ಫುಟ್‌ಪಾತಲ್ಲಿ ಮೂತ್ರ ವಿಸರ್ಜಿಸಿ| 500 ರು. ದಂಡ ಕಟ್ಟಿದ ಭೂಪ| ಸ್ವಚ್ಛತೆ ಪಾಠ ಮಾಡಿ ದಂಡ ವಿಧಿಸಿದ ಮಾರ್ಷಲ್‌ಗಳು| 

ಬೆಂಗಳೂರು(ಆ.26):  ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಗೆ ನಿಷೇಧವಿದ್ದರೂ ಓರ್ವ ವ್ಯಕ್ತಿ ನಗರದ ಶಾಕಾಂಬರಿನಗರದ ಪಾದಚಾರಿ ಮಾರ್ಗದಲ್ಲಿ ರಾಜಾರೋಷವಾಗಿ ಮೂತ್ರ ವಿಸರ್ಜಿಸಿ 500 ದಂಡ ತೆತ್ತಿದ್ದಾರೆ.

ಸೋಮವಾರ ರಾತ್ರಿ ವಾರ್ಡ್‌ ಸಂಖ್ಯೆ 179(ಶಾಕಾಂಬರಿನಗರ ವಾರ್ಡ್‌)ರ ರಸ್ತೆಯೊಂದರ ಪಾದಚಾರಿ ಮಾರ್ಗದಲ್ಲಿ ವ್ಯಕ್ತಿಯೊಬ್ಬ ನಿರ್ಭಿತಿಯಿಂದ ಮೂತ್ರ ವಿಸರ್ಜಿಸುವಾಗ ಪಾಲಿಕೆಯ ಮಾರ್ಷಲ್‌ಗಳಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಮಾರ್ಷಲ್‌ಗಳು ಆತನಿಗೆ ಸ್ವಚ್ಛತೆಯ ಪಾಠ ಮಾಡುವುದರ ಜೊತೆಗೆ ಎಚ್ಚರಿಕೆ ನೀಡಿ ನಿಯಮಾನುಸಾರ 500 ದಂಡ ವಸೂಲಿ ಮಾಡಿ ಬಿಟ್ಟು ಕಳುಹಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ತಡೆಗೆ ಕನ್ನಡಿ!

ಈ ಸಂಬಂಧ ಬಿಬಿಎಂಪಿ ವಿಶೇಷ ಆಯುಕ್ತರು (ಘನತ್ಯಾಜ್ಯ ನಿರ್ವಹಣೆ) ಆ ವ್ಯಕ್ತಿ ಮೂತ್ರ ವಿಸರ್ಜಿಸುತ್ತಿರುವ ಫೋಟೋ ಹಾಗೂ ಆತನಿಂದ ದಂಡ ವಸೂಲಿ ಮಾಡಿರುವ ರಶೀದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.