ಬೆಂಗಳೂರು(ಜು.30): ಸುರಕ್ಷತಾ ಕ್ರಮಕೈಗೊಳ್ಳದೆ ಆಳವಾದ ಬುನಾದಿ ತೆಗೆಸಿ, ಪಕ್ಕದ ಎರಡು ಕಟ್ಟಡಗಳು ಕುಸಿಯಲು ಕಾರಣರಾದ ನಗರದ ಕಪಾಲಿ ಚಿತ್ರಮಂದಿರದ ಮಾಲೀಕರಿಂದ ನಷ್ಟಪರಿಹಾರ ವಸೂಲಿ ಮಾಡಿ ಕುಸಿದ ಕಟ್ಟಡ ಮಾಲೀಕರಿಗೆ ಪರಿಹಾರ ಕೊಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಗಾಂಧಿನಗರದಲ್ಲಿ ಕಪಾಲಿ ಚಿತ್ರಮಂದಿರ ತೆರವು ಮಾಡಿ ಅಲ್ಲಿ ಬಹುಮಹಡಿಯ ಕಟ್ಟಡ ನಿರ್ಮಾಣ ಮಾಡಲು ಮಾಲೀಕರು ಆಳವಾದ ಬೂನಾದಿ ತೆಗೆದ ಹಿನ್ನೆಲೆಯಲ್ಲಿ ಅಕ್ಕ-ಪಕ್ಕದ ಎರಡು ಕಟ್ಟಡ ಮಂಗಳವಾರ ರಾತ್ರಿ ಕುಸಿತಗೊಂಡಿದ್ದವು. ಬುಧವಾರ ದುರಂತ ಸ್ಥಳಕ್ಕೆ ಭೇಟಿ ನೀಡಿ ಆಯುಕ್ತರು ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಪಾಲಿ ಚಿತ್ರಮಂದಿರ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವ ವೇಳೆ ಸುರಕ್ಷಿತ ಕ್ರಮ ಕೈಗೊಳ್ಳದೆ ಅಜಾಗರೂಕತೆಯಿಂದ ನಡೆದುಕೊಂಡ ಕಾರಣ ಕಟ್ಟಡ ದುರಂತ ಸಂಭವಿಸಿದೆ. ದುರಂತಕ್ಕೆ ಕಾರಣವಾದ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದೆ. ಅವರಿಂದಲೇ ಪರಿಹಾರ ಮೊತ್ತ ವಸೂಲಿ ಮಾಡಿ ನಷ್ಟ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಕಪಾಲಿ ಥಿಯೇಟರ್‌ ಪಕ್ಕದ 2 ಕಟ್ಟಡ ಕುಸಿತ

ಪರವಾನಗಿ ಅಮಾನತು:

ಕಪಾಲಿ ಚಿತ್ರಮಂದಿರ ತೆರವು ಮಾಡಿ ಅಲ್ಲಿ ನಾಲ್ಕು ತಳಮಹಡಿ ಹಾಗೂ ನೆಲ ಮಹಡಿ ಮತ್ತು ಐದು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಕಟ್ಟಡ ಉಪ ವಿಧಿಯ ಪ್ರಕಾರ ಪರವಾನಗಿ ಪಡೆದುಕೊಂಡಿದ್ದಾರೆ. ಆದರೆ, ಕಟ್ಟಡ ನಿರ್ಮಾಣದ ವೇಳೆ ಕಟ್ಟಡ ನಿರ್ಮಾಣ ಮಾಲೀಕರು ನಿರ್ಮಾಣ ಸ್ಥಳದಲ್ಲಿ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಿಕೊಂಡು ತದ ನಂತರ ಕಾಮಗಾರಿ ಆರಂಭಿಸಬೇಕಾಗಿತ್ತು. ಎರಡು ಕಡೆ ಮಾತ್ರ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಮತ್ತೊಂದು ಕಡೆ ಅರ್ಧ ತಡೆಗೋಡೆ ನಿರ್ಮಾಣ, ಉಳಿದ ಮತ್ತೊಂದು ಕಡೆ ತಡೆಗೋಡೆ ನಿರ್ಮಿಸಿಲ್ಲ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾರ್ಮಿಕರು ಸಿಗಲಿಲ್ಲ ಎಂಬ ಕಾರಣದಿಂದ ತಡೆಗೋಡೆ ನಿರ್ಮಿಸಿಲ್ಲ ಎಂದು ಮಾಲೀಕರು ಹೇಳುತ್ತಿದ್ದಾರೆ. ಮಳೆ ಬಂದು ಮಣ್ಣು ಸಡಿಲಗೊಂಡು ಕಟ್ಟಡಗಳ ಬುನಾದಿಗೆ ಹಾನಿ ಉಂಟಾಗಿ ಕಟ್ಟಡ ಕುಸಿದಿದೆ. ಹೊಸ ಕಟ್ಟಡ ನಿರ್ಮಾಣ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಬಿಬಿಎಂಪಿಯಿಂದ ನೋಟಿಸ್‌ ಸಹ ನೀಡಲಾಗಿದೆ. ಜತೆಗೆ ಪಾಲಿಕೆಯಿಂದ ನೀಡಲಾದ ಕಟ್ಟಡ ನಿರ್ಮಾಣ ಪರವಾನಗಿಯನ್ನು ಅಮಾನತಿನಲ್ಲಿ ಇಡಲಾಗಿದೆ ಎಂದು ತಿಳಿಸಿದರು.

ತನಿಖೆಗೆ ಆದೇಶ:

ಕಟ್ಟಡ ಕುಸಿತಕ್ಕೆ ತಾಂತ್ರಿಕ ಕಾರಣದ ಬಗ್ಗೆ ತನಿಖೆಗೆ ಬಿಬಿಎಂಪಿ ಯೋಜನಾ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಪೊಲೀಸ್‌ ಆಯುಕ್ತರೊಂದಿಗೆ ಚರ್ಚೆ ನಡೆಸಿರುವುದಾಗಿ ಹೇಳಿದರು.