ಒಳಮೀಸಲಾತಿ ವಿರೋಧಿಸಿ ಆತ್ಮಹತ್ಯೆಗೆ ಬಂಜಾರ ಸ್ವಾಮೀಜಿ ಯತ್ನ: ಕಾವಿ ವಸ್ತ್ರದಿಂದಲೇ ನೇಣು ಕುಣಿಕೆ
ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಒದಗಿಸಲಾಗಿರುವ ಒಳಮೀಸಲಾತಿಯನ್ನು ವಿರೋಧಿಸಿದ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗುಂಡೂರು ಗ್ರಾಮದಲ್ಲಿ ಬಂಜಾರ ಸಮುದಾಯದ ಸ್ವಾಮೀಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಾವೇರಿ (ಏ.04): ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಒದಗಿಸಲಾಗಿರುವ ಒಳಮೀಸಲಾತಿಯನ್ನು ವಿರೋಧಿಸಿದ ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ತಾಲೂಕು ಕಚೇರಿಯಲ್ಲಿ ಬಂಜಾರ ಸಮುದಾಯದ ಸ್ವಾಮೀಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಂಬೇಡ್ಕತ್ ಪ್ರತಿಮೆ ಬಳಿ ಬಂದು ತಮ್ಮ ಕಾವಿ ವಸ್ತ್ರದ ಶಾಲನಿಂದಲೇ ನೇಣು ಬಿಗಿದುಕೊಳ್ಳಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಹೆಚ್ಚಳ ಮಾಡಿದ ನಂತರ ಕೆಲವೊಂದು ದಲಿತ ವರ್ಗಗಳಿಗೆ ಒಳಮೀಸಲಾತಿಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಒಳಮೀಸಲಾತಿಯನ್ನು ವಿರೋಧಿಸಿದ ರಾಜ್ಯಾದ್ಯಂತ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇಂದು ಮಧ್ಯಾಹ್ನದ ವೇಳೆ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗುಂಡೂರು ಗ್ರಾಮದ ಬಂಜಾರ ಸಮುದಾಯದ ತಿಪ್ಪೇಸ್ವಾಮಿ ಸ್ವಾಮೀಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗುಂಡೂರು ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮೆಟ್ಟಿಲುಗಳನ್ನು ನಿರ್ಮಿಸಿ ಎತ್ತರದ ವೇದಿಕೆಯನ್ನು ನಿರ್ಮಿಸಲಾಗಿದೆ. ಈ ವೇದಿಕೆಯ ಮೇಲೆ ಹತ್ತಿದ ಬಂಜಾರ ಸಮುದಾಯದ ಸ್ವಾಮೀಜಿ ಅಂಬೇಡ್ಕರ್ ಪ್ರತಿಮೆ ಬಳಿಯೇ ತಮ್ಮ ಕಾವಿ ವಸ್ತ್ರ ಶಲ್ಯದಿಂದ ನೇಣು ಕುಣಿಕೆ ತಯಾರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕುರಾನ್ ಪಠಣವಿಲ್ಲದೇ ಬೇಲೂರು ಚನ್ನಕೇಶವ ರಥೋತ್ಸವ ಸಂಪನ್ನ: ಮುಸ್ಲಿಂ ಖಾಜಿಯಿಂದ ಪತ್ರ
ಒಳಮೀಸಲಾತಿ ವಿರೋಧಿಸಿ ಪ್ರತಿಭಟನೆ: ರಾಜ್ಯ ಸರ್ಕಾರ ಘೋಷಿಸಿರುವ ಒಳಮೀಸಲಾತಿ ವಿರೋಧಿಸಿ ಆತ್ಮಹತ್ಯೆಗೆ ಯತ್ನ ಮಾಡಿದ ಬಂಜಾರ ಸ್ವಾಮಿಜಿಯನ್ನು ಗುಂಡೂರು ಗ್ರಾಮದ ತಿಪ್ಪೆಸ್ವಾಮಿ ಶ್ರೀಗಳು ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಗುಂಡೂರು ಗ್ರಾಮದ ಬಂಜಾರ ಮಠದ ಸ್ವಾಮೀಜಿ ಆಗಿದ್ದಾರೆ. ಇಂದು ಒಳಮೀಸಲಾತಿ ವಿರೋಧಿಸಿ ಶಿಗ್ಗಾಂವ ತಹಶೀಲ್ಧಾರ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದ ವೇಳೆ ನೇಣು ಹಾಕಿಕೊಂಡು ಆ್ಮಹತ್ಯೆಗೆ ಯತ್ನ ಮಾಡಿದ್ದಾರೆ.
