ್ರಸಂಗ ಉದ್ಭವಿಸುವುದಿಲ್ಲ ಎಂದು ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.10ಕ್ಕೆ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಳ್ಳಲಿದೆ. ಕೆಎಂಸಿ ಕಾಯ್ದೆ ಪ್ರಕಾರ ಆಡಳಿತ ಅಧಿಕಾರಿ ನೇಮಕ ಮಾಡಲಾಗುತ್ತದೆ. ಇಂದಲ್ಲ ನಾಳೆ ಬಿಬಿಎಂಪಿ ಚುನಾವಣೆ ನಡೆಯಲಿದೆ. ಬೆಂಗಳೂರಿನ ನಾಗರಿಕರ ಹಿತದೃಷ್ಟಿಯಿಂದ ಸರ್ಕಾರ ಒಳ್ಳೆಯ ನಿರ್ಧಾರ ತೆಗದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios