Asianet Suvarna News Asianet Suvarna News

ನಾನು, ಅನಂತ್‌ ಕಾಲೇಜಿನಲ್ಲಿ ಬೆಂಚ್‌ಮೇಟ್‌

ಅವರಿಲ್ಲದಿದ್ದರೆ ಕೃಷ್ಣಾ, ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ಈಗ ದೊರಕಿರುವಷ್ಟು ನ್ಯಾಯ ಸಿಗುತ್ತಿರಲಿಲ್ಲ

Basavaraj Bommai recalls the time he spent with Ananth Kumar
Author
Bangalore, First Published Nov 13, 2018, 7:32 AM IST

ನಾನು ಮತ್ತು ಅನಂತಕುಮಾರ್‌ ಕಾಲೇಜು ದಿನಗಳಿಂದ ಆತ್ಮೀಯ ಸ್ನೇಹಿತರು. ನಾವು ಬರಿ ಕ್ಲಾಸ್‌ಮೇಟ್‌ಗಳಾಗಿರಲಿಲ್ಲ, ಬೆಂಚ್‌ಮೇಟ್‌ಗಳಾಗಿದ್ದೆವು. ವಿದ್ಯಾರ್ಥಿ ದೆಸೆಯಿಂದಲೇ ಅವರು ಹೋರಾಟದ ಗುಣವನ್ನು ಮೈಗೂಡಿಸಿಕೊಂಡಿದ್ದರು. ತುರ್ತು ಪರಿಸ್ಥಿತಿ ದಿನಗಳಲ್ಲಿ ಮುಂಚೂಣಿಯಲ್ಲಿದ್ದರು. 1976ರಲ್ಲಿ ಜಯಪ್ರಕಾಶ್‌ ನಾರಾಯಣ್‌ ಅವರ ಆಂದೋಲನಕ್ಕೆ ನಾವಿಬ್ಬರೂ ಒಟ್ಟಿಗೆ ಧುಮುಕಿದ್ದೆವು. ಅಂದು ವಿದ್ಯಾರ್ಥಿ ಕ್ರಿಯಾ ಸಮಿತಿಯಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಂದೋಲನವನ್ನು ಮುನ್ನಡೆಸಿದರು. ಆ ದಿನ ಹುಬ್ಬಳ್ಳಿಯಲ್ಲಿ ಬಹಳ ದೊಡ್ಡ ಮಟ್ಟದ ಲಾಠಿ ಚಾರ್ಜ್ ನಡೆಯಿತು. ಅನಂತಕುಮಾರ್‌ ಅವರನ್ನು ಪೊಲೀಸರು ಬಂಧಿಸಿದರು.

ಆವತ್ತಿನಿಂದ ಆರಂಭವಾದ ಅವರ ರಾಜಕೀಯ ಚಟುವಟಿಕೆ ದಣಿವರಿಯದೆ ಇಂದಿನವರೆಗೆ ನಡೆದುಕೊಂಡು ಬಂದಿತು. ಎಂದಿಗೂ ಸಹ ಜಯಪ್ರಕಾಶ್‌ ನಾರಾಯಣ್‌ ಅವರನ್ನಾಗಲಿ ಅಥವಾ ಅವರ ವಿಚಾರಾಧಾರೆಗಳನ್ನಾಗಲಿ ಮರೆಯಲಿಲ್ಲ. ತಮ್ಮ ಪ್ರತಿಯೊಂದು ಕಾರ್ಯಕ್ರಮ ಹಾಗೂ ಯೋಜನೆಗಳಲ್ಲಿ ಜೆ.ಪಿ. ಅವರನ್ನು ನೆನಪಿಸಿಕೊಳ್ಳುತ್ತಿದ್ದರು. ಭಾರತೀಯ ಜನತಾ ಪಕ್ಷಕ್ಕೆ ಆಧಾರಸ್ತಂಭವಾಗಿದ್ದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಧ್ವಜವನ್ನು ಹಾರಿಸಿದ ಶ್ರೇಯಸ್ಸು ಬಿ.ಎಸ್‌.ಯಡಿಯೂಪ್ಪನವರ ಜತೆ ಅನಂತಕುಮಾರ್‌ ಅವರಿಗೆ ಸಲ್ಲುತ್ತದೆ.

