ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜು.19): ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕನ್ನು ಇನ್ನೊಂದು ವಾರದಲ್ಲಿ ನಿಯಂತ್ರಣ ಮಾಡುವೆ. ಕರೋನಾ ವಿಪರೀತವಾಗಿ ಹೆಚ್ಚಾಗುತ್ತಿದ್ದು ಬೆಂಗಳೂರು ನಿವಾಸಿಗಳು ಆತಂಕದಲ್ಲಿರುವ ಈ ಸಂದರ್ಭದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಶನಿವಾರ ಅಧಿಕಾರ ವಹಿಸಿಕೊಂಡ ಎನ್‌.ಮಂಜುನಾಥ್‌ ಪ್ರಸಾದ್ ಇಂತಹದೊಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸರ್ಕಾರದಿಂದ ಆದೇಶ ಬಂದ ಕೂಡಲೇ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಮಂಜುನಾಥ್‌ ಪ್ರಸಾದ್‌ ನಗರದಲ್ಲಿ ವ್ಯಾಪಕವಾಗಿರುವ ಈ ಮಹಾಮಾರಿಯ ಉಪದ್ರವವನ್ನು ನಿಯಂತ್ರಿಸಲು ಹಾಕಿಕೊಂಡಿರುವ ಯೋಜನೆಗಳನ್ನು ‘ಕನ್ನಡಪ್ರಭ’ದೊಂದಿಗೆ ಹೀಗೆ ಹಂಚಿಕೊಂಡಿದ್ದಾರೆ.

*ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಪ್ಲಾನ್‌ ಏನು?

ಸೋಂಕು ಹರಡುತ್ತಿರುವುದಕ್ಕೆ ಕಡಿವಾಣ ಹಾಕುವ ವಿಚಾರದಲ್ಲಿ ಕೆಲವು ಲೋಪದೋಷಗಳಿವೆ. ಅವುಗಳನ್ನು ಸರಿಪಡಿಸಿದರೆ ಕೇವಲ ಒಂದೇ ವಾರದಲ್ಲಿ ನಗರದಲ್ಲಿ ಕೊರೋನಾ ಸೋಂಕನ್ನು ನಿಯಂತ್ರಣಕ್ಕೆ ತರಬಹುದು. ಈಗಾಗಲೇ ಪಾಲಿಕೆ ಎಂಟು ವಲಯಗಳಿಗೆ ಉಸ್ತುವಾರಿ ಸಚಿವರು ಮತ್ತು ಹಿರಿಯ ಐಎಎಸ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಪಾಲಿಕೆಯ 198 ಮಂದಿ ಸದಸ್ಯರೊಂದಿಗೆ ಕೊರೋನಾ ಸೋಂಕು ನಿಯಂತ್ರಣದ ಕುರಿತು ಚರ್ಚೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

*ವ್ಯಾಪಕವಾಗಿ ಸೋಂಕು ಹರಡುವುದಕ್ಕೆ ಕಾರಣಗಳೇನು?

ಪ್ರಮುಖವಾಗಿ ಸೋಂಕಿನ ಲಕ್ಷಣ ಕಂಡು ಬಂದ ರೋಗಿಗೆ ತ್ವರಿತವಾಗಿ ಸೋಂಕು ಪರೀಕ್ಷಾ ವರದಿ ನೀಡಬೇಕು. ಇದರಿಂದ ರೋಗಿಯನ್ನು ಬೇಗ ಐಸೋಲೇಷನ್‌ ಮಾಡಬಹುದು. ಹೆಚ್ಚಿನ ಜನರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಪರೀಕ್ಷೆ ವೇಳೆ ಕೆಲವರು ಸರಿಯಾದ ವಿಳಾಸ ಮತ್ತು ಫೋನ್‌ ನಂಬರ್‌ ನೀಡುತ್ತಿಲ್ಲ. ಈ ರೀತಿಯ ಎರಡು ಸಾವಿರ ಪ್ರಕರಣಗಳಿವೆ. ಇಂತಹ ವ್ಯಕ್ತಿಗಳು ಸೋಂಕಿನ ವಾಹಕಗಳಾಗಿದ್ದಾರೆ. ಅದನ್ನು ಪರಿಹಾರ ಮಾಡಿದರೆ ಸೋಂಕು ನಿಯಂತ್ರಣ ಮಾಡಬಹುದಾಗಿದೆ.

ನಿನ್ನೆ ಸಭೆಗೆ ನೋ ಎಂಟ್ರಿ: ಇವತ್ತು ಅಧಿಕಾರದಿಂದಲೇ ಎತ್ತಂಗಡಿ: BBMPಗೆ ಹೊಸ ಬಾಸ್

*ಸೋಂಕು ನಿಯಂತ್ರಣಕ್ಕೆ ಇರುವ ಪ್ರಮುಖ ಸವಾಲುಗಳೇನು?

ಸೋಂಕು ನಿಯಂತ್ರಣಕ್ಕೆ ಮುಖ್ಯವಾಗಿ ಮಾನವ ಸಂಪನ್ಮೂಲದ ಕೊರತೆ ಇದೆ. ಈ ಬಗ್ಗೆ ತ್ವರಿತವಾಗಿ ಕ್ರಮಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇನ್ನು ಸೋಂಕಿನ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡ ಅಧಿಕಾರಿಗಳು ನಿರ್ಲಕ್ಷ್ಯ ಭಾವನೆ ಹೊಂದಿದ್ದಾರೆ. ಅವರಿಗೆ ಬಿಸಿ ಮುಟ್ಟಿಸುವ ಕೆಲಸ ತ್ವರಿತವಾಗಿ ಆಗಬೇಕಿದೆ. ಈ ಬಗ್ಗೆ ಒಂದೆರಡು ದಿನದಲ್ಲಿ ಬದಲಾವಣೆ ಕಂಡು ಬರಲಿದೆ.

