ಬೆಂಗಳೂರಿನ ದಾಸರಹಳ್ಳಿಯಲ್ಲಿರುವ IKEA ಉದ್ದಿಮೆ ಪರವಾನಗಿ ನವೀಕರಣಕ್ಕೆ 65 ಲಕ್ಷ ರೂ. ದಂಡ ಪಾವತಿಸಿದೆ. ಬಿಬಿಎಂಪಿ ತಪಾಸಣೆಯಲ್ಲಿ ಪರವಾನಗಿ ಪಡೆಯದೇ ಇರುವುದು ಕಂಡುಬಂದ ಹಿನ್ನೆಲೆ ನೋಟಿಸ್ ನೀಡಲಾಗಿತ್ತು.

ಬೆಂಗಳೂರು (ಫೆ.27): ಸಿಲಿಕಾನ್ ಸಿಟಿಯ ಬೆಂಗಳೂರಿನಲ್ಲಿ ಅತ್ಯಂತ ಪ್ರಸಿದ್ಧ ಶಾಪಿಂಗ್ ಮಾಲ್‌ಗಳಲ್ಲಿ ಒಂದಾಗಿರುವ ದಾಸರಹಳ್ಳಿ ಬಲಯದ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿಯಿರುವ IKEAದಲ್ಲಿ ಉದ್ದಿಮೆ ಪರವಾನಗಿಗೆ ಸಂಬಂಧಿಸಿದಂತೆ ದಂಡ ಸಮೇತ 65 ಲಕ್ಷ ರೂ. ಶುಲ್ಕವನ್ನು ಪಾವತಿಸಿ ನವೀಕರಣ ಮಾಡಿಕೊಂಡಿದೆ.

Add Asianetnews Kannada as a Preferred SourcegooglePreferred

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿ ಐಕಿಯ (IKEA INDIA PRIVATE LIMITED) ಉದ್ದಿಮೆಯನ್ನು ನಡೆಸುತ್ತಿದೆ. 13ನೇ ಮೇ 2022ರಂದು ಪಾಲಿಕೆ ವತಿಯಿಂದ ಉದ್ದಿಮೆ ಪರವಾನಗಿಯನ್ನು ಪಡೆದಿದ್ದು, 05 ವರ್ಷಗಳಿಗೆ ನವೀಕರಣ ಮಾಡಿಕೊಂಡಿರುತ್ತಾರೆ. ಮುಂದುವರೆದಂತೆ, 08ನೇ ಜನವರಿ 2025ರಂದು ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಲಾಯಿತು.

ಈ ವೇಳೆ 4021 ಹೆಚ್.ಪಿ ಅಶ್ವಶಕ್ತಿ, Areated water, Soft Drinks & Bottled Water ಉದ್ದಿಮೆಗಳಿಗೆ ಪರವಾನಗಿಯನ್ನು ಪಡೆಯದೇ ಇರುವುದು ಕಂಡುಬಂದಿರುತ್ತದೆ. ಈ ಸಂಬಂಧ ಒಟ್ಟು 5 ವರ್ಷಗಳಿಗೆ 2022-23 ನೇ ಸಾಲಿನಿಂದ 2026-27 ನೇ ಸಾಲಿನವರೆಗೂ ಒಟ್ಟು 65,93,600 ರೂ.ಗಳನ್ನು ಪಾವತಿಸಲು ನೋಟಿಸ್‌ಗಳನ್ನು ಜಾರಿ ಮಾಡಲಾಗಿರುತ್ತದೆ. ಐಕಿಯಗೆ ಎರಡು ಬಾರಿ ನೋಟೀಸ್ ನೀಡಿದರೂ ಯಾವುದೇ ರೀತಿಯಲ್ಲಿ ಸ್ಪಂದಿಸಿರುವುದಿಲ್ಲ. ಈ ಸಂಬಂಧ 20ನೇ ಫೆಬ್ರವರಿ 2025 ರಂದು ಉದ್ದಿಮೆದಾರರಿಗೆ 3ನೇ ನೋಟಿಸ್ ಜಾರಿ ಮಾಡಲಾಯಿತು.

ಇದನ್ನೂ ಓದಿ: ಒಟಿಎಸ್‌ ಕೊಟ್ಟರೂ ಗುರಿ ಮುಟ್ಟದ ಬಿಬಿಎಂಪಿ ತೆರಿಗೆ ಸಂಗ್ರಹ ಗುರಿ

ಅದರಂತೆ ಐಕಿಯ ವತಿಯಿಂದ 25ನೇ ಫೆಬ್ರವರಿ 2025ರಂದು 3 ವರ್ಷಗಳ ದಂಡದ ಮೊತ್ತವನ್ನು ಸೇರಿ 5 ವರ್ಷಗಳಿಗೆ ಉದ್ದಿಮೆ ಪರವಾನಗಿಯನ್ನು ಪಡೆಯಲು 65,93,600 ರೂ.ಗಳನ್ನು ಪಾವತಿಸಲಾಗಿದೆ. ಈ ಮೊತ್ತವನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಹೆಸರಿಗೆ ಡಿಡಿ ಸಲ್ಲಿಸಿರುತ್ತಾರೆ. ಇನ್ನು ಪಾಲಿಕೆಗೆ ಬರಬೇಕಿದ್ದ ಸಂಪೂರ್ಣ ಹಣವು ಖಾತೆಗೆ ಜಮೆಯಾಗಿರುತ್ತದೆ. ಈ ಸಂಬಂಧ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೆ ಅನಧಿಕೃವಾಗಿ ನಡೆಸುತ್ತಿರುವ ಮಳಿಗೆ/ಉದ್ದಿಮೆಗಳು ಪರವಾನಗಿ ಪಡೆಯಬೇಕು ಎಂದು ಬಿಬಿಎಂಪಿ ದಾಸರಹಳ್ಳಿ ವಲಯ ಆಯುಕ್ತ ಗಿರೀಶ್ ಎಚ್ಚರಿಕೆ ರವಾನಿಸಿದ್ದಾರೆ.