ರಾಜಸ್ಥಾನದ ಮರುಭೂಮಿಯಲ್ಲಿ ಮೈನಸ್ 2 ಡಿಗ್ರಿಯಲ್ಲಿ 161 ಕಿ. ಮೀ. ಓಡಿದ ಬೆಂಗಳೂರಿನ ವಿನೋದ್!
ಸಾಮಾನ್ಯವಾಗಿ ಯಾರಾದರೂ 10 ಕಿ.ಮೀ. ನಿರಂತರವಾಗಿ ಓಡಿದರೂ ನಾವು ಅಚ್ಚರಿಯಾಗುವುದಿದೆ. ಮ್ಯಾರಥಾನ್ ರೇಸ್‌ನಲ್ಲಿ 42.1 ಕಿ.ಮೀ. ಓಡಿದರಂತೂ ಹುಬ್ಬೇರಿಸಿ ಬಿಡುತ್ತೇವೆ.
ನಾಸಿರ್ ಸಜಿಪ
ಬೆಂಗಳೂರು (ಡಿ.30): ಸಾಮಾನ್ಯವಾಗಿ ಯಾರಾದರೂ 10 ಕಿ.ಮೀ. ನಿರಂತರವಾಗಿ ಓಡಿದರೂ ನಾವು ಅಚ್ಚರಿಯಾಗುವುದಿದೆ. ಮ್ಯಾರಥಾನ್ ರೇಸ್‌ನಲ್ಲಿ 42.1 ಕಿ.ಮೀ. ಓಡಿದರಂತೂ ಹುಬ್ಬೇರಿಸಿ ಬಿಡುತ್ತೇವೆ. ಆದರೆ ಬೆಂಗಳೂರಿನ 46 ವರ್ಷದ ವಿನೋದ್ ಶಿವರಾಮನ್ ಎಂಬವರು ಮರುಭೂಮಿಯಲ್ಲಿ, ಅದು ಕೂಡ ಮೈನಸ್ 2 ಡಿಗ್ರಿ ತಾಪಮಾನದಲ್ಲಿ, ಏಕಾಂಗಿಯಾಗಿ ಬರೋಬ್ಬರಿ 161 ಕಿ.ಮೀ. ಓಡಿದ್ದಾರೆ! 1971ರ ಭಾರತ-ಪಾಕಿಸ್ತಾನ ಯುದ್ಧದ ನೆನಪಿಗಾಗಿ 2018ರಿಂದಲೂ ರಾಜಸ್ಥಾನದ ಜೈಸಲ್ಮೇರ್‌ನಿಂದ ಲೊಂಗೆವಾಲಾವರೆಗೆ ‘ದಿ ಬಾರ್ಡರ್’ ಹೆಸರಿನಲ್ಲಿ ವಿಶೇಷ ರೇಸ್ ಆಯೋಜಿಸಲಾಗುತ್ತದೆ. ಈ ಬಾರಿ 100 ಮೈಲಿ(160.9 ಕಿ.ಮೀ.) ರೇಸ್‌ನಲ್ಲಿ ವಿನೋದ್ ಪಾಲ್ಗೊಂಡಿದ್ದು, 26 ಗಂಟೆ 32 ನಿಮಿಷಗಳಲ್ಲಿ ರೇಸ್ ಪೂರ್ಣಗೊಳಿಸಿ ವಿಶೇಷ ಸಾಧನೆ ಮಾಡಿದ್ದಾರೆ.
