ಐಟಿ ಉದ್ಯೋಗಿಗಳ ಬಹುನಿರೀಕ್ಷಿತ ಬೈಯ್ಯಪ್ಪನಹಳ್ಳಿ- ಕೆ.ಆರ್‌.ಪುರ ಮೆಟ್ರೋ ಮಾರ್ಗದ ತಪಾಸಣೆಯನ್ನು ಮೆಟ್ರೋ ರೈಲ್ವೇ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ಸೆ.13 ಹಾಗೂ 14ರಂದು ನಡೆಸಲಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲ್ವೇ ನಿಗಮವು ತಿಳಿಸಿದೆ.

ಬೆಂಗಳೂರು (ಸೆ.13) :  ಐಟಿ ಉದ್ಯೋಗಿಗಳ ಬಹುನಿರೀಕ್ಷಿತ ಬೈಯ್ಯಪ್ಪನಹಳ್ಳಿ- ಕೆ.ಆರ್‌.ಪುರ ಮೆಟ್ರೋ ಮಾರ್ಗದ ತಪಾಸಣೆಯನ್ನು ಮೆಟ್ರೋ ರೈಲ್ವೇ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ಸೆ.13 ಹಾಗೂ 14ರಂದು ನಡೆಸಲಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲ್ವೇ ನಿಗಮವು ತಿಳಿಸಿದೆ.

ನೇರಳೆ ಮಾರ್ಗದ ಕೆ.ಆರ್‌. ಪುರ ಹಾಗೂ ವೈಟ್‌ಫೀಲ್ಡ್‌ ನಡುವಣ 13.71 ಕಿ.ಮೀ. ಮೆಟ್ರೋ ಉದ್ಘಾಟನೆಯಾಗಿ ಆರು ತಿಂಗಳ ಬಳಿಕ ಬೈಯಪ್ಪನಹಳ್ಳಿ-ಕೆ.ಆರ್.ಪುರ ನಡುವಿನ 2 ಕಿ.ಮೀ ಕಾಮಗಾರಿ ಮುಗಿದಿದೆ. ಜೊತೆಗೆ ಕೆಂಗೇರಿ-ಚಲ್ಲಘಟ್ಟದ ನಡುವೆ 1.9 ಕಿ.ಮೀ. ಕಾಮಗಾರಿ ಮುಗಿದಿರುವ ಕಾರಣ ಏಕಕಾಲಕ್ಕೆ ಎರಡೂ ವಿಸ್ತರಿತ ಮಾರ್ಗವನ್ನು ಜನಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ಹೈ ಸೆಕ್ಯೂರಿಟಿ ನಂಬರ್‌ಪ್ಲೇಟ್‌: ಸೆ.19ಕ್ಕೆ ಹೈಕೋರ್ಟ್‌ ವಿಚಾರಣೆ

ಇದಕ್ಕಾಗಿ ಬೈಯ್ಯಪ್ಪನಹಳ್ಳಿ- ಕೆ.ಆರ್‌.ಪುರ ಮೆಟ್ರೋ ಮಾರ್ಗವು ಪ್ರಯಾಣಿಕರ ಸಂಚಾರಕ್ಕಾಗಿ ಸುರಕ್ಷಿತವಾಗಿದೆಯೆ ಎಂಬುದರ ಕುರಿತು ಸುರಕ್ಷತಾ ಆಯುಕ್ತರ ತಂಡ ಎರಡು ದಿನಗಳ ಕಾಲ ತಪಾಸಣೆಯನ್ನು ಕೈಗೊಂಡಿದೆ. ಸುಮಾರು ಹತ್ತು ಅಧಿಕಾರಿಗಳ ಸಿಎಂಆರ್‌ಎಸ್‌ ತಂಡ ಎರಡು-ಮೂರು ಗುಂಪಾಗಿ ಈ ಮಾರ್ಗದಲ್ಲಿ ವಿವಿಧ ತಪಾಸಣೆ ನಡೆಸಲಿದೆ.

