ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬಿನ ಬಾಕಿ ಮತ್ತು ನ್ಯಾಯಯುತ ಬೆಲೆಗಾಗಿ ಪ್ರತಿಭಟಿಸುತ್ತಿದ್ದ ರೈತರ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಲಾಗಿದೆ. ಈ ಕೃತ್ಯಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ರೈತ ಸಂಘಟನೆಗಳು ಆರೋಪಿಸಿದ್ದು, ಘಟನೆಯಿಂದ ಜಮಖಂಡಿ ಮುಧೋಳ ಭಾಗದ ರೈತರ ನಡುವೆ ಆಕ್ರೋಶ ಭುಗಿಲೆದ್ದಿದೆ.

ಬಾಗಲಕೋಟೆ, ನ(. 13): ಜಿಲ್ಲೆಯ ಮುಧೋಳ ತಾಲೂಕಿನ ಸಮೀರವಾಡಿಯಲ್ಲಿ ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆಯು ರೈತ ಸಮುದಾಯದಲ್ಲಿ ಆತಂಕ ಮತ್ತು ಆಕ್ರೋಶವನ್ನು ಹುಟ್ಟಿಸಿದೆ. ಕಳೆದ 15 ದಿನಗಳಿಂದ ಕಬ್ಬಿನ ಬಾಕಿ ಪಾವತಿ ಮತ್ತು ನ್ಯಾಯಯುತ ಬೆಲೆಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ಈ ಕೃತ್ಯ ನಡೆದಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ರೈತ ಸಂಘಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ.

ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ನೇತೃತ್ವದ ತಂಡವು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಕೃತ್ಯವು ಸಂಪೂರ್ಣ ಖಂಡನೀಯ. ಇದು ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದೆ.

ರೈತರ ಪ್ರತಿಭಟನೆ ನಿರ್ಲಕ್ಷಿಸಿದ ಸರ್ಕಾರ:

ರೈತರು ಈಗಾಗಲೇ ನವೆಂಬರ್ 8ರಂದು ಸರ್ಕಾರ ನಿಗದಿಪಡಿಸಿದ ಕಬ್ಬು ಬೆಲೆಗೆ ಅಸಮ್ಮತಿ ಸೂಚಿಸಿ, ಮುಧೋಳ, ಹಾವೇರಿ ಮತ್ತು ಬೀದರ್‌ನಲ್ಲಿ ಪ್ರತಿಭಟನೆಯನ್ನು ಮುಂದುವರೆಸುತ್ತಿದ್ದಾರೆ. ಈ ಜಿಲ್ಲೆಯ ರೈತರು ಮತ್ತು ಕಾರ್ಖಾನೆಯವರನ್ನು ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ಸರ್ಕಾರದ ನೀತಿ, ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿದೆ ಎಂದು ನಾಗೇಂದ್ರರು ಆರೋಪಿಸಿದ್ದಾರೆ.

ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆ ಕಾವಲು ನಿಂತ ರೈತರು.

ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿನ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಬೆನ್ನಲ್ಲೇ ಇತ್ತ ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಯ ಬಳಿ ಟ್ರ್ಯಾಕ್ಟರ್ ಸುರಕ್ಷತೆಗಾಗಿ ಕಟ್ಟಿಗೆ ಕೋಲು ಹಿಡಿದು ರೈತರು ಕಾವಲು ನಿಂತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಇರುವ ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ರೈತರು ಟ್ರ್ಯಾಕ್ಟರ್‌ಗಳನ್ನು ರಕ್ಷಿಸಲು ನಿಂತಿದ್ದಾರೆ.

ಮುಧೋಳ ರೈತರ ವಿರುದ್ಧ ಜಮಖಂಡಿ ಭಾಗದ ರೈತರ ಆಕ್ರೋಶ:

ಸಂಗಮೇಶ್ ನಿರಾಣಿಯವರಿಗೆ ಸೇರಿದ ಈ ಕಾರ್ಖಾನೆಯ ಬಳಿ ಕಟ್ಟಿಗೆ ಕೋಲುಗಳನ್ನು ಹಿಡಿದು ನಿಂತ ಜಮಖಂಡಿ ಭಾಗದ ರೈತರು, ಮುಧೋಳದ ರೈತರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದವರು ಮನುಷ್ಯರಲ್ಲ! ಮುಧೋಳದ ರೈತರು ಸಾಯಿ ಪ್ರಿಯಾ ಕಾರ್ಖಾನೆ ಕಡೆ ಬರಬಾರದು. ನೀವೇನಾದರೂ ಬಂದರೆ ನಾವು ಸುಮ್ಮನಿರೋದಿಲ್ಲ. ಇದು ಎಚ್ಚರಿಕೆ ನೀಡಿದ್ದಾರೆ. ನೀವು ರೈತರ ಮಕ್ಕಳೇ ಆಗಿದ್ದರೆ ಜಿಲ್ಲಾ ಕಚೇರಿ (ಡಿಸಿ) ಹಾಗೂ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಬಾಕಿ ಪಾವತಿ ಮತ್ತು ಬೆಲೆ ಸಮಸ್ಯೆಕಳೆದ 15 ದಿನಗಳಿಂದ ರೈತರು ಕಬ್ಬಿನ ಬಾಕಿ ಪಾವತಿ ಮತ್ತು ನ್ಯಾಯಯುತ ಬೆಲೆಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ನವೆಂಬರ್ 8ರಂದು ಸರ್ಕಾರ ನಿಗದಿಪಡಿಸಿದ ಬೆಲೆಗೆ ಅಸಮ್ಮತಿ ಸೂಚಿಸಿದ್ದರಿಂದ, ಪ್ರತಿಭಟನೆಯು ತೀವ್ರಗೊಂಡಿದೆ. ಮುಧೋಳದ ಸಮೀರವಾಡಿಯಲ್ಲಿ ನಡೆದ ಈ ದಾಳಿಯು ರೈತರ ಸಂಘರ್ಷವನ್ನು ಹೊಸ ಹಂತಕ್ಕೆ ಕೊಂಡೊಯ್ದಿದ್ದು, ಪೊಲೀಸ್ ಇಲಾಖೆ ಘಟನೆಯ ಬಗ್ಗೆ ತನಿಖೆಗೆ ಮುಂದಾಗಿದೆ. ರೈತ ಸಂಘಗಳು ಸರ್ಕಾರವನ್ನು ಆರೋಪಿಸಿ, ತಕ್ಷಣ ಸಮಸ್ಯೆ ಪರಿಹಾರಕ್ಕಾಗಿ ರೈತ-ಕಾರ್ಖಾನೆ ಮಾಲೀಕರು-ಅಧಿಕಾರಿಗಳ ಸಭೆ ಕರೆ ನೀಡಿವೆ. ಈ ಘಟನೆಯಿಂದಾಗಿ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣವಿದ್ದು, ರೈತರ ಸುರಕ್ಷತೆಗಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ಟ್ ಮಾಡಲಾಗಿದೆ.