ನವೀನ್ ದೇಹ ಸಂರಕ್ಷಿಸುವುದು ಆದ್ಯತೆಯಾಗಿತ್ತು ಯುದ್ಧಭೂಮಿಯಿಂದ ಶವ ಕೆಡದಂತೆ ತರುವುದು ಸವಾಲಾಗಿತ್ತು ಪ್ರಧಾನಿ ಮೋದಿಗೆ ಸಿಎಂ ಬೊಮ್ಮಾಯಿ ಧನ್ಯವಾದ
ಹಾವೇರಿ(ಮಾ.22): ಉಕ್ರೇನ್‌ನಲ್ಲಿ ಮಾ. 1ರಂದು ಶೆಲ್ ದಾಳಿಯಲ್ಲಿ ಮೃತಪಟ್ಟನವೀನ್ ಗ್ಯಾನಗೌಡರ ಮೃತದೇಹ ತಾಯ್ನಾಡಿಗೆ ತಂದಿರುವುದೇ ಒಂದು ಪವಾಡ. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಾತ್ರ ಬಹಳ ಹಿರಿದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಉಕ್ರೇನಿಂದ ಬೆಂಗಳೂರು ಮಾರ್ಗವಾಗಿ ಸ್ವಗ್ರಾಮ ಚಳಗೇರಿಗೆ ಆಗಮಿಸಿದ ವೈದ್ಯಕೀಯ ವಿದ್ಯಾರ್ಥಿ ಮೃತ ನವೀನ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಯುದ್ಧಭೂಮಿಯಲ್ಲಿ ಸೈನಿಕರನ್ನು ಹೊರತರುವುದು ಕಷ್ಟಸಾಧ್ಯ, ಇಂತಹ ಸನ್ನಿವೇಶದಲ್ಲಿ ನಾಗರಿಕರನ್ನು ಹೊರತರುವುದು ಪವಾಡಸದೃಶವಾದ ಕಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಮೃತ ದೇಹ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ವಿದೇಶಗಳಲ್ಲಿ ಪ್ರಧಾನಮಂತ್ರಿಗಳ ವರ್ಚಸ್ಸು ಎಷ್ಟಿದೆ ಎಂದು ತಿಳಿಯುತ್ತದೆ. ಈ ಕಾರ್ಯಕ್ಕೆ ಪ್ರಧಾನಮಂತ್ರಿಗಳಿಗೆ ರಾಜ್ಯದ ಜನತೆ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು.
ನವೀನ್ ಮೃತದೇಹ ತವರಿಗೆ: ಪ್ರಧಾನಿಗೆ ರಾಜೀವ್ ಚಂದ್ರಶೇಖರ್ ಧನ್ಯವಾದ
ನವೀನ್ ಮೃತಪಟ್ಟಸಂದರ್ಭದಲ್ಲಿ ದೂರವಾಣಿ ಮೂಲಕ ಕರೆಮಾಡಿ ನವೀನ್ ತಂದೆಯೊಂದಿಗೆ ಪ್ರಧಾನಮಂತ್ರಿಗಳು ಮಾತನಾಡಿ, ನವೀನ ಆಪಕಾ ಬೇಟಾ ನಹಿ, ದೇಶ್ ಕಾ ಬೇಟಾ ಹೈ ಎಂದು ಹೇಳಿ ಆತನ ಪಾರ್ಥಿವ ಶರೀರ ತರುವುದಾಗಿ ಭರವಸೆ ನೀಡಿದ್ದರು. ಈ ಭರವಸೆಯಂತೆ ಮೃತ ದೇಹ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೊಟ್ಟಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಹೇಳಿದರು.
ಆಪರೇಷನ್ ಗಂಗಾದಲ್ಲಿ ರಾಜ್ಯದ 572 ವಿದ್ಯಾರ್ಥಿಗಳು ಸೇರಿ ದೇಶದ 19 ಸಾವಿರ ವಿದ್ಯಾರ್ಥಿಗಳನ್ನು ವಾಪಸ್ ತಾಯ್ನಾಡಿಗೆ ತರುವಲ್ಲಿ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಶ್ರೇಷ್ಠ ಕಾರ್ಯ ಮಾಡಿದೆ. ಆಪರೇಷನ್ ಗಂಗಾ ಮೊದಲೇ ದೇಶದ 61 ಜನರು ವಾಪಸ್ ದೇಶಕ್ಕೆ ಆಗಮಿಸಿದ್ದರು. ಬೇರೆ ಯಾವುದೇ ದೇಶ ತನ್ನ ನಾಗರಿಕರನ್ನು ತರುವ ಕೆಲಸ ಮಾಡಿಲ್ಲ ಎಂದರು.