ಕೊರೆಯುವ ಚಳಿಯಲ್ಲೂ ಓಟ: ಡಿ.14ರಂದು ಮಧ್ಯಾಹ್ನ ಜೈಸಲ್ಮೇರ್‌ನಲ್ಲಿ ರೇಸ್ ಆರಂಭಗೊಂಡಿದ್ದು, ಡಿ.15ರಂದು ಮಧ್ಯಾಹ್ನ ರೇಸ್ ಪೂರ್ಣಗೊಂಡಿದೆ. ‘ರೇಸ್ ಆರಂಭಗೊಳ್ಳುವಾಗ 22 ಡಿಗ್ರಿ ತಾಪಮಾನ ಇರುತ್ತದೆ. ಆದರೆ ಮಧ್ಯ ರಾತ್ರಿ ವೇಳೆ ತಾಪಮಾನ ಮೈನಸ್ 2 ಡಿಗ್ರಿವರೆಗೂ ಕುಸಿಯುತ್ತದೆ. ರಕ್ತ ಹೆಪ್ಪುಗಟ್ಟುವ ಚಳಿ ನಡುವೆಯೂ ಓಡಿ ರೇಸ್ ಪೂರ್ತಿ ಮಾಡಿದ್ದೇನೆ’ ಎಂದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ವಿನೋದ್ ‘ಕನ್ನಡಪ್ರಭ’ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಚಿನ್ ಪಂಚಾಳ ಕುಟುಂಬಕ್ಕೆ ₹10 ಲಕ್ಷ ಪರಿಹಾರ: ಸಚಿವ ಈಶ್ವರ್ ಖಂಡ್ರೆ
ಏಕಾಂಗಿ ಓಟ: ಮ್ಯಾರಥಾನ್‌ಗಳಲ್ಲಿ ಓಡುವವರಿಗೆ ಸಹಾಯ ಮಾಡಲು ಅಲ್ಲಲ್ಲಿ ನೀರು, ಜ್ಯೂಸ್‌ಗಳನ್ನು ನೀಡಲಾಗುತ್ತದೆ. ಆದರೆ ‘ದಿ ಬಾರ್ಡರ್’ ರೇಸ್‌ನಲ್ಲಿ ಈ ವ್ಯವಸ್ಥೆ ಇಲ್ಲ. ಸ್ವತಃ ವಿನೋದ್ ಹೇಳುವಂತೆ, ‘ರೇಸ್ ವೇಳೆ ನಾವು ಏಕಾಂಗಿ. ಒಬ್ಬಂಟಿಯಾಗಿಯೇ 161 ಕಿ.ಮೀ. ಓಡಬೇಕು. ಯಾರೂ ಸಹಾಯಕ್ಕೆ ಇರಲ್ಲ. ನಮಗೆ ಬೇಕಾದ ನೀರನ್ನು ನಾವೇ ಬ್ಯಾಗ್‌ನಲ್ಲಿ ಕೊಂಡೊಯ್ಯಬೇಕು. ಅಲ್ಲದಿದ್ದರೆ ಪ್ರತಿ 50 ಕಿ.ಮೀ.ಗೆ ಆಯೋಜಕರು ನೀರು, ತಿಂಡಿ ವ್ಯವಸ್ಥೆ ಮಾಡುತ್ತಾರೆ’ ಎನ್ನುತ್ತಾರೆ.
161 ಕಿ.ಮೀ. ರೇಸ್ ವೇಳೆ ಪ್ರತಿ 50 ಕಿ.ಮೀ.ಗೂ ಸಮಯ ನಿಗದಿಪಡಿಸಲಾಗುತ್ತದೆ. ಓಟಗಾರರು 8 ಗಂಟೆಯಲ್ಲಿ ಮೊದಲ 50 ಕಿ.ಮೀ. ಕ್ರಮಿಸಬೇಕು. ಮುಂದಿನ 8 ಗಂಟೆಗಳಲ್ಲಿ 100 ಕಿ.ಮೀ. ದಾಟಿರಬೇಕು. ಅಲ್ಲದಿದ್ದರೆ ರೇಸ್‌ನಿಂದಲೇ ಅವರನ್ನು ಅನರ್ಹಗೊಳಿಸಲಾಗುತ್ತದೆ.
800+ ಮಂದಿ ಭಾಗಿ: ದಿ ಬಾರ್ಡರ್ ರೇಸ್‌ನಲ್ಲಿ 3 ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. 100 ಮೈಲಿ, 100 ಕಿ.ಮೀ. ಹಾಗೂ 50 ಕಿ.ಮೀ ರೇಸ್‌ಗಳಿವೆ. 7ನೇ ಆವೃತ್ತಿಯಲ್ಲಿ ಈ ಬಾರಿ 800+ ಸ್ಪರ್ಧಿಗಳು ಪಾಲ್ಗೊಂಡಿದ್ದರು. 100 ಮೈಲಿ ರೇಸ್‌ನಲ್ಲಿ 211 ಮಂದಿ ಭಾಗವಹಿಸಿದ್ದು, 170 ಮಂದಿ ರೇಸ್ ಪೂರ್ಣಗೊಳಿಸಿದ್ದಾರೆ. ಈ ಪೈಕಿ ವಿನೋದ್ 110ನೇ ಸ್ಥಾನ ಪಡೆದಿದ್ದಾರೆ.
