ಕೆಂಪೇಗೌಡರ ಕಲ್ಪನೆ ರೀತಿ ಬೆಂಗಳೂರು ಪ್ರಗತಿ: ಮೋದಿ  108 ಅಡಿ ಎತ್ತರದ ಬೃಹತ್‌ ಪ್ರತಿಮೆ ಅನಾವರಣ ಜಲಾಭಿಷೇಕ ಮಾಡಿದ ಪ್ರಧಾನಿ

ಬೆಂಗಳೂರು (ನ.12) : ನಾಡಪ್ರಭು ಕೆಂಪೇಗೌಡ ಅವರ ಅದ್ಭುತ ಮತ್ತು ಅದ್ವಿತೀಯ ಕಲ್ಪನೆಯಂತೆಯೇ ಬೆಂಗಳೂರು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶುಕ್ರವಾರ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಬಳಿಕ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ವಾಣಿಜ್ಯ, ಸಂಸ್ಕೃತಿ ಮತ್ತು ಸವಲತ್ತುಗಳನ್ನು, ಕೆಂಪೇಗೌಡರ ದೂರದೃಷ್ಟಿಯ ಲಾಭವನ್ನು ಬೆಂಗಳೂರು ಪಡೆದುಕೊಂಡಿದೆ. ಪ್ರಸ್ತುತ ಸನ್ನಿವೇಶದಲ್ಲಿಯೂ ಅದರ ಅನುಕೂಲ ಪಡೆದುಕೊಳ್ಳಲಾಗುತ್ತಿದೆ. ಉದ್ಯಮಗಳು ರೂಪಾಂತರಗೊಂಡಿದ್ದರೂ ಪೇಟೆಗಳು ಬೆಂಗಳೂರಿನ ಜೀವನಾಡಿಯಾಗಿ ಉಳಿದಿವೆ. ಬೆಂಗಳೂರಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಕೆಂಪೇಗೌಡರ ಕೊಡುಗೆಗಳು ಶ್ಲಾಘನೀಯ ಎಂದರು.

ಪ್ರಧಾನಿ ಮೋದಿಯಿಂದ ಕೆಂಪೇಗೌಡರ ಪ್ರತಿಮೆ ಅನಾವರಣ, ಕಾಂಗ್ರೆಸ್ ಜೆಡಿಎಸ್ ಕೆಂಡಾಮಂಡಲ!

ಕೆಂಪೇಗೌಡರು ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯ ಮತ್ತು ಬಸವನಗುಡಿ ಪ್ರದೇಶದಲ್ಲಿ ದೇವಾಲಯಗಳನ್ನು ನಿರ್ಮಿಸಿ ಬೆಂಗಳೂರಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಶಾಶ್ವತವಾಗಿ ಜೀವಂತವಾಗಿಟ್ಟಿದ್ದಾರೆ. ಬೆಂಗಳೂರು ಒಂದು ಅಂತಾರಾಷ್ಟ್ರೀಯ ನಗರವಾಗಿದ್ದು, ನಮ್ಮ ಪರಂಪರೆಯನ್ನು ಸಂರಕ್ಷಿಸುವ ಜತೆಗೆ ಆಧುನಿಕ ಮೂಲಸೌಕರ್ಯಗಳಿಂದ ಅದನ್ನು ಶ್ರೀಮಂತಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪಾದಕ್ಕೆ ಜಲಾಭಿಷೇಕ ಮಾಡಿದ ಮೋದಿ:

ಪ್ರಧಾನಿ ಮೋದಿ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಟರ್ಮಿನಲ್‌ -2 ಉದ್ಘಾಟನೆ ಮಾಡಿದ ಬಳಿಕ ಸಮೀಪದಲ್ಲಿಯೇ ಇದ್ದ ಪ್ರತಿಮೆಯನ್ನು ಅನಾವರಣ ಮಾಡಿದರು. ಬಳಿಕ ಬರಿಗಾಲಲ್ಲಿ ಕೆಂಪೇಗೌಡರ ಪ್ರತಿಮೆ ಬಳಿ ಆಗಮಿಸಿ ಅವರ ಪಾದಕ್ಕೆ ಜಲಾಭಿಷೇಕ ಮಾಡಿದರು. ಅಲ್ಲದೆ, ಪುಷ್ಪ ನಮನ ಸಲ್ಲಿಸಿದರು.

ಕೆಂಪೇಗೌಡ ಪ್ರತಿಮೆಯ ಸುತ್ತಲೂ ಹೂವಿನಿಂದ ಅಲಂಕಾರ ಮಾಡಲಾಗಿದ್ದು, ಆಕರ್ಷಕವಾಗಿತ್ತು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರ ನೇತೃತ್ವದಲ್ಲಿ ತಯಾರಿಸಲಾದ ಕೆಂಪೇಗೌಡ ಪ್ರತಿಮೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲಹೊತ್ತು ಪ್ರತಿಮೆಯನ್ನು ವೀಕ್ಷಿಸಿ ಅದರ ಮಾಹಿತಿಯನ್ನು ಪಡೆದುಕೊಂಡರು.

108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ‘ಪ್ರಗತಿ ಪ್ರತಿಮೆ’ಯನ್ನು 84 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. 98 ಟನ್‌ ಕಂಚು, 120 ಟನ್‌ ಉಕ್ಕು ಬಳಸಿ ಪ್ರತಿಮೆ ನಿರ್ಮಿಸಲಾಗಿದೆ. ಕೆಂಪೇಗೌಡ ಆವರ ಕೈಯಲ್ಲಿರುವ ಖಡ್ಗದ ತೂಕವೇ ಬರೋಬ್ಬರಿ ನಾಲ್ಕು ಸಾವಿರ ಕೆ.ಜಿ. ಇದೆ. 24 ಅಡಿ ಎತ್ತರ, 7 ಅಡಿ ಸುತ್ತಳತೆಯ ನಾಲ್ಕು ಗೋಪುರಗಳಿವೆ. ಗುಜರಾತಿನ ‘ಏಕತಾ ಪ್ರತಿಮೆ’, ಅಮೆರಿಕದ ‘ಸ್ಟ್ಯಾಚು ಆಫ್‌ ಲಿಬರ್ಟಿ’ ಸೇರಿದಂತೆ ಜಗತ್ತಿನ ಗಮನಸೆಳೆದಿರುವ ಪ್ರತಿಮೆಗಳ ಸಾಲಿಗೆ ‘ಪ್ರಗತಿಯ ಪ್ರತಿಮೆ’ ಕೂಡ ಸೇರಿದೆ.

ಬಿಜೆಪಿ ಸರ್ಕಾರ ಕೆಂಪೇಗೌಡ ಅನುಯಾಯಿಯೇ? ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ

ಪ್ರತಿಮೆ ಅನಾವರಣ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ಆದಿಚುಂಚನಗಿರಿ ಮಠಾಧೀಶ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣ, ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಆರ್‌.ಅಶೋಕ್‌, ಡಾ.ಕೆ.ಸುಧಾಕರ್‌, ಇಸ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.