Asianet Suvarna News Asianet Suvarna News

ಮಹಾದಾಯಿ ಯೋಜನೆಗಾಗಿ ರಕ್ತದಲ್ಲಿ ಪತ್ರ ಬರೆದಿದ್ದ ಬೊಮ್ಮಾಯಿ..!

253 ಕಿ.ಮೀ. ಪಾದಯಾತ್ರೆ ನಡೆಸಿದ್ದ ಬಸವರಾಜ ಬೊಮ್ಮಾಯಿಯಿಂದ ದಶಕಗಳ ಕಾಲ ಹೋರಾಟ, ಈಗ ಅವರ ಅವಧಿಯಲ್ಲೇ ಯೋಜನೆಗೆ ಸಮ್ಮತಿ. 

Basavaraj Bommai Wrote Letter in Blood for Mahadayi Project grg
Author
First Published Dec 30, 2022, 1:30 PM IST

ಬೆಂಗಳೂರು(ಡಿ.30): ಕಳಸಾ-ಬಂಡೂರಿ (ಮಹದಾಯಿ) ಯೋಜನೆ ಅನುಷ್ಠಾನವಾಗಲೇ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಕ್ತದ ಪತ್ರ ಬರೆದು ಹಕ್ಕೋತ್ತಾಯ ಮಾಡಿದ್ದವರು ಬಸವರಾಜ ಬೊಮ್ಮಾಯಿ. ದಶಕಗಳ ನಡೆದ ಹೋರಾಟದಲ್ಲಿ ಸಕ್ರಿಯರಾಗಿದ್ದವರು. ಈ ಮಹತ್ವದ ಯೋಜನೆಗಾಗಿ ಅವಿರತ ಶ್ರಮ ಪಟ್ಟಿದ್ದ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವ ಕಾಲಘಟ್ಟದಲ್ಲೇ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿರುವುದು ಯೋಗಾಯೋಗ! ಬಸವರಾಜ ಬೊಮ್ಮಾಯಿ ಅವರು ಪ್ರಥಮ ಬಾರಿಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದಾಗ ‘ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತರ ಸಮಿತಿ’ ನೇತೃತ್ವದಲ್ಲಿ 2003ರಲ್ಲಿ ನಡೆಸಿದ ಬರೋಬ್ಬರಿ 253 ಕಿ.ಮೀ. ಪಾದಯಾತ್ರೆಯಿಂದ ಈ ಹೋರಾಟ ಆರಂಭವಾಗಿತ್ತು. ನಾಡಿನ ಮುಖ್ಯಮಂತ್ರಿಯಾದ ಬಳಿಕವೂ ‘ಯೋಜನೆ’ಯ ಬೆನ್ನತ್ತಿದ್ದರ ಪ್ರತಿಫಲವಿದು. ಜನಪ್ರತಿನಿಧಿಯಾಗಿ ಹಲವು ಹಂತಗಳಲ್ಲಿ ನಡೆಸಿದ ಅವಿರತ ಶ್ರಮಕ್ಕೆ ಕೊನೆಗೂ ಕಾಯಕಲ್ಪ ಸಿಕ್ಕಂತೆ ಆಗಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಳಸಾ-ಬಂಡೂರಿ ಯೋಜನೆ ಅತ್ಯಗತ್ಯವಾಗಿದ್ದನ್ನು ಮನಗಂಡ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್‌ ಸದಸ್ಯರಾಗಿದ್ದಾಗ ಯೋಜನೆಗೆ ಆಗ್ರಹಿಸಿ ‘ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತರ ಸಮಿತಿ’ ನೇತೃತ್ವದಲ್ಲಿ 2003 ಜುಲೈ 10 ರಂದು ಧಾರವಾಡದಿಂದ ನರಗುಂದಕ್ಕೆ ಹಳ್ಳಿ-ಹಳ್ಳಿಗಳನ್ನು ಸುತ್ತಿ ಬರೋಬ್ಬರಿ 253 ಕಿ.ಮೀ. ಪಾದಯಾತ್ರೆ ನಡೆಸಿದ್ದರು. ಪಾದಯಾತ್ರೆಯ ಮಾರ್ಗಮಧ್ಯೆ ಬರುವ ಪ್ರತಿ ಹಳ್ಳಿಯಲ್ಲೂ ಬಹಿರಂಗ ಸಭೆ ನಡೆಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವ್ಯಾಪಕ ಜನಬೆಂಬಲ ವ್ಯಕ್ತವಾಗುವಂತೆ ಮಾಡಿದ್ದವರು.

ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಗ್ರೀನ್‌ ಸಿಗ್ನಲ್‌: ಹಂಡೆ ಹಾಲು ಕುಡಿದಷ್ಟೇ ಸಂತಸವೆಂದ ಸಚಿವ ಕಾರಜೋಳ

ಕೇಂದ್ರ ಸರ್ಕಾರಕ್ಕೆ ರಕ್ತದಲ್ಲಿ ಪತ್ರ:

ಯೋಜನೆಯ ಅಗತ್ಯದ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದು ಗಮನ ಸೆಳೆದಿದ್ದರು. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆ.ಎಸ್‌.ಈಶ್ವರಪ್ಪ ಅವರು ನೀರಾವರಿ ಸಚಿವರಾಗಿದ್ದರು. ಆ ಅವಧಿಯಲ್ಲೂ ಬಸವರಾಜ ಬೊಮ್ಮಾಯಿ ಅವರು ಯೋಜನೆಯ ಅನುಷ್ಠಾನಕ್ಕೆ ನಿರಂತರವಾಗಿ ‘ಫಾಲೋಅಪ್‌’ ಮಾಡಿದ್ದರು. ಬಿಜೆಪಿ ಮುಖಂಡರಾದ ಪ್ರಹ್ಲಾದ್‌ ಜೋಶಿ, ಜಗದೀಶ್‌ ಶೆಟ್ಟರ್‌ ಅವರ ಜೊತೆ ಹಲವು ಹೋರಾಟಗಳಲ್ಲೂ ಪಾಲ್ಗೊಂಡಿದ್ದರು.

2008-13 ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ವತಃ ಬಸವರಾಜ ಬೊಮ್ಮಾಯಿ ಅವರೇ ನೀರಾವರಿ ಸಚಿವರಾಗಿದ್ದಾಗಲಂತೂ ಯೋಜನೆಯ ಅನುಷ್ಠಾನಕ್ಕೆ ಅವಿರತವಾಗಿ ಶ್ರಮಿಸಿದರು. ಪೂರ್ಣ ಪ್ರಮಾಣದಲ್ಲಿ ಟೆಂಡರ್‌ ಕರೆದು 5 ಕಿ.ಮೀ. ಇಂಟರ್‌ ಲಿಂಕಿಂಗ್‌ ಕಾಲುವೆಯ ಕಾಮಗಾರಿ ಕೈಗೊಳ್ಳಲಾಯಿತು. ಖುದ್ದು ಆಸ್ಥೆ ವಹಿಸಿ ವಿಸ್ತೃತ ಯೋಜನಾ ವರದಿ ತಯಾರಿಸಿದರು. ಅರಣ್ಯೇತರ ವಲಯದಲ್ಲಿ ಕಳಸಾ ಮತ್ತು ಮಲಪ್ರಭ ಸಂಪರ್ಕ ಕಾಲುವೆಗೆ ಒತ್ತು ನೀಡಿದರು. ಯೋಜನೆಯನ್ನು ವಿರೋಧಿಸಿ ಗೋವಾ ಸುಪ್ರೀಂ ಕೋರ್ಚ್‌ಗೆ ಮೊರೆ ಹೋದಾಗ ಟ್ರಿಬ್ಯುನಲ್‌ ರಚನೆಯಾಯಿತು.

