Asianet Suvarna News Asianet Suvarna News

ಸಾಲಮನ್ನಾ ಆದರೂ ಸಾಲ ವಸೂಲಿ!

ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರೂ ಕೂಡ ಹಲವೆಡೆ ರೈತರಿಗೆ ನೋಟಿಸ್ ನೀಡಿ ಬ್ಯಾಂಕ್ ಗಳು ರೈತರಿಂದ ಸಾಲ ವಸೂಲಿ ಮಾಡುತ್ತಿವೆ. ಇದೀಗ ಹಾವೇರಿಯಲ್ಲಿ ರೈತನ ಖಾತೆಯಿಂದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳಲಾಗಿದೆ. 

Bank Take Loan Amount From Farmer Account
Author
Bengaluru, First Published Nov 15, 2018, 7:15 AM IST

ಹಾವೇರಿ :  ರೈತರ ಬೆಳೆ ಸಾಲಮನ್ನಾ ನಿರ್ಧಾರ ಘೋಷಿಸಿರುವ ಸಮ್ಮಿಶ್ರ ಸರ್ಕಾರ ಅನ್ನದಾತನಿಂದ ಬಲವಂತವಾಗಿ ಸಾಲ ವಸೂಲಿಗಿಳಿಯದಂತೆ, ನೋಟಿಸ್‌ ನೀಡದಂತೆ ಎಚ್ಚರಿಕೆ ನೀಡಿದ್ದರೂ ಬ್ಯಾಂಕ್‌ ಅಧಿಕಾರಿಗಳು ಮಾತ್ರ ಇದನ್ನು ಕಿವಿಗೆ ಹಾಕೊಂಡಂತೆಯೇ ಇಲ್ಲ. ಕೊಪ್ಪಳದಲ್ಲಿ ಕೆನರಾ ಬ್ಯಾಂಕ್‌ ಆಯ್ತು, ಈಗ ಹಾವೇರಿ ಜಿಲ್ಲೆಯ ಕೂಸನೂರು ಗ್ರಾಮದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ರೈತನ ಗಮನಕ್ಕೇ ತಾರದೆ ಆತನ ಖಾತೆಯಿಂದ ಬೆಳೆ ಸಾಲವನ್ನು ಬಡ್ಡಿ ಸಮೇತ ಕಡಿತ ಮಾಡಿದೆ.

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮದ ರೈತ ಕುಮಾರಸ್ವಾಮಿ ಹಿರೇಮಠ ಎಂಬವರ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಕೆವಿಜಿ ಬ್ಯಾಂಕ್‌ ಬೆಳೆ ಸಾಲಕ್ಕಾಗಿ ಮುರಿದುಕೊಂಡಿದೆ. ಬೆಳೆ ಸಾಲ ಮಾಡಿದ ರೈತರಿಗೆ ನೋಟಿಸ್‌ ನೀಡಿದರೆ, ಬಲವಂತವಾಗಿ ಸಾಲ ವಸೂಲಿ ಮಾಡಿದರೆ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕುವುದಾಗಿ ಸ್ವತಃ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೇ ಎಚ್ಚರಿಸಿದ್ದರು. ಇದಾದ ಬೆನ್ನಲ್ಲೇ ಎಕ್ಸಿಸ್‌ ಸೇರಿದಂತೆ ಹಲವು ಬ್ಯಾಂಕ್‌ಗಳಿಂದ ಬೆಳೆ ಸಾಲ ಮನ್ನಾ ಮಾಡಿದ ರೈತರ ಮನೆ ಬಾಗಿಲಿಗೆ ನೋಟಿಸ್‌ ತಲುಪುತ್ತಲೇ ಇದೆ. ಈಗ ಕೆವಿಜಿ ಬ್ಯಾಂಕ್‌ ಕೂಡ ರೈತನಿಗೆ ನೋಟಿಸ್‌ ನೀಡಿದ್ದಲ್ಲದೆ, ಆತನ ಗಮನಕ್ಕೆ ತಾರದೇ ಆತನ ಬೇರೆ ಖಾತೆಯಲ್ಲಿದ್ದ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡಿದೆ.

ಆಗಿದ್ದೇನು?: ಕುಮಾರಸ್ವಾಮಿ ಹಿರೇಮಠ ಅವರು 2016ರಲ್ಲಿ ಕೆವಿಜಿ ಬ್ಯಾಂಕ್‌ನಲ್ಲಿ 70 ಸಾವಿರ ಬೆಳೆಸಾಲ ಪಡೆದಿದ್ದರು. ಆದರೆ, ತೀವ್ರ ಬರಗಾಲ ಎದುರಾದ ಹಿನ್ನೆಲೆಯಲ್ಲಿ ಸಾಲ ಮರು ಪಾವತಿ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಕೆಲ ತಿಂಗಳ ಹಿಂದೆ ರಾಜ್ಯ ಸರ್ಕಾರ ರೈತರ ಬೆಳೆಸಾಲ ಮನ್ನಾ ಘೋಷಣೆ ಮಾಡಿದ್ದರಿಂದ ರೈತ ಕುಮಾರಸ್ವಾಮಿ ಖುಷಿಪಟ್ಟಿದ್ದರು. ಸರ್ಕಾರ ತನ್ನ ಸಾಲ ಮನ್ನಾ ಮಾಡಲಿದೆ, ಕುಟುಂಬದ ಮೇಲಿನ ಹೊರೆ ಕಡಿಮೆ ಮಾಡಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು. 