*ಇನ್ನಾದರೂ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಸಮಸ್ಯೆಗೆ ಪರಿಹಾರ ಸಿಗಬಹುದಾ?

ಖಂಡಿತವಾಗಿ ಪರಿಹಾರ ಒಂದೆರಡು ದಿನದಲ್ಲಿ ಸಿಗಲಿದೆ. ಆ್ಯಂಬುಲೆನ್ಸ್‌ ವ್ಯವಸ್ಥೆ ಇದೆ. ಆದರೆ, ಸೋಂಕಿತರ ವ್ಯಕ್ತಿಯನ್ನು ಸೋಂಕು ದೃಢಪಟ್ಟದಿನವೇ ಆಸ್ಪತ್ರೆಗೆ ಅಥವಾ ಆರೈಕೆ ಕೇಂದ್ರಕ್ಕೆ ದಾಖಲಿಸುವ ಕೆಲಸ ಆಗುತ್ತಿಲ್ಲ. ಸೋಂಕು ದೃಢಪಟ್ಟದಿನವೇ ಸೋಂಕಿತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿದರೆ ಸೋಂಕು, ಹರಡುವಿಕೆ ಮತ್ತು ಸಾವಿನ ಸಂಖ್ಯೆ ಎರಡನ್ನೂ ನಿಯಂತ್ರಿಸಬಹುದಾಗಿದೆ.

*ಖಾಸಗಿ ಆಸ್ಪತ್ರೆಗಳು ಹಾಸಿಗೆ ಮಾಹಿತಿ ನೀಡುತ್ತಿಲ್ಲ ಏನು ಕ್ರಮ?

ಖಾಸಗಿ ಆಸ್ಪತ್ರೆಗಳು ಶೇ.50ರಷ್ಟುಹಾಸಿಗೆಗಳನ್ನು ಬಿಬಿಎಂಪಿಯಿಂದ ಶಿಫಾರಸುಗೊಳ್ಳುವ ಸೋಂಕಿತರಿಗೆ ನೀಡಬೇಕು. ಪಾಲಿಕೆ ಶಿಫಾರಸು ಮಾಡುವ ರೋಗಿಯ ವೆಚ್ಚವನ್ನು ಪಾಲಿಕೆ ಭರಿಸಲಿದೆ. ಆದರೆ, ಕೆಲವು ಆಸ್ಪತ್ರೆಗಳು ತಮ್ಮ ಆಸ್ಪತ್ರೆಯಲ್ಲಿ ಖಾಲಿ ಇರುವ ಹಾಸಿಗೆ ಮಾಹಿತಿಯನ್ನು ಪಾಲಿಕೆಗೆ ನೀಡುತ್ತಿಲ್ಲ. ನೇರವಾಗಿ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಹಾಗಾಗಿ, ಪ್ರತಿ ಖಾಸಗಿ ಆಸ್ಪತ್ರೆಗೂ ಒಬ್ಬ ಅಧಿಕಾರಿ ನೇಮಿಸಿ ಮಾಹಿತಿ ಪಡೆಯಲಾಗುವುದು. ಮಾಹಿತಿ ನೀಡದ ಆಸ್ಪತ್ರೆಗಳಿಗೆ ಬಿಬಿಎಂಪಿ ಹಣ ಬಿಡುಗಡೆ ಮಾಡಲ್ಲ, ಕಾನೂನು ಕ್ರಮಕೈಗೊಳ್ಳಲಾಗುವುದು.

*ವಲಯ ಉಸ್ತುವಾರಿ ಸಚಿವರು, ಅಧಿಕಾರಿಗಳೊಂದಿಗೆ ಸಮನ್ವಯತೆ ಹೇಗೆ?

ಈ ಹಿಂದೆ ಬಿಬಿಎಂಪಿಯಲ್ಲಿ ಸುದೀರ್ಘ ಅವಧಿ ಕಾರ್ಯನಿರ್ವಹಿಸಿದ ಅನುಭವ ಇರುವುದರಿಂದ ನಗರದ ಎಲ್ಲ ಶಾಸಕರು, ಸಚಿವರು, 198 ಪಾಲಿಕೆ ಸದಸ್ಯರು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಆ ಅನುಭವ ಹಾಗೂ ಅವರೆಲ್ಲರೂ ಸಹಕಾರ ನೀಡುತ್ತಾರೆಂಬ ವಿಶ್ವಾಸ ಇರುವುದರಿಂದ ಒಂದು ವಾರದಲ್ಲಿ ಸೋಂಕು ನಿಯಂತ್ರಣಕ್ಕೆ ತರುವುದಾಗಿ ಹೇಳಿದ್ದೇನೆ. ನಗರದಲ್ಲಿ ಹೋಂ ಐಸೋಲೆಷನ್‌ಗೆ ಹೆಚ್ಚಾಗಿ ಪ್ರೋತ್ಸಾಹ ನೀಡಬೇಕು. ಸೋಂಕಿನ ಲಕ್ಷಣ ಇಲ್ಲದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವ ಅವಶ್ಯಕತೆ ಇಲ್ಲ. ವಲಯ ಹಾಗೂ ವಾರ್ಡ್‌ ಮಟ್ಟದಲ್ಲಿ ಆರೈಕೆ ವ್ಯವಸ್ಥೆ ಆಗಬೇಕು. ನಗರದಲ್ಲಿ ಖಾಲಿ ಇರುವ ಸಾಕಷ್ಟು ಅಪಾರ್ಟ್‌ಮೆಂಟ್‌ಗಳನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.