ಬೆಂಗಳೂರಿನ ಪ್ರಮುಖ ಜಂಕ್ಷನ್ ಸುಂದರವಾಗಿ ಅಭಿವೃದ್ಧಿಪಡಿಸಿ: ಗೌರವ್ ಗುಪ್ತಾ
ಬೆಂಗಳೂರು(ಸೆ.20): ರಾಜಧಾನಿಯ ಪ್ರಮುಖ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಿ ಸುಂದರವಾಗಿ ಕಾಣುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಅಧಿಕಾರಿಗಳಿಗೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಸೂಚಿಸಿದ್ದಾರೆ.
ಶನಿವಾರ ಬಿಬಿಎಂಪಿ ಅಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಆಯುಕ್ತ ಮಂಜುನಾಥ ಪ್ರಸಾದ್ ಅವರು ಜಂಟಿಯಾಗಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಆಡಳಿತಾಧಿಕಾರಿ ಗೌರವ್‌ಗುಪ್ತಾ, ನಗರದ ಪ್ರಮುಖ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಲು ಗಮನ ಹರಿಸಬೇಕು. ಜತೆಗೆ ಮುಖ್ಯ ರಸ್ತೆಗಳ ಸ್ವಚ್ಛತೆಗೆ ನಿಯೋಜಿಸಿರುವ ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
ಆನೇಪಾಳ್ಯ ಜಂಕ್ಷನ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಅವರು ಪರಿಶೀಲಿಸಿದರು. ಈ ವೇಳೆ ಸುಮಾರು 800 ಮೀಟರ್ ಉದ್ದದ ರಸ್ತೆ ಅಗಲೀಕರಣ ಪ್ರಸ್ತಾವನೆ ಇದೆ. ಅದಕ್ಕಾಗಿ 19 ಆಸ್ತಿಗಳನ್ನು ವಶಕ್ಕೆ ಪಡೆಯಬೇಕಾಗಿದ್ದು, ಯೋಜನಾ ವಿಭಾಗದ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ ‘ದರ ಸಂಧಾನ ಸಮಿತಿ’ ಸಭೆ ನಡೆಸಿ ಆಸ್ತಿ ಮಾಲಿಕರಿಗೆ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಪತ್ರ ಹಂಚಿಕೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಸ್ತೆ ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜಿಯರ್ ವಿವರಿಸಿದರು.
ಎಚ್‌ಎಸ್‌ಆರ್ ಬಡಾವಣೆ ವಾರ್ಡ್‌ನ ಸಿಲ್ಕ್ ಬೋರ್ಡ್ ರಸ್ತೆಯ ಸವೀರ್‍ಸ್ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಿ ವಾರದೊಳಗಾಗಿ ಡಾಂಬರೀಕರಣ ಮಾಡುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಎಚ್‌ಎಸ್‌ಆರ್ ಬಡಾವಣೆ ಭಾಗದಲ್ಲಿ ಸಣ್ಣ ಮಳೆಯಾದರೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ. ರಾಜಕಾಲುವೆಗೆ ಬೆಳ್ಳಂದೂರು ಕೆರೆ, ಮಡಿವಾಳ ಕೆರೆ ನೀರು ಹರಿದು ಬರಲಿದ್ದು, ಜೋರು ಮಳೆಯಾದರೆ ರಾಜಕಾಲುವೆಯಲ್ಲಿನ ನೀರು ಹಿಮ್ಮುಖವಾಗಿ ಎಚ್‌ಎಸ್‌ಆರ್ ಬಡಾವಣೆಗೆ ನುಗ್ಗಲಿದೆ ಎಂದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತ ಎನ್. ಮಂಜುನಾಥ ಪ್ರಸಾದ್, ನೀರು ಹಿಮ್ಮುಖವಾಗಿ ಹರಿಯದಂತೆ ಕೆಲವೆಡೆ ಕ್ರಾಸ್ ಕನೆಕ್ಷನ್ ಕಾಲುವೆಗಳನ್ನು ನಿರ್ಮಿಸಲಾಗಿದೆ. ಇದೀಗ ಹೊಸದಾಗಿ ಪರ್ಯಾಯ ರಾಜಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶೀಘ್ರ ಕಾಮಗಾರಿ ಪ್ರಾರಂಭಿಸಿ ಇರುವ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಸರ್ಜಾಪುರ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲನೆ ನಡೆಸಿದ ಆಡಳಿತಾಧಿಕಾರಿ ಮತ್ತು ಆಯುಕ್ತರು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ಅಲ್ಲದೇ ಸರ್ಜಾಪುರ ಜಂಕ್ಷನ್ ಬಳಿಯ ರಸ್ತೆಗೆ ಡಾಂಬರೀಕರಣ ಮಾಡಿ ಹಾಗೂ ಪಾದಚಾರಿ ಮಾರ್ಗದಲ್ಲಿರುವ ನಿರ್ಮಾಣ ತ್ಯಾಜ್ಯವನ್ನು ತೆರವುಗೊಳಿಸಿ, ದುರಸ್ತಿ ಪಡಿಸಬೇಕೆಂದು ನಿರ್ದೇಶನ ನೀಡಿದರು.