8 ಪ್ರಕರಣ ಇತ್ಯರ್ಥ:

ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆಯಲ್ಲಿ 8 ಪ್ರಕರಣ ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳನ್ನು ಸಮರ್ಥ ವಕೀಲರ ಮೂಲಕ ಇತ್ಯರ್ಥ ಮಾಡಿಸಿದ್ದು ಬಸವರಾಜ ಬೊಮ್ಮಾಯಿ ಅವರ ಹೆಗ್ಗಳಿಕೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿರುವ ಈ ಸಂದರ್ಭದಲ್ಲಿ ಯೋಜನೆ ಅನುಷ್ಠಾನಕ್ಕೆ ಸಮ್ಮತಿ ಸಿಕ್ಕಿರುವುದು ಬಸವರಾಜ ಬೊಮ್ಮಾಯಿಯವರ ಜೊತೆಗೆ ಉತ್ತರ ಕರ್ನಾಟಕ ಭಾಗದ ಜನತೆಯ ಮೂರು ದಶಕದ ಸಂಘಟಿತ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ.

ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಅಸ್ತು: ಹೋರಾಟ ಹಾದಿ ಮೆಲುಕು ಹಾಕಿದ ಗಣ್ಯರು

ಬೊಮ್ಮಾಯಿ ಸಮರ್ಥ ಆಡಳಿತಗಾರರು. ಜೊತೆಗೆ ತಾಂತ್ರಿಕ ಪರಿಣಿತರು, ನೀರಾವರಿ ತಜ್ಞರೂ ಆಗಿದ್ದರಿಂದ ಅವರ ಮಾರ್ಗದರ್ಶನದಲ್ಲೇ ವಿಸ್ತೃತ ಯೋಜನಾ ವರದಿಯನ್ನು ಸಂಪೂರ್ಣವಾಗಿ ಮಾರ್ಪಡಿಸಿ ರಾಜ್ಯಕ್ಕೆ ಎಷ್ಟುಪ್ರಮಾಣದ ನೀರು ಹಂಚಿಕೆಯಾಗಿತ್ತೋ ಅಷ್ಟೂನೀರನ್ನು ಬಳಸಿಕೊಳ್ಳಲು ಸಹಕಾರಿಯಾಗುವಂತೆ ಮಾಡಿದ್ದು ಇದಕ್ಕೆ ಯಶಸ್ಸು ಸಿಕ್ಕಿದೆ. ಕಳಸಾ ನಾಲಾ ತಿರುವು ಯೋಜನೆ ಮೂಲಕ 1.72 ಟಿಎಂಸಿ ಮತ್ತು ಬಂಡೂರಿ ನಾಲಾ ತಿರುವು ಯೋಜನೆ ಮೂಲಕ 2.18 ಟಿಎಂಸಿ ಸೇರಿದಂತೆ ಒಟ್ಟು 3.9 ಟಿಎಂಸಿ ನೀರನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಆಗಿದ

ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿ

ಕಳಸಾ-ಬಂಡೂರಿ ಯೋಜನೆಯ ಅಗತ್ಯತೆ ಬಗ್ಗೆ ತಮ್ಮದೇ ಪಕ್ಷದ ಕೇಂದ್ರದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟು ಹಸಿರು ನಿಶಾನೆ ಪಡೆಯುವುದರಲ್ಲಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಸೇರಿದಂತೆ ಹಲವರನ್ನು ಆಗಾಗ್ಗೆ ಭೇಟಿ ಮಾಡಿ ಒತ್ತಡ ತಂತ್ರ ಅನುಸರಿಸಿದ್ದು ಫಲ ನೀಡಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುವ ಸಮಯದಲ್ಲೇ ಇಂತಹ ಸಿಹಿ ಸುದ್ದಿ ಪ್ರಕಟವಾಗಿರುವುದು ಆ ಭಾಗದ ಜನರಿಗೆ ಸಂತಸ ತಂದಿದೆ.

Follow Us:
Download App:
  • android
  • ios