ಸ್ತ್ರೀಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಲಭ್ಯವಿದ್ದರೂ, ಶಾಲಾ ಮಕ್ಕಳಿಗೆ ಬಸ್ ಪಾಸ್ ಸಿಗದೆ ತೊಂದರೆಯಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಗ್ರಾಮ ಒನ್ ಕೇಂದ್ರಗಳಲ್ಲಿ ಪಾಸ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬಡ ಮಕ್ಕಳ ಶಿಕ್ಷಣಕ್ಕೆ ಹೊರೆಯಾಗಿದೆ.

ಕೇಶವ ಕುಲಕರ್ಣಿ

ಜಮಖಂಡಿ (ಜೂ.15): ಸರ್ಕಾರ ಒಂದೆಡೆ ಸ್ತ್ರೀ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಕಲ್ಪಿಸಿದ್ದರೆ, ಮತ್ತೊಂದೆಡೆ ಶಿಕ್ಷಣ ಕಲಿಯಲು ಮಕ್ಕಳು ಹಣಕೊಟ್ಟು ಟಿಕೆಟ್‌ ಪಡೆದು ಪ್ರಯಾಣಿಸುತ್ತಿರುವುದು ವಿಪರ್ಯಾಸ.

ಹೌದು, ಶಾಲೆಗಳು ಆರಂಭವಾಗಿ 15 ದಿನ ಕಳೆದರೂ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಬಸ್‌ಪಾಸ್‌ ಸಿಗದಿದ್ದರಿಂದ ಹಳ್ಳಿಗಳಿಂದ ಪಟ್ಟಣದ ಶಾಲೆಗಳಿಗೆ ಬರುವ ಮಕ್ಕಳು ಹಣ ಕೊಟ್ಟು ಟಿಕೆಟ್‌ ತೆಗೆಸಿ ನಿತ್ಯ ಶಾಲೆಗೆ ಹೋಗಿ ಬರುತ್ತಿದ್ದಾರೆ.

ಈ ಮುಂಚೆ ಬಸ್‌ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳ ಬಸ್‌ ಪಾಸ್‌ ವಿತರಿಸಲಾಗುತ್ತಿತ್ತು. ಆದರೆ ಈ ವರ್ಷ ತಾಲೂಕು ಕೇಂದ್ರದಲ್ಲಿನ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಪಾಸ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಸೇವಾ ಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆ ಉಂಟಾಗಿ ಬಸ್‌ ಪಾಸ್ ಸಿಗುತ್ತಿಲ್ಲ. ಪಾಸ್‌ ಪಡೆಯಲು ನಿತ್ಯ ಮಕ್ಕಳು ಸೇವಾ ಕೇಂದ್ರಗಳಿಗೆ ಅಲೆಯುತ್ತಿದ್ದು, ತಾಂತ್ರಿಕ ತೊಂದರೆ ನೆಪ ಹೇಳುತ್ತಿದ್ದಾರೆ. ಯಾಕೆ ಎಂದು ಪ್ರಶ್ನಿಸಿದರೆ ಸರ್ವರ್‌ ಸಮಸ್ಯೆ ಇದ್ದು, ಬೆಂಗಳೂರಿನಲ್ಲಿಯೇ ಸರಿಪಡಿಸಬೇಕು. ಅಲ್ಲಿಯವರೆಗೆ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂಬುದು ಶಾಲಾ ಮಕ್ಕಳ ಆರೋಪ.

ಬಿ.ಎಸ್‌. ಯಡಿಯೂರಪ್ಪ ಸರ್ಕಾರದ ಕಾಲದಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಆಗ ಹಳೆಯ ಪಾಸ್‌ ಬಳಸಲು ಅವಕಾಶ ಕಲ್ಪಿಸಲಾಗಿತ್ತು. ಸದ್ಯ ಕಾಲೇಜು ವಿದ್ಯಾರ್ಥಿಗಳಿಗೆ ಪಾಸ್‌ ಸಿಗುತ್ತಿವೆ. ಆದರೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ. ವಿದ್ಯಾರ್ಥಿನಿಯರಿಗೆ ಸ್ತ್ರೀಶಕ್ತಿ ಯೋಜನೆಯಡಿ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶವಿದೆ. ಆದರೆ, ಬಾಲಕರಿಗೆ ತೊಂದರೆ ಆಗಿದೆ. ಮೊದಲೇ ಬಸ್ ಪ್ರಯಾಣ ದರ ಹೆಚ್ಚಾಗಿದ್ದು, ಗ್ರಾಮೀಣ ಭಾಗದ ಪಾಲಕರಿಗೆ ಹೊರೆಯಾಗಿದೆ.

ತಾಲೂಕಿನಲ್ಲಿ ಸುಮಾರು 15 ರಿಂದ 18 ಸಾವಿರ ಗ್ರಾಮೀಣ ವಿದ್ಯಾರ್ಥಿಗಳು ಪ್ರತಿನಿತ್ಯ ಬಸ್‌ ಮೂಲಕ ಶಾಲೆಗೆ ಹೋಗಿಬರುತ್ತಾರೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಬಾಲಕರಿದ್ದು ನಿತ್ಯ ಟಿಕೆಟ್‌ ತೆಗೆಸಿ ಶಾಲೆಗೆ ಹೋಗಿ ಬರುತ್ತಿದ್ದಾರೆ.. ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳು ಹೇಗೋ ಮ್ಯಾನೇಜ್‌ ಮಾಡುತ್ತಾರೆ. ನಿತ್ಯ ದುಡಿದು ತಿನ್ನುವ ಬಡವರ ಮಕ್ಕಳು ಹಣ ಕೊಟ್ಟು ಪ್ರಯಾಣಿಸುವುದು ಸಮಸ್ಯೆಗೆ ಕಾರಣವಾಗಿದೆ. ಇದರಿಂದ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ.

ತಾಂತ್ರಿಕ ಸಮಸ್ಯೆ ಪರಿಹಾರವಾಗುವವರೆಗೆ ಹಳೆಯ ಪಾಸ್‌ಗಳ ಚಲಾವಣೆಗೆ ಅವಕಾಶ ನೀಡಬೇಕು. ಇಲ್ಲವೆ ಆಧಾರ್‌ ಕಾರ್ಡ್‌ ಹಾಗೂ ಶಾಲಾ ದಾಖಲಾತಿ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ.