ಬಾಗಲಕೋಟೆ, (ಡಿ.24) : ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಕೋವಿಡ್ ರೂಪಾಂತರ ಸೋಂಕು ಇದೀಗ ಬಾಗಲಕೋಟೆಗೂ ಕಾಲಿಟ್ಟಿದ್ದು, ಮತ್ತಷ್ಟು ಆತಂಕ ಶುರುವಾಗಿದೆ.

ಲಂಡನ್ ನಿಂದ ಬಂದ ಈ ಇಬ್ಬರು ಮಹಿಳೆಯರಿಗೆ ಕೋವಿಡ್ ಸೋಂಕು ನೆಗೆಟಿವ್ ಬಂದಿದೆ. ಆದರೆ ಮಹಿಳೆಯರ ಮನೆಯಲ್ಲಿ ಇತರ ಸದಸ್ಯರಿಗೆ ಸೋಂಕು ದೃಢಪಟ್ಟಿದ್ದು, ಆತಂಕ ಹೆಚ್ಚಾಗಲು ಕಾರಣವಾಗಿದೆ.

ಡಿಸೆಂಬರ್ 10 ರಂದು ಅಮೆರಿಕದಿಂದ ಲಂಡನ್ ಮಾರ್ಗವಾಗಿ ಇಳಕಲ್ ನಗರಕ್ಕೆ ಮಹಿಳೆ ಬಂದಿದ್ದು, ಕುಟುಂಬದವರ ಜೊತೆ ವಾಸವಾಗಿದ್ದರು. ಸದ್ಯ ಆಕೆ ವಾಸವಿದ್ದ ಮನೆಯ ಇನ್ನೋರ್ವ ಮಹಿಳೆಗೆ ಕೋವಿಡ್ ಸೋಂಕು ಕಂಡುಬಂದಿದೆ.

ನೈಟ್‌ ಕರ್ಫ್ಯೂನಿಂದ ಕೊರೋನಾ ನಿಯಂತ್ರಣಕ್ಕೆ ಬರುತ್ತೆ ಎಂದ ಆರೋಗ್ಯ ಸಚಿವ

ಲಂಡನ್ ನಿಂದ ಜಮಖಂಡಿ ತಾಲೂಕಿನ ತೊದಲಬಾಗಿಯ ಗಂಡನ ಮನೆಗೆ ಬಂದ 35 ವರ್ಷದ ಮಹಿಳೆಗೆ ಕೋವಿಡ್ ನೆಗೆಟಿವ್ ಆಗಿದ್ದು, ಈಕೆ ಲಂಡನ್ ನಿಂದ ಡಿಸೆಂಬರ್ 15 ರಂದು ಜಮಖಂಡಿಗೆ ಬಂದು 21 ರಂದು ಬೆಳಗಾವಿಗೆ ತೆರಳಿದ್ದರು ಎನ್ನಲಾಗಿದೆ. ಆದರೆ ಇದೀಗ ಈ ಮಹಿಳೆಯ 70 ವರ್ಷದ ಅತ್ತೆಗೆ ಈಗ ಕೋವಿಡ್ ಪಾಸಿಟಿವ್ ಬಂದಿದೆ.

ಈ ಇಬ್ಬರು ಮಹಿಳೆಯರ ಕುಟುಂಬದ ತಲಾ ಒಬ್ಬ ಮಹಿಳೆಗೆ ಸೋಂಕು ಖಚಿತವಾಗಿದೆ. ಬುಧವಾರ ರಾತ್ರಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕರೆತಂದ ಮಹಿಳೆಗೆ ಸೋಂಕು ಇರುವುದು ಖಚಿತವಾಗಿದೆ.

ಇಂಗ್ಲೆಂಡ್ ನಿಂದ ಇಳಕಲ್ ಗೆ ಬಂದಿದ್ದ ಮಹಿಳೆಗೆ ಕೋವಿಡ್ ನೆಗೆಟಿವ್ ಬಂದಿದ್ದು, ಆಕೆಯ ಸಹೋದರಿಗೆ ಸೋಂಕಿನ ಶಂಕೆ ಬಂದ ಹಿನ್ನಲೆ ನಿನ್ನೆ ಇಳಕಲ್ ನಿಂದ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಲಾಗಿದ್ದು 28 ವರ್ಷದ ಮಹಿಳೆಗೆ ಕೋವಿಡ್ ದೃಢವಾಗಿದೆ.

ಇದು ರೂಪಾಂತರ ಕೋವಿಡ್ ಇರಬಹುದೆ ಅಥವಾ ಮೊದಲಿನ ರೂಪದ ಕೋವಿಡ್ ಆಗಿರಬಹುದೇ ಎನ್ನುವುದರ ಬಗ್ಗೆ ಎಂಬ ಬಗ್ಗೆ ವೈದ್ಯರು ಪರಿಶೀಲಿಸಲು ಮುಂದಾಗಿದ್ದಾರೆ. ಪಾಸಿಟಿವ್ ಬಂದ ಇಬ್ಬರ ಗಂಟಲು ದ್ರವ ವನ್ನು ನಿಮ್ಹಾನ್ಸ್ ಗೆ ಇಂದು ರವಾನೆ ಮಾಡಲಾಗಿದೆ ಎಂದು ಬಾಗಲಕೋಟೆ ಡಿ ಎಚ್ ಒ ಡಾ.ಅನಂತ ದೇಸಾಯಿ ತಿಳಿಸಿದ್ದಾರೆ.