ಬೆಂಗಳೂರು(ಸೆ.21): ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿ ಕೊಂಡವರ (ಸುಸ್ತಿದಾರರ) ವಸೂಲಿಗೆ ಚರ ಆಸ್ತಿ ಜೊತೆಗೆ ಸ್ಥಿರ ಆಸ್ತಿಯ ಜಪ್ತಿಗೆ ಕೆಎಂಸಿ ಕಾಯ್ದೆ ತಿದ್ದುಪಡಿಗೆ ಪಾಲಿಕೆಯ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 2008ರಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ ಜಾಲ್ತಿಯಲ್ಲಿದೆ. ಆಸ್ತಿ ತೆರಿಗೆ ಬಾಕಿದಾರರಿಗೆ ದುಪ್ಪಟ್ಟು ದಂಡ ವಿಧಿಸಿ ನೋಟಿಸ್‌ ನೀಡಿ ವಸೂಲಿಗೆ ಹಾಗೂ ಚರ ಆಸ್ತಿಗಳನ್ನು ಮಾತ್ರ ಜಪ್ತಿ ಮಾಡುವುದಕ್ಕೆ ಕೆಎಂಸಿ ಕಾಯ್ದೆ 1976ರ ಅಡಿಯಲ್ಲಿ ಅವಕಾಶ ವಿದೆ. ಈ ರೀತಿ ಜಪ್ತಿ, ವಸೂಲಿ ಮಾಡಿದರೂ ಕೆಲವು ವೇಳೆ ಆಸ್ತಿ ತೆರಿಗೆ ಬಾಕಿ ಪೂರ್ಣ ಪ್ರಮಾಣದಲ್ಲಿ ವಸೂಲಿ ಆಗುತ್ತಿಲ್ಲ. ಹೀಗಾಗಿ, ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ನಿಯಮ 164ರಿಂದ 170 ಅಡಿಯಲ್ಲಿ ಬಾಕಿದಾರರ ಚರ ಆಸ್ತಿಯ ಜತೆಗೆ ಸ್ಥಿರ ಆಸ್ತಿಯ ಜಪ್ತಿ, ಹರಾಜು ಮತ್ತು ಮಾರಾಟಕ್ಕೆ ಅವಕಾಶವಿದ್ದು, ಆ ನಿಯಮವನ್ನು ಕೆಎಂಸಿ ಕಾಯ್ದೆಯಲ್ಲಿ ಅಳವಡಿಸುವ ಕುರಿತು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಬಿಬಿಎಂಪಿಯ ಆಡಳಿತಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಪ್ರಮುಖ ಜಂಕ್ಷನ್‌ ಸುಂದರವಾಗಿ ಅಭಿವೃದ್ಧಿಪಡಿಸಿ: ಗೌರವ್‌ ಗುಪ್ತಾ

ಸರ್ಕಾರದ ಒಪ್ಪಿಗೆ ಬೇಕು:

ಆಸ್ತಿ ತೆರಿಗೆ ಬಾಕಿದಾರರ ಸ್ಥಿರ ಆಸ್ತಿಗೆ ಜಪ್ತಿ, ಮಾರಾಟ ಹಾಗೂ ಹರಾಜು ಮಾಡುವ ಬಗ್ಗೆ ಈ ಆಯುಕ್ತರು ಮಂಡಿಸಿರುವ ಪ್ರಸ್ತಾವನೆಯನ್ನು ಆಡಳಿತಾಧಿಕಾರಿ ಅನುಮೋದನೆ ನೀಡಿದ ಬಳಿಕೆ ಸರ್ಕಾರದ ಒಪ್ಪಿಗೆ ಕಳುಹಿಸಲಾಗುತ್ತದೆ. ಸರ್ಕಾರ ಒಪ್ಪಿಗೆ ನೀಡಿ ಕೆಎಂಸಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದರೆ ನಂತರ ಜಾರಿಗೆ ಬರಲಿದೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತರು ಎನ್‌.ಮಂಜುನಾಥ ಪ್ರಸಾದ್‌ ಅವರು, ಸುಸ್ತಿದಾರರ ಬಾಕಿ ವಸೂಲಿಗೆ ಚರ ಆಸ್ತಿ ಮಾತ್ರ ವಸೂಲಿಗೆ ಮಾತ್ರ ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿದೆ. ಕರ್ನಾಟಕ ಭೂ ಕಂದಾಯ ಅಧಿ ನಿಯಮದಂತೆ ಸ್ಥಿರ ಆಸ್ತಿ ವಶಕ್ಕೆ ಕೆಎಂಸಿ ಕಾಯ್ದೆ ತಿದ್ದುಪಡಿ ಪ್ರಸ್ತಾವನೆಯನ್ನು ಆಡಳಿತಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.