ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಮತ್ತು ಶಾಸಕ ನಾಗೇಂದ್ರ ಬೆಂಬಲಿಗ ಅಸೀಫ್ ನಡುವೆ 'ರೈಸ್ ಆಫ್ ಹ್ಯುಮಾನಿಟಿ' ಟ್ರಸ್ಟ್ ಅಧ್ಯಕ್ಷ ಸ್ಥಾನಕ್ಕಾಗಿ ಸಂಘರ್ಷ ಭುಗಿಲೆದ್ದಿದೆ. ಸೋಷಿಯಲ್ ಮೀಡಿಯಾ ವಾರ್‌ನಿಂದ ಆರಂಭವಾದ ಜಗಳ, ಕಚೇರಿ ಮೇಲಿನ ದಾಳಿಗೆ ತಿರುಗಿದೆ.

ಬಳ್ಳಾರಿ (ಫೆ.3): ಬಳ್ಳಾರಿಯ ರಾಜಕೀಯದಲ್ಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ನಡುವಿನ ಗಲಾಟೆ ತಣ್ಣಗಾಯಿತು ಎನ್ನುವಷ್ಟರಲ್ಲೇ ಹೊಸ ಸಂಘರ್ಷ ಶುರುವಾಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಆಪ್ತ ಅಲಿಖಾನ್ ಹಾಗೂ ಶಾಸಕ ನಾಗೇಂದ್ರ ಅವರ ಬೆಂಬಲಿಗ, ಕಾರ್ಪೊರೇಟರ್ ಅಸೀಫ್ ನಡುವಿನ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ನಡೆಯುತ್ತಿದ್ದ ಅಸಮಾಧಾನ ಸ್ಫೋಟಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟ್ರಸ್ಟ್ ಅಧ್ಯಕ್ಷ ಪಟ್ಟದ ಸುತ್ತ ವಿವಾದ

'ರೈಸ್ ಆಫ್ ಹ್ಯುಮಾನಿಟಿ' (Rise of Humanity) ಎನ್ನುವ ಟ್ರಸ್ಟ್‌ಗೆ ಸಂಸ್ಥೆಯವರು ಅಸೀಫ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಈ ಜಗಳಕ್ಕೆ ಮೂಲ ಕಾರಣ ಎನ್ನಲಾಗಿದೆ. ಅಸೀಫ್ ಅಧ್ಯಕ್ಷರಾದದ್ದನ್ನು ಸಹಿಸದ ಅಲಿಖಾನ್, ವಿವಿಧ ಸೋಷಿಯಲ್ ಮೀಡಿಯಾ ಗ್ರೂಪ್‌ಗಳಲ್ಲಿ ಅವರ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಈಗಾಗಲೇ ಅಸೀಫ್ ಅವರು ಕೌಲ್‌ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟ್ರಸ್ಟ್ ಕಚೇರಿ ಮೇಲೆ ಅಲಿಖಾನ್ ಬೆಂಬಲಿಗರ ದಾಳಿ

ಕೇವಲ ಮಾತುಗಳಿಗೆ ಸೀಮಿತವಾಗದ ಈ ಜಗಳ ದೈಹಿಕ ಸಂಘರ್ಷಕ್ಕೆ ತಿರುಗಿದೆ. ಮೊನ್ನೆಯಷ್ಟೇ ಅಲಿಖಾನ್ ಬೆಂಬಲಿಗರು ಟ್ರಸ್ಟ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ದಾಂದಲೆಯ ದೃಶ್ಯಗಳು ಕಚೇರಿಯ ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ದಾಂಧಲೆ ಬಳಿಕ ಅಲಿಖಾನ್ ಬೆಂಬಲಿಗರು ಕೂಡ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ.

ಹಣಕಾಸು ವ್ಯವಹಾರದ ಗುಮಾನಿ

ಮೇಲ್ನೋಟಕ್ಕೆ ಟ್ರಸ್ಟ್ ಅಧ್ಯಕ್ಷ ಪಟ್ಟದ ಜಗಳ ಎಂದು ಕಾಣುತ್ತಿದ್ದರೂ, ಇದರ ಹಿಂದೆ ದೊಡ್ಡ ಮಟ್ಟದ ಹಣಕಾಸಿನ ವ್ಯವಹಾರವಿದೆ ಎನ್ನಲಾಗುತ್ತಿದೆ. ಕಾರ್ಪೊರೇಟರ್ ಅಸೀಫ್ ಅವರು ಅಲಿಖಾನ್ ಅವರಿಗೆ ಹಣ ನೀಡಬೇಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಹಣಕಾಸಿನ ವಿಚಾರವನ್ನು ಅಸೀಫ್ ನಿರಾಕರಿಸುತ್ತಿದ್ದಾರೆ. ಈ ಜಗಳ ಬಳ್ಳಾರಿಯ ಉಭಯ ನಾಯಕರಿಗೂ ಈಗ ಇರಿಸುಮುರಿಸು ತಂದಿದೆ.