ಮುಖ್ಯವಾಗಿ ರೈಲಿನ ಸಾಮಾನ್ಯ ವೇಗ, ತಿರುವು, ವಿದ್ಯುತ್‌ ಪ್ರವಹಿಸುವಿಕೆ, ನಿಲ್ದಾಣಗಳಲ್ಲಿ ಮೂಲಸೌಲಭ್ಯ ಮತ್ತು ಪ್ರಯಾಣಿಕರ ಸುರಕ್ಷತೆಗೆ ಕೈಗೊಂಡ ಕ್ರಮಗಳನ್ನು ಸಿಎಂಆರ್‌ಎಸ್‌ ಪರಿಶೀಲಿಸಲಿದೆ. ಜೊತೆಗೆ ಸಂಪೂರ್ಣ 43ಕಿಮೀ ನೇರಳೆ ಮಾರ್ಗ ತೆರೆದುಕೊಳ್ಳಲಿರುವ ಕಾರಣದಿಂದ ರೈಲುಗಳ ಸಮಯ, ಸಿಗ್ನಲಿಂಗ್‌ ವ್ಯವಸ್ಥೆ ಸೇರಿದಂತೆ ಹಲವು ಮಾಹಿತಿಗಳನ್ನು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಂದ ಪಡೆದುಕೊಳ್ಳಲಿದ್ದಾರೆ. ಇದಾದ ಬಳಿಕ ಕೆಂಗೇರಿ-ಚಲ್ಲಘಟ್ಟದ ಮಾರ್ಗವನ್ನು ಪರಿಶೀಲಿಸಲಿದ್ದು, ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಈಗಾಗಲೇ ಸುರಕ್ಷತಾ ಅಯುಕ್ತರಿಗೆ ನೀಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಕೆ.ಆರ್.ಪುರ-ವೈಟ್‌ಫೀಲ್ಡ್ ಮೆಟ್ರೊ ವಾಣಿಜ್ಯ ಸಂಚಾರ ಮಾರ್ಚ್‌ನಲ್ಲೇ ಆರಂಭಗೊಂಡಿತ್ತು. ಆದರೆ, ಬೈಯಪ್ಪನಹಳ್ಳಿ-ಕೆ.ಆರ್.ಪುರದ ನಡುವೆ ಮೆಟ್ರೊ ಸಂಚರಿಸದ ಕಾರಣಕ್ಕೆ ನೇರಳೆ ಮಾರ್ಗದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ವೈಟ್‌ಫೀಲ್ಡ್‌ಗೆ ತೆರಳಬೇಕಾದವರು ಬೈಯಪ್ಪನಹಳ್ಳಿಯಲ್ಲೇ ಇಳಿದು ಅಲ್ಲಿಂದ ಫೀಡರ್‌ ಬಸ್‌ ಅವಲಂಬಿಸಿ ಕೆ.ಆರ್‌.ಪುರದವರೆಗೆ ತೆರಳುತ್ತಿದ್ದಾರೆ. ವಿಸ್ತರಿತ ಮಾರ್ಗದಲ್ಲಿ ಸಂಚಾರ ಆರಂಭವಾದರೆ ಚಲ್ಲಘಟ್ಟದಿಂದಲೇ ನೇರವಾಗಿ ಪ್ರಯಾಣಿಕರು ವೈಟ್‌ಫೀಲ್ಡ್‌ನತ್ತ ತೆರಳಬಹುದು. ಕೆಂಗೇರಿ- ಚಲ್ಲಘಟ್ಟ ನಡುವೆ ಮೆಟ್ರೊ ಆರಂಭದಿಂದ ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

ಬೆಂಗಳೂರು: ತಮಿಳುನಾಡು ನಾಲ್ಕುಬಸ್‌ಗಳ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು!

ಅವ್ಯವಸ್ಥೆಗೆ ಬೇಸತ್ತ ಜನ

ಇನ್ನು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿನ ಸ್ಕೈವಾಕ್‌ ಅವ್ಯವಸ್ಥೆಯಿಂದಾಗಿ ಜನತೆ ಬೇಸತ್ತಿದ್ದು, ಮೆಟ್ರೋ ನಿಗಮದ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಿಲ್ದಾಣಕ್ಕೆ ಮೇಲೆ ಹೋಗುವ ಸ್ಕೈವಾಕ್‌ ಕೇವಲ ನಾಲ್ಕು ಅಡಿ ಅಗಲವಾಗಿದ್ದು, ಸಂಕೀರ್ಣವಾಗಿದ್ದು, ಪ್ರತಿದಿನ ಇಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಉದ್ಯೋಗಿಗಳು ಕಚೇರಿಗೆ ಹೋಗಿ ಬರುವಾಗ ತೊಂದರೆ ಅನುಭವಿಸುವಂತಾಗಿದೆ. ಜನರ ಅನುಕೂಲಕ್ಕಾಗಿ ಇಲ್ಲಿ ಪ್ರತ್ಯೇಕ ಎಸ್ಕಲೇಟರ್‌ ಅಳವಡಿಸುವಂತೆ ಬಿಎಂಆರ್‌ಸಿಎಲ್‌ ಎಂಪ್ಲಾಯಿಸ್‌ ಯೂನಿಯನ್‌ನ ಅಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಒತ್ತಾಯಿಸಿದ್ದಾರೆ.

ಇಂದಿನಿಂದ ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ ಮಾರ್ಗದ ತಪಾಸಣೆಯನ್ನು ಸಿಎಂಆರ್‌ಎಸ್‌ ತಂಡ ನಡೆಸಲಿದೆ. ಮುಂದೆ ಕೆಂಗೇರಿ-ಚಲ್ಲಘಟ್ಟದ ಪರಿಶೀಲನೆ ನಡೆಸಿ ಚಾಲನೆಗೆ ಪರವಾನಗಿ ನೀಡಿದ ಬಳಿಕ ಜನಸಂಚಾರಕ್ಕೆ ಪೂರ್ಣ ನೆರಳೆ ಮಾರ್ಗ ಮುಕ್ತಗೊಳಿಸಲಾಗುವುದು.

ಯಶವಂತ ಚೌಹಾಣ್‌, ಬಿಎಂಆರ್‌ಸಿಎಲ್‌ ಸಿಪಿಆರ್‌ಒ