ಬಾಗಲಕೋಟೆಯ ಹುನಗುಂದ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದೆ. ಶಾಸಕ ವಿಜಯಾನಂದ ಕಾಶಪ್ಪನವರ್ ಕುಮ್ಮಕ್ಕಿನಿಂದ ಅಪ್ರಾಪ್ತರ ಹೆಸರನ್ನೂ ಸೇರಿಸಲಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಬಾಗಲಕೋಟೆ (ಡಿ.31): ಬಾಗಲಕೋಟೆ ಜಿಲ್ಲೆಯ ಹುನಗುಂದ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಭಾರಿ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ಪಕ್ಷವು ವ್ಯವಸ್ಥಿತವಾಗಿ ಮತಗಳನ್ನು ಕಳ್ಳತನ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಗಂಭೀರವಾಗಿ ದೂಷಿಸಿದ್ದಾರೆ.

ಬಿಜೆಪಿಯಿಂದ ಬೃಹತ್ ಪ್ರತಿಭಟನೆ, ಡಿಸಿಗೆ ಮನವಿ

ಮಾಜಿ ಶಾಸಕರಾದ ವೀರಣ್ಣ ಚರಂತಿಮಠ ಮತ್ತು ದೊಡ್ಡನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ನವನಗರದ ಬಸ್ ನಿಲ್ದಾಣ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಹುನಗುಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಕಾನೂನುಬಾಹಿರವಾಗಿ ಹೆಸರುಗಳನ್ನು ಸೇರಿಸಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ತಂಡವು, ಸೂಕ್ತ ದಾಖಲೆಗಳ ಸಮೇತ ಜಿಲ್ಲಾಧಿಕಾರಿ ಜಿ. ಸಂಗಪ್ಪ ಅವರಿಗೆ ತನಿಖೆ ನಡೆಸುವಂತೆ ಮನವಿ ಪತ್ರ ಸಲ್ಲಿಸಿತು.

18 ವರ್ಷದೊಳಗಿನವರ ಸೇರ್ಪಡೆ: ಗಂಭೀರ ಅಕ್ರಮದ ಆರೋಪ

ಹುನಗುಂದ ಮತಕ್ಷೇತ್ರದ ಪ್ರತಿ ಬೂತ್‌ನಲ್ಲಿ ಅಕ್ರಮವಾಗಿ ಸುಮಾರು 50 ಜನರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದರಲ್ಲಿ ಮುಖ್ಯವಾಗಿ 18 ವರ್ಷ ತುಂಬದ ಅಪ್ರಾಪ್ತರನ್ನು ಕೂಡ ಮತದಾರರ ಪಟ್ಟಿಗೆ ಸೇರಿಸಿರುವುದು ಪ್ರಜಾಪ್ರಭುತ್ವದ ಕಲೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಕಿಡಿ

ಪ್ರತಿಭಟನೆಯ ಸಂದರ್ಭದಲ್ಲಿ ಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಶಪ್ಪನವರ ಅವರ ಕುಮ್ಮಕ್ಕಿನಿಂದಲೇ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕೂಡಲೇ ಇಂತಹ ಅಕ್ರಮಗಳನ್ನು ತಡೆಯಬೇಕೆಂದು ಆಗ್ರಹಿಸಿದರು.

ಕಾಶಪ್ಪನವರ ಟೀಕೆಗೆ ದೊಡ್ಡನಗೌಡ ಪಾಟೀಲ್ ತಿರುಗೇಟು

ದೊಡ್ಡನಗೌಡ ಪಾಟೀಲ್ ಅವರು ಹುನಗುಂದ ಕ್ಷೇತ್ರದವರೇ ಅಲ್ಲ ಎಂಬ ಶಾಸಕ ಕಾಶಪ್ಪನವರ ಹೇಳಿಕೆಗೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. 'ಕಾಶಪ್ಪನವರ ಕುಟುಂಬದ ವಿರುದ್ಧವೇ ನಾನು ಐದು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಅದರಲ್ಲಿ ಮೂರು ಬಾರಿ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ. ಜನರ ಪ್ರೀತಿ ಮತ್ತು ವಿಶ್ವಾಸದಿಂದ ನಾನು ಶಾಸಕನಾಗಿದ್ದೇನೆ ಹೊರತು ಅವರ ದಯೆಯಿಂದಲ್ಲ ಎಂದು ತಿರುಗೇಟು ನೀಡಿದರು.

'ಕೋತಿಗೆ ಹೆಂಡ ಕುಡಿಸಿದಂತೆ: ಶಾಸಕರ ವಿರುದ್ಧ ದೊಡ್ಡನಗೌಡ ವಾಗ್ದಾಳಿ

ಶಾಸಕ ವಿಜಯಾನಂದ ಕಾಶಪ್ಪನವರ ವರ್ತನೆಯನ್ನು ಕಟುವಾಗಿ ಟೀಕಿಸಿದ ದೊಡ್ಡನಗೌಡ ಪಾಟೀಲ್, 'ಕಾಶಪ್ಪನವರ ತಲೆಗೆ ಹಣ ಮತ್ತು ಅಧಿಕಾರದ ಮದವೇರಿದೆ. ಹಣ, ಅಧಿಕಾರ ಮತ್ತು ವಯಸ್ಸು ಒಟ್ಟಿಗೆ ಸೇರಿದರೆ ಏನಾಗುತ್ತದೆ ಎಂಬುದಕ್ಕೆ ಅವರೇ ಸಾಕ್ಷಿ. ಇವರ ವರ್ತನೆ ಹೇಗಿದೆಯೆಂದರೆ ಕೋತಿಗೆ ಹೆಂಡ ಕುಡಿಸಿ ಚೇಳು ಕಡಿಸಿದಂತಾಗಿದೆ' ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ಅಧಿಕಾರದ ಅಹಂನಿಂದ ಶಾಸಕರು ಕ್ಷೇತ್ರದ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.