ಮೆಡಿಕಲ್ ಕಾಲೇಜಿನಲ್ಲಿ ದೇಹದಾನದ ಪ್ರಕ್ರಿಯೆ ಹೇಗಿರುತ್ತದೆ.? ವೈದ್ಯರಿಂದ ವಿವರಣೆ
ಮೃತ ನವೀನ ಪಾರ್ಥಿವ ಶರೀರ ತರುವಲ್ಲಿ ಪ್ರಧಾನಮಂತ್ರಿಗಳು, ಪಿಎಂ ಕಚೇರಿ, ವಿದೇಶಾಂಗ ಸಚಿವ ಜೈಶಂಕರ, ರಷ್ಯಾ, ಉಕ್ರೇನ್ ರಾಯಭಾರಿ ಕಚೇರಿಗಳು ಸಮನ್ವಯದಿಂದ ಕಾರ್ಯಾಚರಣೆ ಮಾಡಿದ್ದಾರೆ. ನವೀನ್ ಸಾವಿನ ಸುದ್ದಿ ತಿಳಿದ ತಕ್ಷಣ ಮೃತದೇಹದ ರಕ್ಷಣೆಗೆ ನಿರಂತರ ಸಂಪರ್ಕ ಸಾಧಿಸಲಾಯಿತು. ಮೃತಪಟ್ಟಸ್ಥಳದಿಂದ ಶವಾಗಾರಕ್ಕೆ ಸ್ಥಳಾಂತರಿಸಲು ಬಾಂಬಿಂಗ್ ಕಾರಣ ತೊಂದರೆಯಾಗಿತ್ತು. ಅಂತಹ ಪರಿಸ್ಥಿಯಲ್ಲೂ ಸಹ ಮೃತದೇಹವನ್ನು ಸುರಕ್ಷಿತವಾಗಿ ಶವಾಗರಕ್ಕೆ ಸಾಗಿಸಿ ಫ್ರೀಜರ್‌ನಲ್ಲಿ ಇಡಲಾಗಿತ್ತು. ಮೃತಪಟ್ಟು 21 ದಿನಗಳು ಕಳೆದರು ಮೃತಹದೇಹಕ್ಕೆ ಯಾವುದೇ ಇನ್‌ಫೆಕ್ಷನ್ ಆಗದಂತೆ ಕ್ರಮವಹಿಸಿದ್ದು ಶ್ಲಾಘನೀಯ ಎಂದರು.
ಭಾವುಕರಾದ ಸಿಎಂ:
ಮೃತ ನವೀನ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ, ಮೃತ ನವೀನ ತಾಯಿ ವಿಜಯಲಕ್ಷ್ಮೀ ಅವರನ್ನು ಸಂತೈಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭಾವುಕರಾದರು. ಈ ಸಂದರ್ಭದಲ್ಲಿ ಮೃತರ ತಂದೆ-ತಾಯಿ ಹಾಗೂ ಸಹೋದರ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಚಳಗೇರಿಗೆ ಮೃತ ನವೀನ್‌ನ ಪಾರ್ಥಿವ ಶರೀರ ತರುವ ಮುನ್ನ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಖುದ್ದು ನಿಂತು ಪಾರ್ಥಿವ ಶರೀರವನ್ನು ಬರಮಾಡಿಕೊಂಡು ವಿಧಿವಿಧಾನವನ್ನು ಪೂರೈಸಿ ಸ್ವ ಗ್ರಾಮ ಚಳಗೇರಿಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲು ನೆರವು ನೀಡಿದರು.
ನವೀನ್ ದೇಹ ಸಂರಕ್ಷಿಸುವುದು ಆದ್ಯತೆಯಾಗಿತ್ತು:
ಉಕ್ರೇನ್‌ನಲ್ಲಿ ಮೃತಪಟ್ಟವಿದ್ಯಾರ್ಥಿ ನವೀನ್ ಮೃತದೇಹ 21 ದಿನಗಳ ಬಳಿಕವೂ ಕೆಡದಂತೆ ಹಾಗೂ ಯುದ್ಧ ಭೂಮಿಯಿಂದ ತಂದಿರುವುದನ್ನು ಪವಾಡಸದೃಶ ಎಂದು ಸಿಎಂ ಬಣ್ಣಿಸಿದರು.
ನವೀನ್ ದೇಹವನ್ನು ಯಾವ ರೀತಿ ತರಲಾಯಿತು ಎಂಬುದನ್ನು ವಿವರಿಸಿದ ಅವರು, ನವೀನ್‌ಗೆ ನೇರವಾಗಿ ಶೆಲ್ ಬಡಿದಂತೆ ಕಂಡುಬಂದಿಲ್ಲ. ಪಕ್ಕದ ಕಟ್ಟಡದ ಮೇಲೆ ಶೆಲ್ ದಾಳಿಯಾಗಿ ತಲೆಗೆ ಏಟು ಬಿದ್ದು ನವೀನ್ ಮೃತಪಟ್ಟಿದ್ದಾನೆ. ಅದಾದ ತಕ್ಷಣ ಪ್ರಧಾನಿಗಳೂ ಪೋಷಕರೊಂದಿಗೆ ಮಾತನಾಡಿದರು. ಮೊದಲು ನವೀನ್ ದೇಹ ಸಂರಕ್ಷಿಸುವುದು ನಮ್ಮ ಆದ್ಯತೆಯಾಗಿತ್ತು.