ಸ್ಥಳೀಯರಿಂದ ಸ್ವಾಮೀಜಿ ರಕ್ಷಣೆ: ಇನ್ನು ಸ್ವಾಮೀಜಿ ಅವರು ಅಂಬೇಡ್ಕರ್ ಪ್ರತಿಮೆ ಬಳಿ ಹೋಗುವುದನ್ನು ನೋಡಿ ನಮಸ್ಕರಿಸಲು ಹೋಗುತ್ತಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಆದರೆ, ಅಲ್ಲಿ ಹೋದವರೇ ತಮ್ಮ ಕಾವಿ ವಸ್ತ್ರವನ್ನು ಮೆಟ್ಟಿಲುಗಳು ಇರುವ ಕಬ್ಬಿಣದ ಸರಳಿಗೆ ಕಾವಿ ಶಲ್ಯದಿಂದ ಕುತ್ತಿಗೆಗೆ ನೇಣು ಹಾಕಿಕೊಳ್ಳಲು ಕುಣಿಕೆ ಮಾಡಿಕೊಂಡಿದ್ದಾರೆ. ನಂತರ ಮೆಟ್ಟಿಲಿನಿಂದ ಕೆಳಗೆ ಹಾರಿದ್ದಾರೆ. ಅವರು ಹಾರುವುದನ್ನು ನೋಡಿದ ಪ್ರತಿಭಟನಾ ನಿರತರು ಕೂಡಲೇ ಸ್ವಾಮೀಜಿಯನ್ನು ಹಿಡಿದುಕೊಂಡು ರಕ್ಷಣೆ ಮಾಡಿದ್ದಾರೆ. ನಂತರ ಅವರ ಕುತ್ತಿಗೆಗೆ ಬಿಗಿಯಾಗಿದ್ದ ನೇಣು ಕುಣಿಕೆಯನ್ನು ಬಿಚ್ಚಿ ರಕ್ಷಣೆ ಮಾಡಿ ಕೆಳಗಿಳಿಸಿದ್ದಾರೆ.
ಸ್ವಾಮೀಜಿ ಆಸ್ಪತ್ರೆಗೆ ದಾಖಲು: ಇನ್ನು ಘಟನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ತಿಪ್ಪೇಸ್ವಾಮಿ ಸ್ವಾಮೀಜಿಯನ್ನು ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ಶಿಗ್ಗಾಂವ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸ್ವಾಮಿಜಿಗೆ ಚಿಕಿತ್ಸೆ ನೀಡಲಾಗಿತ್ತಿದೆ. ಇನ್ನು ಸ್ವಾಮೀಜಿಯನ್ನು ತಪಾಸಣೆ ಮಾಡಿದ ವೈದ್ಯರು ಗಂಭೀರ ಸಮಸ್ಯೆ ಉಂಟಾಗಿಲ್ಲ, ತಕ್ಷಣವೇ ಅವರನ್ನು ರಕ್ಷಣೆ ಮಾಡಿದ್ದರಿಂದ ಪ್ರಾಣಾಪಾಯ ಇಲ್ಲವೆಂದು ತಿಳಿಸಿದ್ದಾರೆ. ಇನ್ನು ಒಳಮೀಸಲಾತಿ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದವರನ್ನು ಪೊಲೀಸರು ಚದುರಿಸಿದ್ದಾರೆ.
ಬೆಳಗ್ಗೆ ಜೈಲು ಸಂಜೆಗೆ ಬೇಲು: ಶಿಕಾರಿಪುರ ಕಲ್ಲು ತೂರಾಟದ ಆರೋಪಿಗಳಿಗೆ ಜಾಮೀನು ಮಂಜೂರು
ಯಡಿಯೂರಪ್ಪ ಮನೆ ಮೇಲೆ ಕಲ್ಲು: ಒಳಮೀಸಲಾತಿ ವಿರೋಧಿಸಿ ಶಿಕಾರಿಪುರದಲ್ಲಿ ಮಾ.27ರಂದು ಬಂಜಾರ ಸಮುದಾಯದಿಂದ ನಡೆಯುತ್ತಿದ್ದ ಪ್ರತಿಭಟನೆ ತಾರಕಕ್ಕೇ ಏರಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಕಲ್ಲೆಸೆದಿದ್ದರು. ಜೊತೆಗೆ, ಅವರ ಮನೆಯ ಬಳಿಯಿದ್ದ ಬಿಜೆಪಿ ಗೃಹ ಕಚೇರಿಯ ಮೇಲಿದ್ದ ಬಿಜೆಪಿ ಬಾವುಟವನ್ನ ತೆರವುಗೊಳಿಸಿದ ಪ್ರತಿಭಟನಾಕಾರರು ಬಂಜಾರ, ಭೋವಿ ಹಾಗೂ ಕೊರಚ ಸಮುದಾಯದ ಬಾವುಟಗಳನ್ನು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಜೊತೆಗೆ ಪ್ರಕರಣದ ಪ್ರಮುಖ ಆರೋಪಿಗಳೆಂದು ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡಿದ್ದರು.