ಬೆಂಗ್ಳೂರಲ್ಲಿ ತಿಂಗಳಿಗೆ 400 ಕಿ.ಮೀ. ಓಡುವ ವಿನೋದ್!: ವಿನೋದ್ ಬೆಂಗಳೂರಿನಲ್ಲೇ ನೆಲೆಸಿದ್ದು, ಕಳೆದ 9 ವರ್ಷಗಳಿಂದಲೂ ವಿವಿಧ ರೇಸ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಖಾರ್ದುಂಗ್ಲಾ ಚಾಲೆಂಜ್, ಬಾಹುಬಲಿ ರೇಸ್ ಸೇರಿದಂತೆ ವಿವಿಧ ರೇಸ್‌ಗಳಲ್ಲಿ ವಿನೋದ್ ಓಡಿದ್ದಾರೆ. ದಿ ಬಾರ್ಡರ್ ರೇಸ್‌ಗಾಗಿ ವಿನೋದ್ ಕಳೆದ 4 ತಿಂಗಳುಗಳಿಂದ ಅಭ್ಯಾಸ ನಡೆಸುತ್ತಿದ್ದು, ಪ್ರತಿ ತಿಂಗಳು ಬೆಂಗಳೂರಿನಲ್ಲೇ ಸುಮಾರು 400 ಕಿ.ಮೀ ಓಡುತ್ತಿದ್ದಾರೆ.
ಬೆಂಗಳೂರಿನಿಂದ ಶ್ರವಣ ಬೆಳಗೊಳಕ್ಕೆ 144 ಕಿ.ಮೀ. ಓಟ!: ದಿ ಬಾರ್ಡರ್ ರೇಸ್‌ಗೂ ಮುನ್ನ ವಿನೋದ್ ಕಳೆದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ಬರೋಬ್ಬರಿ 144 ಕಿ.ಮೀ. ಓಡಿದ್ದರು. 22 ಗಂಟೆ 5 ನಿಮಿಷಗಳಲ್ಲಿ ಅವರು ರೇಸ್ ಪೂರ್ಣಗೊಳಿಸಿದ್ದರು.
ಯಾವುದಿದು ಸ್ಪರ್ಧೆ?: 1971ರ ಭಾರತ- ಪಾಕಿಸ್ತಾನ ಯುದ್ಧದ ಸ್ಮರಣಾರ್ಥ 2018ರಿಂದ ಆಯೋಜಿಸಲಾಗುತ್ತಿರುವ ಸ್ಪರ್ಧೆ- ರಾಜಸ್ಥಾನದ ಜೈಸಲ್ಮೇರ್‌ನಿಂದ ಲೊಂಗೆವಾಲಾವರೆಗೆ 100 ಮೈಲಿ ನಡೆಯುತ್ತದೆ ‘ಬಾರ್ಡರ್ ರೇಸ್’- ಮಧ್ಯಾಹ್ನ ಆರಂಭವಾಗಿ ಮರುದಿನ ಮಧ್ಯಾಹ್ನ ಮುಕ್ತಾಯವಾಗುವ ಓಟದಲ್ಲಿ ನೂರಾರು ಮಂದಿ ಭಾಗಿ- ಮಧ್ಯಾಹ್ನ ಓಟ ಶುರುವಾದಾಗ 22 ಡಿಗ್ರಿ ಇರುವ ತಾಪ ರಾತ್ರಿ ವೇಳೆಗೆ ಮೈನಸ್ 2 ಡಿಗ್ರಿಗೆ ಕುಸಿತ- ಏಕಾಂಗಿಯಾಗಿ ಓಡಬೇಕು. ಯಾರೂ ಸಹಾಯ ಮಾಡುವಂತಿಲ್ಲ. ನೀರನ್ನೂ ಸ್ವತಃ ಒಯ್ಯಬೇಕು- ಪ್ರತಿ 50 ಕಿ.ಮೀ.ಗೂ ಸಮಯ ನಿಗದಿ. ಅಲ್ಲೇ ನೀರು, ತಿಂಡಿಗೆ ವ್ಯವಸ್ಥೆ. ರಾತ್ರಿ ವೇಳೆ ಟಾರ್ಚ್ ಹಿಡಿದು ಓಡಬೇಕು.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬೇಕು 20 ತಾಸು: ಕಾರಣವೇನು?
ಬಾರ್ಡರ್ ರೇಸ್ ಅತ್ಯಂತ ಕಠಿಣ ಸ್ಪರ್ಧೆ. ಕೆಲವೊಮ್ಮೆ ಮರುಭೂಮಿಯಲ್ಲಿ ಇತರ ಸ್ಪರ್ಧಿಗಳೂ ಹತ್ತಿರದಲ್ಲಿ ಇರುವುದಿಲ್ಲ. ರಾತ್ರಿ ವೇಳೆ ನಮ್ಮದೇ ಟಾರ್ಚ್ ನೆರವಿನಿಂದ ಓಡಬೇಕಾಗುತ್ತದೆ. ಬೇರೆ ಯಾರಿಂದಲೂ ಸಹಾಯ ಪಡೆಯುವಂತಿಲ್ಲ. ಸಹಾಯ ಪಡೆದರೆ ಅನರ್ಹಗೊಳಿಸಲಾಗುತ್ತದೆ.
- ವಿನೋದ್ ಶಿವರಾಮನ್