ನಿರಂತರ ಸಂಪರ್ಕ ಸಾಧಿಸಿ ಆ ಕೆಲಸ ಮಾಡಿದೆವು. ಮೃತ ದೇಹ ಒಂದು ಕಡೆ, ಶವಾಗಾರ ಇನ್ನೊಂದು ಕಡೆ ಇತ್ತು. ಶವವನ್ನು ಎಂಬಾಲ್ಮಿಂಗ್ ಮಾಡುವುದು ಮಹತ್ವದ್ದಾಗಿತ್ತು. ಜೈಶಂಕರ್ ಅವರು ಮೊದಲು ಆ ಭಾಗದಲ್ಲಿ ರಾಜತಾಂತ್ರಿಕರಾಗಿ ಕೆಲಸ ಮಾಡಿದ್ದರಿಂದ ಅಲ್ಲೆಲ್ಲ ಪರಿಚಯವಿತ್ತು. ಪ್ರಧಾನಿಗಳ ಸೂಚನೆ ಮೇರೆಗೆ ಅಲ್ಲಿಯ ಅಂತ್ಯಕ್ರಿಯೆ ನೆರವೇರಿಸುವ ಸಂಸ್ಥೆ ಹಿಡಿದು ಮೊದಲು ನವೀನ್ ದೇಹ ಸುರಕ್ಷಿತವಾಗಿ ಇಡುವ ಕಾರ್ಯ ಮಾಡಲಾಯಿತು.
ಫ್ರೀಜರ್‌ನಲ್ಲಿ ಇಟ್ಟು ದೇಹ ಎಲ್ಲೂ ಕೆಡದಂತೆ ಸಂರಕ್ಷಿಸುವ ಕಾರ್ಯ ಮಾಡಲಾಗಿತ್ತು. ನಾನೂ ಪ್ರಧಾನಿ, ವಿದೇಶಾಂಗ ಸಚಿವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೆ. ಘಟನೆ ನಡೆದ ಸ್ಥಳದಲ್ಲಿ ಬಾಂಬಿಂಗ್ ನಡೆಯುತ್ತಿರುವುದರಿಂದ ಸಮಸ್ಯೆಯಾಗಿತ್ತು. ಪೋಲೆಂಡ್ ಪಶ್ಚಿಮದ ಭಾಗದಲ್ಲಿ ಇನ್ನೂ ಬಾಂಬಿಂಗ್ ನಡೆಯುತ್ತಿದೆ. ಬರುವ ಮಾರ್ಗದಲ್ಲಿ ಬಾಂಬಿಂಗ್ ನಡೆಯುತ್ತಿದ್ದರೂ ಅಲ್ಲಿಂದ ಪ್ಯಾಕಿಂಗ್ ಮಾಡಿ ವಾಸ್ರೋವಾಕ್ಕೆ ನವೀನ್ ದೇಹ ತಂದು ಅಲ್ಲಿಂದ ಪ್ಯಾಕಿಂಗ್ ಮಾಡಿ ದುಬೈಗೆ ತರಲಾಯಿತು.
ಅಲ್ಲಿ ದಾಖಲೆ ಪರಿಶೀಲಿಸಿ ಮತ್ತೊಮ್ಮೆ ದೇಹ ಪ್ಯಾಕಿಂಗ್ ಮಾಡಿ ಇಲ್ಲಿಗೆ ತರಲಾಗಿದೆ. ಈ ಅಸಾಧ್ಯವಾದ ಕೆಲಸವನ್ನು ಪ್ರಧಾನಿಗಳು ಮಾಡಿ ತೋರಿಸಿದ್ದಾರೆ. ಯುದ್ಧ ಭೂಮಿಯಿಂದ ಸೈನಿಕರನ್ನು ತರುವುದೇ ಕಷ್ಟವಿರುವಾಗ ಪವಾಡದ ರೀತಿಯಲ್ಲಿ ನವೀನ್ ದೇಹ ತರಲಾಗಿದೆ. ಆ ಮೂಲಕ ನವೀನ್ ತಾಯಿಯ ಭಾವನೆಯನ್ನು ಪ್ರಧಾನಿಗಳು ಗೌರವಿಸಿದ್ದಾರೆ ಎಂದು ಸಿಎಂ ಹೇಳಿದರು.