ಅವರು ಬಹಳ ಸೂಕ್ಷ್ಮ ಹೃದಯಿಗಳಾಗಿದ್ದರು. ತಮ್ಮ ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಚಿಕ್ಕ ಮಕ್ಕಳಿಗೆ ಆಹಾರ ಕೊಡುವ ಕಾರ್ಯಕ್ರಮ ಯಾರೂ ಯೋಚಿಸಿರಲಿಲ್ಲ. ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜಸ್ಥಾನ ಸೇರಿದಂತೆ ಇತರೆಡೆ ಸಹ ಮಾಡಿರುವುದು ಅಮೋಘ ಸಾಧನೆ. ಅದೇ ರೀತಿ ಇತ್ತೀಚೆಗೆ ಸಸ್ಯಾಗ್ರಹ ಎಂಬ ವಿಶಿಷ್ಟಕಾರ್ಯಕ್ರಮ ಆರಂಭಿಸಿದರು. ಬೆಂಗಳೂರಿನಲ್ಲಿ ನೂರಾರು ಅದ್ಭುತ ಕಾರ್ಯಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕೇಂದ್ರದಲ್ಲಿ ದಕ್ಷ ಆಡಳಿತಗಾರ. ರಾಜ್ಯದಲ್ಲಿ ಒಬ್ಬ ಧೀಮಂತ ನಾಯಕ. ನಮ್ಮ ಪಕ್ಷ ದಿಟ್ಟಹೋರಾಟಗಾರ, ಸಂಘಟಕನನ್ನು ಕಳೆದುಕೊಂಡಂತಾಗಿದೆ. ರಾಜ್ಯದ ವಿಚಾರಗಳಲ್ಲಿ ಕೇಂದ್ರ ಮಟ್ಟದ ದನಿಯಾಗಿದ್ದರು. ಕೃಷ್ಣಾ ಮತ್ತು ಕಾವೇರಿ ನದಿ ವಿಷಯಗಳಲ್ಲಿ ಅನಂತಕುಮಾರ್‌ ಅವರಿಲ್ಲದೆ ಹೋಗಿದ್ದರೆ ರಾಜ್ಯಕ್ಕೆ ಈಗ ಸಿಕ್ಕಿರುವಷ್ಟುನ್ಯಾಯ ಸಿಗುತ್ತಿರಲಿಲ್ಲ.

ಆಲಮಟ್ಟಿಅಣೆಕಟ್ಟೆಯ ಎತ್ತರವನ್ನು 524 ಮೀಟರ್‌ಗಳಿಗೆ ಏರಿಸಲು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಅನಂತಕುಮಾರ್‌ ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಅದೇ ರೀತಿ ಕಾವೇರಿ ವಿಚಾರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸುಪ್ರೀಂಕೋರ್ಟ್‌ನ ಆದೇಶದ ತೂಗುಗತ್ತಿ ತಪ್ಪಿಸಿ ಅವತ್ತು ಪ್ರಧಾನಿ ಮಟ್ಟದಲ್ಲಿ ಒಂದು ಸಮಿತಿ ರಚಿಸಿ ಕಾವೇರಿಗೆ ನ್ಯಾಯ ಕೊಡಿಸಿದ್ದರು. ಮೂರು ವರ್ಷಗಳ ಹಿಂದೆ ತೆಲಂಗಾಣ ಸರ್ಕಾರವು ಕೃಷ್ಣಾ ನ್ಯಾಯಾಧಿಕರಣ ಪುನರ್‌ ವಿಮರ್ಶೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದಾಗ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ಅನಂತಕುಮಾರ್‌ ಪ್ರಮುಖ ಪಾತ್ರ ವಹಿಸಿದ್ದರು. ಆ ಸಂದರ್ಭದಲ್ಲಿ ಅನಂತಕುಮಾರ್‌ ಇಲ್ಲದಿದ್ದರೆ ಇಡೀ ಕೃಷ್ಣಾ ಕಣಿವೆ ಹೊತ್ತಿ ಉರಿಯುತ್ತಿತ್ತು. ಅವರದ್ದು ನಾಡು-ನುಡಿಗೆ, ನೆಲ ಜಲಕ್ಕೆ ಅಭೂತಪೂರ್ವ ಕಾರ್ಯ. ಅವರನ್ನು ಕಳೆದುಕೊಂಡು ರಾಜ್ಯ, ದೇಶ, ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ನನ್ನ ಬಾಲ್ಯ ಸ್ನೇಹಿತನನ್ನು ಕಳೆದುಕೊಂಡ ನನಗೆ ಬಹಳ ದುಃಖವಾಗುತ್ತಿದೆ. ಅವರ ವಿಚಾರಧಾರೆಯನ್ನು ಪುನರ್‌ ನೆನಪು ಮಾಡಿಕೊಳ್ಳುವುದೇ ಅವರಿಗೆ ಸಲ್ಲಿಸುವ ಗೌರವ.

- ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮತ್ತು ಶಾಸಕ

Follow Us:
Download App:
  • android
  • ios