ಆದರೆ, ಕೂಸನೂರು ಗ್ರಾಮದ ಕೆವಿಜಿ ಬ್ಯಾಂಕ್‌ ಅಧಿಕಾರಿಗಳು ಮಾತ್ರ ಅ.12ರಂದು ರೈತರಿಗೆ ಬಡ್ಡಿ ಸಮೇತ 78,100 ರು. ಮರು ಪಾವತಿಸುವಂತೆ ನೋಟಿಸ್‌ ನೀಡಿದ್ದರು. ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಬೆಳೆ ಸಾಲಕ್ಕೆ ವರ್ಗಾಯಿಸಲು ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವಂತೆಯೂ ನೋಟಿಸ್‌ನಲ್ಲಿ ತಿಳಿಸಿದ್ದರು. ಒಂದು ವೇಳೆ ಒಪ್ಪಿಗೆ ಪತ್ರಕ್ಕೆ ಸಹಿ ಹಾಕದಿದ್ದರೆ ಬ್ಯಾಂಕ್‌ ನೀಡುವ ಬಡ್ಡಿ ರಿಯಾಯಿತಿಯಿಂದ ವಂಚಿತವಾಗಬೇಕಾಗುತ್ತದೆ, ಅಸಲು, ಬಡ್ಡಿ ಹಾಗೂ ಇತರೆ ಖರ್ಚುಗಳಿಗೆ ನೀವೇ ಜವಾಬ್ದಾರಿಯಾಗುತ್ತೀರಿ ಎಂದು ಎಚ್ಚರಿಸಿದ್ದರು. ಜತೆಗೆ, ಮಗನ ಶೈಕ್ಷಣಿಕ ಸಾಲವನ್ನೂ ಚಾಲ್ತಿಗೊಳಿಸುವಂತೆ ಇದೇ ನೋಟಿಸ್‌ನಲ್ಲಿ ರೈತ ಕುಮಾರಸ್ವಾಮಿ ಅವರಿಗೆ ಬ್ಯಾಂಕ್‌ನವರು ತಿಳಿಸಿದ್ದರು.

ಇದನ್ನು ನೋಡಿದ ಕುಮಾರಸ್ವಾಮಿ ಅವರು ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ, ಚಲನ್‌ಗೆ ಸಹಿ ಹಾಕುವಂತೆ ಬ್ಯಾಂಕ್‌ ಸಿಬ್ಬಂದಿ ತಿಳಿಸಿದ್ದಾರೆ. ಸರ್ಕಾರ ಸಾಲಮನ್ನಾ ಮಾಡಿದ್ದರಿಂದ ಸಹಿ ಹಾಕುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿ ಬಂದಿದ್ದಾರೆ. ಆದರೆ, ಕೆಲ ದಿನಗಳ ಬಳಿಕ ಪರಿಶೀಲಿಸಿದರೆ ಕುಮಾರಸ್ವಾಮಿ ಅವರ ಉಳಿತಾಯ ಖಾತೆಯಿಂದ ಬ್ಯಾಂಕ್‌ನವರು 78,100 ರು. ಕಡಿತ ಮಾಡಿದ್ದು ಬೆಳಕಿಗೆ ಬಂದಿದೆ.

ಈ ಸಂಬಂಧ ಬುಧವಾರ ರೈತ ಮುಖಂಡರೊಂದಿಗೆ ಬ್ಯಾಂಕ್‌ಗೆ ತೆರಳಿದ ಕುಮಾರಸ್ವಾಮಿ ಮ್ಯಾನೇಜರ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಯಾಂಕ್‌ನ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ತಾವು ಹಾಗೆ ಮಾಡಿದ್ದಾಗಿ ಮ್ಯಾನೇಜರ್‌ ಒಪ್ಪಿಕೊಂಡಿದ್ದಾರೆ.

ಸರ್ಕಾರ ರೈತರ ಸಾಲಮನ್ನಾ ಘೋಷಿಸಿ, ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರೂ ಅನೇಕ ಬ್ಯಾಂಕುಗಳು ರೈತರಿಗೆ ಈ ರೀತಿ ಕಿರುಕುಳ ನೀಡುತ್ತಲೇ ಇದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಾಲಮನ್ನಾ ಘೋಷಿಸಿದ್ದರೂ ಇಲ್ಲಿಯ ಕೆವಿಜಿ ಬ್ಯಾಂಕ್‌ ನಾನು ಪಡೆದಿದ್ದ ಬೆಳೆಸಾಲ ಮರು ಪಾವತಿಸುವಂತೆ ನೋಟಿಸ್‌ ನೀಡಿತ್ತು. ಅಲ್ಲದೆ, ನನಗೆ ಅರಿವಿಲ್ಲದಂತೆ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಬೆಳೆಸಾಲಕ್ಕೆ ವರ್ಗಾಯಿಸಿಕೊಂಡಿದೆ. ಈ ರೀತಿ ಮಾಡಿ ನನಗೆ ಮಾನಸಿಕ ಕಿರುಕುಳ ನೀಡಿದ ಬ್ಯಾಂಕ್‌ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.

- ಕುಮಾರಸ್ವಾಮಿ ಹಿರೇಮಠ, ರೈತ

Follow Us:
Download App:
  • android
  • ios